ಈರುಳ್ಳಿಯದಾಯ್ತುಈಗ ಮೊಟ್ಟೆಯ ದರವೂ ಏರಿಕೆಯಾಗಿದೆ ಸ್ವಾಮೀ…

ಬೆಂಗಳೂರು,ಡಿ.16: ಪ್ರತಿ ವರ್ಷವೂ ಡಿಸೆಂಬರ್‌ – ಜನವರಿ ತಿಂಗಳು ಬಂದರೆ ಸಾಕು ಮೊಟ್ಟೆ ದರ ಏರಿಕೆಯಾಗುತ್ತದೆ..ಒಂದೆಡೆ ಕ್ರಿಸ್ ಮಸ್ ಹಬ್ಬ, ಮತ್ತೊಂದೆಡೆ ಚಳಿಗಾಲದ ಉಪಯುಕ್ತ ಆಹಾರ ಮೊಟ್ಟೆಯಾಗಿರುವುದರಿಂದಲೂ ಮೊಟ್ಟೆಯ ಬೇಡಿಕೆ ಹೆಚ್ಚಿದೆ, ದರವೂ ಏರಿಕೆ ಕಂಡಿದೆ.

ಹೌದು..ಕ್ರಿಸ್ ಮಸ್ ಹಬ್ಬಕ್ಕೆ ದಿನಗಣನೆ ಶುರುವಾಗಿದ್ದು ಎಲ್ಲೆಡೆ ವಿಭಿನ್ನ ಬಗೆಯ ಕೇಕ್ ಗಳ ತಯಾರಿ ಬಲು ಜೋರಾಗಿದೆ. ಇದರ ಪರಿಣಾಮ ಎಲ್ಲೆಡೆ ಮೊಟ್ಟೆಯ ಬೆಲೆ ಏರಿಕೆ ಕಂಡಿದ್ದು,ಮೊಟ್ಟೆ ಪ್ರಿಯರ ಚಿಂತೆಗೆ ಕಾರಣವಾಗಿದೆ. ಮತ್ತೊಂದೆಡೆ ಚಳಿಗಾಲದಲ್ಲಿ ಮೊಟ್ಟೆ ತಿನ್ನುವವರ ಸಂಖ್ಯೆ ಹೆಚ್ಚು. ಈ ಕಾಲದಲ್ಲಿ ದೇಹವನ್ನು ಬೆಚ್ಚಿಗಿಡುವುದರ ಜತೆಗೆ ದೇಹದ ಇಮ್ಯುನಿಟಿ ಶಕ್ತಿ ಚೆನ್ನಾಗಿರಬೇಕು ಎಂಬ ಉದ್ದೇಶದಿಂದ ಮೊಟ್ಟೆಯನ್ನು ಹೆಚ್ಚಾಗಿ ಬಳಸುತ್ತಾರೆ. ಇನ್ನು ಕೆಲವರು ಚಳಿಗಾಲದಲ್ಲಿ ಬಾಯಿಗೆ ರುಚಿಸುವಂತಹ ತಿಂಡಿಗಳು ಬೇಕು. ಆದರೆ ಮಟನ್‌, ಚಿಕನ್‌ ಸದಾ ತಿನ್ನಲಾಗದು. ಜತೆಗೆ ಇವು ದುಬಾರಿಯೂ ಹೌದು. ಹೀಗಾಗಿ ಬಡವರಿಗೆ ಕೈಗೆಟಕುವುದು ಮೊಟ್ಟೆ. ಆದ್ದರಿಂದ ಇವುಗಳನ್ನು ಹೆಚ್ಚು ಖರೀದಿಸುತ್ತಾರೆ.

ಮಳೆಯಿಂದಾಗಿ ತರಕಾರಿ ದರಗಳು ಗಗನಕ್ಕೇರಿವೆ. ಜತೆಗೆ ಗುಣಮಟ್ಟದ ತರಕಾರಿಗಳೂ ಲಭ್ಯವಿಲ್ಲದ ಕಾರಣ ಹಲವರು ಮೊಟ್ಟೆಯ ಮೊರೆ ಹೋಗಿದ್ದಾರೆ. ಇವೆಲ್ಲದರ ಪರಿಣಾಮ ಎರಡು ವಾರಗಳಿಂದೀಚೆಗೆ ಕೋಳಿಮೊಟ್ಟೆ ದರ ದಿನಂಪ್ರತಿ 5 ರಿಂದ 10 ಪೈಸೆಯಂತೆ ಹೆಚ್ಚುತ್ತಾ ಬಂದಿದ್ದು, ಇದೀಗ ಸಗಟು ದರದಲ್ಲಿಒಂದು ಮೊಟ್ಟೆಗೆ 4.55 ಪೈಸೆಯಿದ್ದರೆ, ಚಿಲ್ಲರೆ ದರದಲ್ಲಿ ಫಾರಂ ಕೋಳಿ ಮೊಟ್ಟೆ 5.50 ರೂ.ವರೆಗೆ ಮಾರಾಟವಾಗುತ್ತಿದೆ. ನಾಟಿ ಕೋಳಿ ಮೊಟ್ಟೆ 7-8 ರೂ.ವರೆಗೆ ತಲುಪಿದೆ. ಕರ್ನಾಟಕದಲ್ಲಿ ನಿತ್ಯ 1.50 ಕೋಟಿಗೂ ಹೆಚ್ಚು ಮೊಟ್ಟೆ ಉತ್ಪಾದನೆಯಾಗುತ್ತಿದೆ. ಈ ಪೈಕಿ ಬೆಂಗಳೂರಿನಲ್ಲಿ ನಿತ್ಯ ಸುಮಾರು 60 – 70 ಲಕ್ಷ ಮೊಟ್ಟೆ ಬಳಕೆಯಾಗುತ್ತಿದೆ.

Exit mobile version