ಕತ್ತಲಲ್ಲಿ ಪರದಾಡುತ್ತಿದೆ ಕೆಂಭಾವಿ ಪಟ್ಟಣ

High mast light is only for name sake?| ಯಾದಗಿರಿ ಹೆದ್ದಾರಿಯಲ್ಲಿ ಬೆಳಕೇ ಕಾಣದ ಹೈ ಮಾಸ್ಟ್ ದೀಪ | cj

ಯಾದಗಿರಿ ಜಿಲ್ಲೆಯ ಸುರಪುರ ತಾಲೂಕಿನ ಕೆಂಭಾವಿ ಪಟ್ಟಣ ಒಂದು ವಿಚಿತ್ರ ಸಮಸ್ಯೆಯನ್ನು ಎದುರಿಸುತ್ತಿದೆ. ಇದರಿಂದ ಕೆಂಭಾವಿ ನಿವಾಸಿಗಳು ಭಯದಿಂದಲೇ ಓಡಾಡುವಂತಾಗಿದೆ. ಯಾದಗಿರಿ ಪತ್ಯೇಕ ಜಿಲ್ಲೆಯಾಗಿ ಪರಿವರ್ತನೆಯಾದ ಬಳಿಕ ಇಲ್ಲಿನ ಜನ ಸಾಕಷ್ಟು ಜನ ಕನಸು ಕಂಡಿದ್ರು. ಜಿಲ್ಲೆ ಅಭಿವೃದ್ಧಿ ಕಾಣಬಹುದು ಅಂತ ತಿಳಿದಿದ್ರು. ಆದ್ರೆ ಇವರ ಕನಸು ಕನಸಾಗಿಯೇ ಉಳಿದಿದೆ. ಯಾದಗಿರಿ ಜಿಲ್ಲೆ ಇನ್ನೂ ಭಾರೀ ಹಿಂದುಳಿದಿದೆ. ಎಷ್ಟು ಹಿಂದುಳಿದಿದೆ ಅಂದ್ರೆ ಇಲ್ಲಿನ ಜನ ಇನ್ನೂ ಕತ್ತಲಲ್ಲೇ ಬದುಕುತ್ತಿದ್ದಾರೆ.

ಇಲ್ಲಿನ ಮಂದಿ ರಾತ್ರಿ ಒಬ್ಬೊಬ್ಬರೇ ಓಡಾಡಲು ಭಯಪಡುತ್ತಿದ್ದಾರೆ. ಕಳ್ಳತನ, ದರೋಡೆ ಇಲ್ಲಿ ಸಾಮಾನ್ಯ ಎನಿಸಿದೆ. ಇದಕ್ಕೆ ಮುಖ್ಯ ಕಾರಣ ಬೀದಿ ದೀಪಗಳ ಕೊರತೆ.  ಹೌದು ಕೆಂಭಾವಿ ಪಟ್ಟಣದಲ್ಲಿ  ರಾತ್ರಿ ವೇಳೆ ಬೀದಿ ದೀಪಗಳಿಲ್ಲದೆ  ವಾಹನಗಳು ಅಪಘಾತಕ್ಕೀಡಾಗುತ್ತಿವೆ. ಕೆಲವರು ವಿದ್ಯುತ್‌ ಕಂಬಕ್ಕೆ ಡಿಕ್ಕಿಯಾಗಿ ಪ್ರಾಣವನ್ನು ಕಳೆದುಕೊಂಡಿದ್ದಾರೆ. ಅಪಘಾತಕ್ಕೊಳಗಾದ ವಿದ್ಯುತ್‌  ಕಂಬಗಳು ಬಾಗಿದ್ದು  ಯಾವ ಕ್ಷಣದಲ್ಲಾದ್ರೂ ಮುರಿದು ಬಿದ್ದು ಇನ್ನಷ್ಟು ಮಂದಿಯ ಪ್ರಾಣಕ್ಕೆ ಕುತ್ತು ತರಬಹುದು. ಇಲ್ಲಿನ  ಹೆದ್ದಾರಿಯಲ್ಲಿ ಹೈಮಾಸ್ಟ್ ಕಂಬಗಳನ್ನು HKRDB ಯೋಜನೆ ಅಡಿಯಲ್ಲಿ ಸುಮಾರು 5 ವರ್ಷಗಳ ಹಿಂದೆಯೇ ಅಳವಡಿಸಲಾಗಿತ್ತು. ಇದಕ್ಕೆ  20 ಲಕ್ಷ  ಖರ್ಚು ಮಾಡಲಾಗಿತ್ತು . ಆದ್ರೆ ತಮಾಷೆ ಅಂದ್ರೆ ಈ ಹೈಮಾಸ್ಕ್‌ ಕಂಬಕ್ಕೆ ದೀಪ ಅಳವಡಿಸದೆ ಜನರನ್ನು ಸತಾಯಿಸುತ್ತಿದ್ದಾರೆ ಇಲ್ಲಿನ ಅಧಿಕಾರಿಗಳು.

ಸ್ಥಳೀಯರು ಅಧಿಕಾರಿಗಳಿಗೆ ಅನೇಕ ಬಾರಿ ಮನವಿ ನೀಡಿದರೂ ಯಾರೂ ಕ್ಯಾರೇ ಅನ್ನುತ್ತಿಲ್ಲ. ಜನರ ಕಷ್ಟಕ್ಕೆ ಸ್ಪಂದಿಸದ ಅಧಿಕಾರಿಗಳು ಇದ್ದೇನು ಪ್ರಯೋಜನ ?ಎಂಬುದು ಜನರ ಗೋಳು. ಒಂದಲ್ಲಾ ಎರಡಲ್ಲಾ ಸತತ 5 ವರ್ಷಗಳಿಂದ ಇಲ್ಲಿನ ಜನರು ಕತ್ತಲೆಯಲ್ಲೇ ಈ ಪೇಟೆಯಲ್ಲಿ ಪರದಾಡುತ್ತಿದ್ದಾರೆ. ಇದು ಇಲ್ಲಿನ ಅಧಿಕಾರಿಗಳ ಹಾಗೂ ಜನಪ್ರತಿನಿಧಿಗಳ ನಿರ್ಲಕ್ಷ್ಯತನವನ್ನು ಎತ್ತಿ ತೋರಿಸುತ್ತೆ. ಸ್ವಾತಂತ್ರ್ಯ ಸಿಕ್ಕು ಏಳು ದಶಕಗಳೇ ಕಳೆದ್ರೂ ಇನ್ನು ನಮ್ಮ ಕರುನಾಡಿನ ಕೆಂಭಾವಿ ಮಂದಿ ಬೀದಿ ದೀಪ ಇಲ್ಲದೆ ಒದ್ದಾಡುತ್ತಿರೋದು ನಿಜವಾಗ್ಲೂ ನಾಚಿಕೆಗೇಡಿನ ವಿಚಾರ. ಇಲ್ಲಿನ ಜಿಲ್ಲಾಧಿಕಾರಿಗಳು ನಾಚಿಕೆಯಿಂದ ತಲೆತಗ್ಗಿಸ ಬೇಕು. ಈಗಲಾದರೂ ಸಂಬಂಧಪಟ್ಟ ಅಧಿಕಾರಿಗಳು ಕಣ್ಣು ತೆರೆದು ಹೈಮಾಸ್ಟ್ ದೀಪ ಸರಿಪಡಿಸಲಿ ಕಂಬಗಳಿಗೆ ಬೀದಿ ದೀಪಗಳನ್ನು ಅಳವಡಿಸಿ ಜನರಿಗೆ ಬೆಳಕು ನೀಡಲಿ ಎಂಬುದು ವಿಜಯಾ ಟೈಮ್ಸ್ ಆಶಯವಾಗಿದೆ.

Exit mobile version