“ಅವರು ನನ್ನ ಜನ್ಮದಿನದಂದು ಯಾವತ್ತಿಗೂ ಮರೆಯದೆ ನನ್ನಿಷ್ಟದ ಚಾಕೋಲೇಟ್ ಕೇಕ್ ಹಿಡಿದು ಬರುತ್ತಿದ್ದುದನ್ನು ಹೇಗೆ ಮರೆಯಲಿ..? ಆಕೆಯ ಅಕಾಲಿಕ ಮರಣ ನನಗೆ ವ್ಯಕ್ತಪಡಿಸಲಾರದಷ್ಟು ಆಘಾತವನ್ನು ನೀಡಿದೆ. ಆಕೆಯನ್ನು ನಾನು ಬಹಳ ಮಿಸ್ ಮಾಡಿಕೊಳ್ಳುತ್ತೇನೆ” ಎಂದು ತಮ್ಮ ಆಪ್ತ ಒಡನಾಡಿ ಸುಷ್ಮಾ ಸ್ವರಾಜ್ ಅವರನ್ನು ನೆನೆದು ಭಾವುಕರಾಗಿದ್ದಾರೆ ಬಿಜೆಪಿ ಹಿರಿಯ ನಾಯಕ ಎಲ್. ಕೆ. ಅಡ್ವಾಣಿ. ಚಿತ್ರಗಳಲ್ಲಿ ಸುಷ್ಮಾ ಸ್ವರಾಜ್ ಅಂತಿಮ ದರ್ಶನ “ನನ್ನ ಆತ್ಮೀಯ ಸಹೋದ್ಯೋಗಿಗಳಲ್ಲಿ ಸುಷ್ಮಾ ಪ್ರಮುಖರು. ಆಕೆ ಬಿಜೆಪಿಯಲ್ಲಿ ಕೆಲಸ ಆರಂಭಿಸಿದಾಗಿನಿಂದಲೂ ನಾನು ಆಕೆಯನ್ನು ಬಲ್ಲೆ. ನಾನು ಬಿಜೆಪಿ ಅಧ್ಯಕ್ಷರಾಗಿದ್ದಾಗ ಅವರು ಬಿಜೆಪಿಯ ಯುವ ನಾಯಕಿಯಾಗಿ ನಮ್ಮ ತಂಡವನ್ನು ಸೇರಿಕೊಂಡರು” ಎಂದು ಹಳೆಯ ದಿನಗಳನ್ನು ಮೆಲುಕು ಹಾಕಿದರು ಮಾಜಿ ಉಪಪ್ರಧಾನಿ ಅಡ್ವಾಣಿ.