ಬೆಂಗಳೂರು, ಆಗಸ್ಟ್ 28: ಬಂದರು, ಮುಜರಾಯಿ, ಮೀನುಗಾರಿಕಾ ಸಚಿವರಾಗಿ ಅಧಿಕಾರ ವಹಿಸಿಕೊಂಡಿರುವ ಕೋಟಾ ಶ್ರೀನಿವಾಸ್ ಪೂಜಾರಿ ಇಂದು ವಿಧಾನಸೌಧದ ಮೂರನೇ ಮಹಡಿಯಲ್ಲಿರುವ ತಮ್ಮ ಕಚೇರಿಯಲ್ಲಿ ಪೂಜೆ ಸಲ್ಲಿಸುವ ಮೂಲಕ ಪ್ರವೇಶ ಮಾಡಿದರು. ನಂತರ ಮಾತನಾಡಿದ ಅವರು ಮೂರು ಇಲಾಖೆಗಳು ನನ್ನ ಸುಪರ್ಧಿಯಲ್ಲಿದೆ. ಈ ನಿಟ್ಟಿನಲ್ಲಿ ಬಂದರು, ಮುಜರಾಯಿ, ಮೀನುಗಾರಿಕಾ ಅಧಿಕಾರಿಗಳ ಜೊತೆ ಸಭೆ ನಡೆಸಿದ್ದೇನೆ.
ಸೀಮೆಎಣ್ಣೆ, ಡೀಸಲ್ ಸಬ್ಸಿಡಿ ಬೇಡಿಕೆ ಇದೆ. ಮಹಿಳಾ ಮೀನುಗಾರರ ಸಾಲಮನ್ನಾ ವಿಚಾರವಾಗಿ ನಿರ್ಧಾರವಾಗಬೇಕಿದೆ. ಮುಜರಾಯಿ ಇಲಾಖೆಯಲ್ಲಿ ಹಲವಾರು ಸಮಸ್ಯೆಗಳಿವೆ. ರಾಜ್ಯದಲ್ಲಿ 25 ಸಾವಿರ ದೇಗುಲಗಳಿವೆ. ದೇಗುಲಗಳ ಅರ್ಚಕರಿಗೆ 48 ಲಕ್ಷ ಸಸ್ತಿಕ್ ನೀಡಲಾಗುತ್ತಿದೆ. ಇದು ಅವರಿಗೆ ತಲುಪುತ್ತಿದೆಯೋ ಇಲ್ಲವೋ ನೋಡಬೇಕು. ಅದು ಸಂಬಂಧಿಸಿದವರಿಗೆ ತಲುಪುವಂತೆ ಮಾಡಬೇಕು. ಈ ನಿಟ್ಟಿನಲ್ಲಿ ಕ್ರಮ ತೆಗೆದುಕೊಳ್ಳುತ್ತೇನೆ ಎಂಬುದಾಗಿ ಸಚಿವ ಕೋಟಾ ಶ್ರೀನಿವಾಸ್ ಪೂಜಾರಿ ವಿಧಾನಸೌಧದಲ್ಲಿಂದು ಹೇಳಿಕೆ ನೀಡಿದ್ದಾರೆ.