ನವದೆಹಲಿ, ಅ. 23: ದೆಹಲಿಯಲ್ಲಿ ವಾಯುಮಾಲಿನ್ಯ ದಿನೇ ದಿನೆ ಹೆಚ್ಚಾಗುತ್ತಲೇ ಇದೆ. ಕೊರೊನಾ ಲಾಕ್‌ಡೌನ್ ಸಂದರ್ಭದಲ್ಲಿ ವಾಹನಗಳ ಸಂಚಾರ ಕಡಿಮೆಯಾಗಿದ್ದ ಕಾರಣ ವಾಯುಮಾಲಿನ್ಯ ತುಂಬಾ ಕಡಿಮೆ ಇತ್ತು. ಆದರೆ ಲಾಕ್‌ಡೌನ್ ಸಡಿಲಗೊಂಡಾಕ್ಷಣ ಮತ್ತೆ ವಾಯುಮಾಲಿನ್ಯ ಚಳಿಗಾಲದ ಆರಂಭದಲ್ಲಿಯೇ ವಿಪರೀತವಾಗುತ್ತಿದ್ದು, ಗಾಳಿಯ ಗುಣಮಟ್ಟ ಮತ್ತಷ್ಟು ಕ್ಷೀಣಿಸುತ್ತಿದೆ.
ಗುರುವಾರ 302ರಷ್ಟಿದ್ದ ಗಾಳಿ ಗುಣಮಟ್ಟ ಸೂಚ್ಯಂಕ ಶುಕ್ರವಾರಕ್ಕೆ 354ಕ್ಕೆ ಏರಿಕೆಯಾಗಿದೆ. ಭೂ ವಿಜ್ಞಾನ ಸಚಿವಾಲಯದ, ಗಾಳಿ ಗುಣಮಟ್ಟ ಉಸ್ತುವಾರಿ ವ್ಯವಸ್ಥೆಯ ಗಾಳಿ ಗುಣಮಟ್ಟ ಮತ್ತು ಹವಾಮಾನ ಮುನ್ಸೂಚನೆ ಮತ್ತು ಸಂಶೋಧನಾ ಕೇಂದ್ರ ಪ್ರಕಾರ ದೆಹಲಿ ಎಕ್ಯೂಐ ಸೂಚ್ಯಂಕದಲ್ಲಿ ಕಳಪೆ ವಿಭಾಗದಲ್ಲಿದೆ.
ಕೇಂದ್ರ ಮಾಲಿನ್ಯ ನಿಯಂತ್ರಣ ಮಂಡಳಿ (ಸಿಪಿಸಿಬಿ) ಮತ್ತು ಇತರ ಸಂಸ್ಥೆಗಳು ಗುರುವಾರ ಗಾಳಿಯ ಗುಣಮಟ್ಟದಲ್ಲಿ ಸುಧಾರಣೆಯ ಮುನ್ಸೂಚನೆ ನೀಡಿದ್ದರೂ, ಎಕ್ಯೂಐ ಬುಧವಾರದಂತೆಯೇ ಅದೇ ವಿಭಾಗದಲ್ಲಿ ಉಳಿದಿದೆ. ಸಿಪಿಸಿಬಿ ಪ್ರಕಾರ ದೆಹಲಿ ವಾಯು ಗುಣಮಟ್ಟದ ಸೂಚ್ಯಂಕ (ಎಕ್ಯೂಐ) ಬುಧವಾರ 256 ಎಂದು ದಾಖಲಿಸಿದೆ.
ನಗರದ 34 ಮಾನಿಟರಿಂಗ್ ಕೇಂದ್ರಗಳಿಂದ ಸಂಗ್ರಹಿಸಿದ ದತ್ತಾಂಶವನ್ನು ಆಧರಿಸಿ ಅಂಕಿಅಂಶಗಳನ್ನು ನೀಡಲಾಗಿದೆ. ದೆಹಲಿ ಪ್ರದೇಶದಲ್ಲಿ ಶಾಂತ ಮೇಲ್ಮೈ ಗಾಳಿಯ ಪರಿಸ್ಥಿತಿಗಳು ಚಾಲ್ತಿಯಲ್ಲಿವೆ ಎಂದು ಭೂ ವಿಜ್ಞಾನ ಸಚಿವಾಲಯದ ವಾಯು ಗುಣಮಟ್ಟದ ಮಾನಿಟರ್ ಸಫಾರ್ ಹೇಳಿದೆ. ಅಕ್ಟೋಬರ್ 23 ಮತ್ತು 24ರಂದು ಗಾಳಿಯ ಗುಣಮಟ್ಟವು ಕಳಪೆಯಿಂದ ತುಂಬಾ ಕಳಪೆ ಆಗಿರುತ್ತದೆ ಎಂದು ಹೇಳಿದೆ.
ದೆಹಲಿ ಸರ್ಕಾರವು ತನ್ನ ‘ರೆಡ್ ಲೈಟ್ ಆನ್, ಗಾಡಿ ಆಫ್’ ಮಾಲಿನ್ಯ ವಿರೋಧಿ ಅಭಿಯಾನವನ್ನು ಪ್ರಾರಂಭಿಸಿದ್ದು, ಇದಕ್ಕಾಗಿ ನಗರದಾದ್ಯಂತ 100 ಟ್ರಾಫಿಕ್ ಸಿಗ್ನಲ್‌ಗಳಲ್ಲಿ 2,500 ಪರಿಸರ ಮಾರ್ಷಲ್‌ಗಳನ್ನು ನಿಯೋಜಿಸಿದೆ ಮತ್ತು ಜಾಗೃತಿ ಮೂಡಿಸಲು ಮತ್ತು ವಾಹನ ಮಾಲಿನ್ಯವನ್ನು ನಿಗ್ರಹಿಸಲಿದೆ.
ದೆಹಲಿಯ 10 ಮಾನಿಟರಿಂಗ್ ಕೇಂದ್ರಗಳು ಅತ್ಯಂತ ಕಳಪೆ ವಾಯು ಗುಣಮಟ್ಟವನ್ನು ದಾಖಲಿಸಿವೆ ಎಂದು ಎಕ್ಯೂಐ ಮಾನಿಟರಿಂಗ್ ಮೊಬೈಲ್ ಅಪ್ಲಿಕೇಶನ್ SAFAR ಹೇಳಿದೆ. ಮುಂಡ್ಕಾ 365, ವಜೀರ್‌ಪುರ 352, ಆನಂದ್ ವಿಹಾರ್ 306, ನರೇಲಾ 358, ಬವಾನಾ 320, ರೋಹಿಣಿ 342, ದ್ವಾರಕಾ ಸೆಕ್ಟರ್ 332, ವಿವೇಕ್ ವಿಹಾರ್ 313 ಮತ್ತು ಜಹಾಂಗೀರ್‌ಪುರಿ 310 ಎಂದು ಎಕ್ಯೂಐ ತಿಳಿಸಿದೆ.