ಐಪಿಎಲ್ ಆಯೋಜನೆಗೆ ಅನುಮತಿ ಕೋರಿ ಯುಎಇ ಸರ್ಕಾರಕ್ಕೆ ಬಿಸಿಸಿಐ ಪತ್ರ

ಈ ಬಾರಿಯ ಇಂಡಿಯನ್ ಪ್ರೀಮಿಯರ್ ಲೀಗ್‍(ಐಪಿಎಲ್‍) ಪಂದ್ಯಾವಳಿಯನ್ನು ಯುಎಇನಲ್ಲಿ ಆಯೋಜಿಸಲು ಅನುಮತಿ ನೀಡುವಂತೆ ಕೋರಿ ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ (ಬಿಸಿಸಿಐ) ಮಂಗಳವಾರ ಯುಎಇ ಸರ್ಕಾರವನ್ನು ಕೋರಿದೆ.

ಪ್ರಸಕ್ತ ವರ್ಷ ಆಸ್ಟ್ರೇಲಿಯಾದಲ್ಲಿ ನಡೆಯಬೇಕಿದ್ದ ಪುರುಷರ ಟಿ20 ಕ್ರಿಕೆಟ್ ವಿಶ್ವಕಪ್‍ ಟೂರ್ನಿಯನ್ನು ಐಸಿಸಿ, ಮುಂದಿನ ವರ್ಷಕ್ಕೆ ಮುಂದೂಡಿದೆ. ಇದರ ಬೆನ್ನಲ್ಲೇ ಐಪಿಎಲ್‍ ಟೂರ್ನಿ ಆಯೋಜನೆಗೆ ಐಪಿಎಲ್‍ ಆಡಳಿತ ಮಂಡಳಿ ಸಿದ್ಧತೆ ಆರಂಭಿಸಿದ್ದು, ಇದರ ಪ್ರಾರಂಭಿಕವಾಗಿ ಪ್ರಸಕ್ತ ವರ್ಷದ ಐಪಿಎಲ್ ಆವೃತ್ತಿಯನ್ನು ಯುಎಇ ನಲ್ಲಿ ಆಯೋಜಿಸಲು ಅನುಮತಿ ನೀಡುವಂತೆ ಕೋರಿ ಅಲ್ಲಿನ ಸರ್ಕಾರಕ್ಕೆ ಪತ್ರ ಬರೆಯಲಾಗಿದೆ ಎಂದು ಐಪಿಎಲ್ ಅಧ್ಯಕ್ಷ ಬ್ರಿಜೇಶ್‍ ಪಟೇಲ್ ತಿಳಿಸಿದ್ದಾರೆ. ಅಲ್ಲದೇ ಐಪಿಎಲ್ ಟೂರ್ನಿಗೆ ದಿನಾಂಕ ನಿಗದಿಯಾಗಬೇಕಿದ್ದು, ಈ ಸಂಬಂಧ ಮುಂದಿನ ದಿನಗಳಲ್ಲಿ ನಡೆಯುವ ಐಪಿಎಲ್ ಕಾರ್ಯಕಾರಿ ಮಂಡಳಿ ಸಭೆಯಲ್ಲಿ ನಿರ್ಧಾರಕೈಗೊಳ್ಳಲಾಗುವುದು ಎಂದು ಮಾಹಿತಿ ನೀಡಿದ್ದಾರೆ. ಕೋವಿಡ್‍-19 ಕಾರಣದಿಂದಾಗಿ ಈ ವರ್ಷದ ಮಾರ್ಚ್‍ನಲ್ಲಿ ನಡೆಯಬೇಕಿದ್ದ ಐಪಿಎಲ್‍ ಟೂರ್ನಿ ಮುಂದೂಡಲಾಗಿದೆ. ಈ ನಡುವೆ ವರ್ಷಾಂತ್ಯದಲ್ಲಿ ಭಾರತದಲ್ಲೇ ಐಪಿಎಲ್‍ ನಡೆಸಲು ಬಿಸಿಸಿಐ ಚಿಂತನೆ ನಡೆಸಿದ್ದು, ಇದಕ್ಕಾಗಿ ಕೆಲವೊಂದು ತಯಾರಿ ಸಹ ನಡೆಸಿದೆ ಎನ್ನಲಾಗಿದೆ. ಅಲ್ಲದೇ ಐಪಿಎಲ್ ಟೂರ್ನಿಗೆ ಆತಿಥ್ಯವಹಿಸಲು ಶ್ರೀಲಂಕಾ, ನ್ಯೂಜಿಲ್ಯಾಂಡ್ ಹಾಗೂ ಯುಎಇ ಕೂಡ ಒಲವು ತೋರಿದೆ ಎನ್ನಲಾಗದೆ. ಆದರೆ ಈ ಕುರಿತಂತೆ ಐಪಿಎಲ್ ಕಾರ್ಯಕಾರಿ ಮಂಡಳಿಯ ಮುಂದಿನ ಸಭೆಯಲ್ಲಿ ಸ್ಪಷ್ಟ ನಿರ್ಧಾರ ಹೊರಬೀಳುವ ಸಾಧ್ಯತೆ ಇದೆ.

Exit mobile version