ಭಾರತ ವೇಗವಾಗಿ ಬದಲಾಗುವ ಜತೆಗೆ ಅಭಿವೃದ್ಧಿಯಾಗುತ್ತಿದೆ. ಯುವಕರೇ ಭಾರತದ ಭವಿಷ್ಯವಾಗಿದ್ದು, ಹೀಗಾಗಿ ದೇಶವನ್ನು ಕಟ್ಟುವಲ್ಲಿ ಯುವಕರು ಇನ್ನಷ್ಟು ತೊಡಗಿಸಿಕೊಳ್ಳಬೇಕಿದೆ. ಇದಕ್ಕಾಗಿ ಯುವಕರು ಕೌಶಲ್ಯಾಭಿವೃದ್ಧಿಗೆ ಹೆಚ್ಚಿನ ಒತ್ತು ನೀಡಬೇಕಿದೆ ಎಂದು ಪ್ರಧಾನ ಮಂತ್ರಿ ನರೇಂದ್ರ ಮೋದಿ ಹೇಳಿದರು.
ಕಾರ್ಗಿಲ್ ವಿಜಯ್ ದಿವಸ್ ಹಿನ್ನೆಲೆಯಲ್ಲಿ ಭಾನುವಾರ ನಡೆದ ಮನ್ ಕಿ ಬಾತ್ ಮೂಲಕ ದೇಶವನ್ನು ಉದ್ದೇಶಿಸಿ ಮಾತನಾಡಿದ ಅವರು, ದೇಶದ ಜನತೆ ಸ್ವಾವಲಂಬಿಗಳಾಗಬೇಕಾದ ಅನಿವಾರ್ಯತೆ ಇದೆ. ಸ್ವಾವಲಂಬಿ ಭಾರತ ಕಟ್ಟಲು ಇಡೀ ದೇಶ ಒಂದಾಗಬೇಕು. ಸ್ವಾವಲಂಬಿ ಬದುಕಿಗೆ ಲಡಾಕ್ ಜನರು ಮಾದರಿ, ಇಲ್ಲಿನ ಜನರು ಸ್ವಾವಲಂಬಿ ಬದುಕು ನಡೆಸುತ್ತಿದ್ದು, ಲಡಾಕ್‍ನಲ್ಲಿ ಬದುಕು ಸಾಗಿಸಲು ಸ್ವಾವಲಂಬಿ ಬದುಕು ಅನಿವಾರ್ಯವಾಗಿದೆ. ಜತೆಗೆ ದೇಶದಲ್ಲಿ ಉತ್ಪಾದನೆ ಪ್ರಮಾಣ ಹೆಚ್ಚಾಗಬೇಕಿದ್ದು, ನಮಗೆ ಬೇಕಾದ ವಸ್ತುಗಳನ್ನು ನಾವೇ ತಯಾರಿಸಿಕೊಳ್ಳೋಣ ಎಂದರು.
ಇದೇ ವೇಳೆ ಕೊರೊನಾ ಸೋಂಕಿನ ಬಗ್ಗೆ ಮಾತನಾಡಿದ ಪ್ರಧಾನಿ ಮೋದಿ, ಇಡೀ ದೇಶ ಕೊರೊನಾ ವಿರುದ್ಧ ಹೋರಾಡುತ್ತಿದೆ
ಕೊರೊನಾ ನಿಯಂತ್ರಿಸುವಲ್ಲಿ ದೇಶ ಯಶಸ್ವಿಯಾಗಿದೆ. ಆದರೆ
ಕೊರೊನಾ ವಿರುದ್ಧದ ಅಭಿಯಾನ ಮುಂದುವರಿಸೋಣ. ಸರ್ಕಾರದ ನಿಯಮಗಳನ್ನು ಕಟ್ಟುನಿಟ್ಟಾಗಿ ಪಾಲಿಸೋಣ. ಆ ಮೂಲಕ ಕೊರೊನಾ ಹರಡದಂತೆ ಮುನ್ನೆಚ್ಚರಿಕೆ ಕ್ರಮಗಳನ್ನು ಅನುಸರಿಸೋಣ. ಇಂತಹ ಸಂಕಷ್ಟ ಸಮಯದಲ್ಲಿ
ಪರಸ್ಪರ ನೆರವಾಗುವ ಮೂಲಕ ಸಂಕಷ್ಟ ಎದುರಿಸೋಣ. ಹಲವು ಸಂಘಟನೆಗಳು, ಸಂಘ ಸಂಸ್ಥೆಗಳು ಸಾಮಾಜಿಕ ಕಾರ್ಯದಲ್ಲಿ ತೊಡಗುವ ಮೂಲಕ ಸಂಕಷ್ಟ ಸಮಯದಲ್ಲಿ ಬಡವರಿಗೆ ನೆರವಾಗುತ್ತಿವೆ ಎಂದ ಅವರು, ಮಾಸ್ಕ್ ಧರಿಸಿ, ಅಂತರ ಕಾಯ್ದುಕೊಳ್ಳಿ, ಕೈ ತೊಳೆಯಿರಿ. ನಿರಂತರವಾಗಿ ಮಾಸ್ಕ್ ಧರಿಸೋದು ಕಷ್ಟವಾಗುತ್ತದೆ. ಆದರೆ ಒಂದು ಬಾರಿ ವೈದ್ಯರನ್ನು ನೆನೆಸಿಕೊಳ್ಳಿ,ವೈದ್ಯರು ಗಂಟೆಗಟ್ಟಲೆ ಮಾಸ್ಕ್ ಧರಿಸಿಕೊಂಡು ಚಿಕಿತ್ಸೆ ನೀಡುತ್ತಿದ್ದಾರೆ ಎಂದು ಕೊರೊನಾ ವಾರಿಯರ್ಸ್‍ಗೆ ಪ್ರಧಾನಿ ಮೋದಿ ಕೃತಜ್ಞತೆ ಸಲ್ಲಿಸಿದರು.
ಇದಕ್ಕೂ ಮುನ್ನ ಕಾರ್ಗಿಲ್ ವಿಜಯ್ ದಿವಸ್ ಬಗ್ಗೆ ಮಾತನಾಡಿದ ನರೇಂದ್ರ ಮೋದಿ, ಇಡೀ ದೇಶ ಕಾರ್ಗಿಲ್ ವಿಜಯ ದಿವಸ್ ಸಂಭ್ರಮಿಸುತ್ತಿದೆ. ನಮ್ಮ ವೀರ ಯೋಧರು ಪಾಕಿಸ್ತಾನವನ್ನು ಧ್ವಂಸ ಮಾಡಿದ್ದರು. ಭಾರತ ಕಾರ್ಗಿಲ್ ಯುದ್ದ ಗೆದ್ದು ತನ್ನ ತಾಕತ್ತು ತೋರಿಸಿತ್ತು. ಈ ಘಟನೆಗೆ ಇಡೀ ವಿಶ್ವವೇ ಸಾಕ್ಷಿಯಾಗಿತ್ತು. ಅಲ್ಲದೇ ಕಾರ್ಗಿಲ್ ಯುದ್ಧ ಹಲವು ಪಾಠಗಳನ್ನು ಕಲಿಸಿದ್ದು, ನಿರ್ಧಾರಗಳನ್ನು ತೆಗೆದುಕೊಳ್ಳುವ ಬಗ್ಗೆ ಹಲವು ಪಾಠ ಕಲಿಸಿದೆ.ಭಾರತ ಎಂದಿಗೂ ಶಾಂತಿ ಬಯಸುವ ರಾಷ್ಟ್ರವಾಗಿದೆ. ದೇಶದ ಯೋಧರ ಹೋರಾಟ, ಬಲಿದಾನವನ್ನು ಎಂದಿಗೂ ಮರೆಯಬಾರದು. ವೀರ ಯೋಧರನ್ನು ದೇಶಕ್ಕೆ ನೀಡಿದ ಎಲ್ಲ ತಾಯಂದಿರಿಗೂ ನಮನ ಸಲ್ಲಿಸೋಣ ಎಂದು ಕಾರ್ಗಿಲ್ ಯುದ್ಧದಲ್ಲಿ ಹುತಾತ್ಮ ಯೋಧರಿಗೆ ನಮನ ಸಲ್ಲಿಸಿದರು.