ಕಲ್ಬುರ್ಗಿಯಲ್ಲಿ ಏರುತ್ತಿದೆ ಸಿಎಎ ವಿರೋಧಿ ಕಾವು

ತೊಗರಿ ನಾಡು ಕಲ್ಬುರ್ಗಿಯಲ್ಲಿ ಸಿಎಎ ವಿರೋಧಿ ಕಾವು ಏರುತ್ತಿದೆ. ಇಂದು ಸಂಜೆ ಮೂರು ಗಂಟೆಗೆ ನಡೆಯಲಿರೋ ಸಿಎಎ ವಿರೋಧಿ ಪ್ರತಿಭಟನಾ ರ್ಯಾಲಿಗೆ ಕಲ್ಬುರ್ಗಿಯ ಪೀರ್ ಬಂಗಾಲಿ ಮೈದಾನ ಸಜ್ಜಾಗಿದೆ. ಕರ್ನಾಟಕ ಪೀಪಲ್ಸ್ ಫಾರಂ ಕರೆ ನೀಡಿರೋ ಈ ಬೃಹತ್ ಪ್ರತಿಭಟನಾ ರ್ಯಾಲಿಯಲ್ಲಿ ಸುತ್ತಮುತ್ತಲಿನ ಹತ್ತು ಜಿಲ್ಲೆಗಳ ಲಕ್ಷಾಂತರ ಮಂದಿ ಭಾಗವಹಿಸಲಿದ್ದಾರೆ.


ಕೇಂದ್ರ ಸರ್ಕಾರ ಜಾರಿಗೊಳಿಸಿರೋ ಸಿಎ ಕಾಯ್ದೆ ಹಾಗೂ ಜಾರಿಗೊಳಿಸಲು ಹೊರಟಿರೋ ಎನ್‍ಪಿಆರ್ ಹಾಗೂ ಎನ್‍ಆರ್‍ಐಸಿ ಕಾಯ್ದೆ ದೇಶಕ್ಕೆ ಮಾರಕ. ಇದು ಬಿಜೆಪಿ ಸರ್ಕಾರದ ಜನವಿರೋಧಿ ಕಾಯ್ದೆ. ಅಸಂವಿಧಾನಿಕ ಕಾಯ್ದೆಯನ್ನು ಜಾರಿಗೊಳಿಸಿ ಜನರ ನಡುವೆ ಒಡಕು ಮೂಡಿಸ ಹೊರಟಿದೆ ಇದನ್ನು ವಿರೋಧಿಸುವ ಸಲುವಾಗಿ ಈ ಭಾರೀ ಸಮಾವೇಶ ಹಮ್ಮಿಕೊಳ್ಳಲಾಗಿದೆ. ಬಿಜೆಪಿ ಸರ್ಕಾರದ ಜನತಾ ವಿರೋಧಿ ಧೋರಣೆಯನ್ನು ಖಂಡಿಸಲು ಎಐಸಿಸಿ ಪ್ರಧಾನ ಕಾರ್ಯದರ್ಶಿ ಡಾ. ಮಲ್ಲಿಕಾರ್ಜುನ್ ಖರ್ಗೆ, ಮಾಜಿ ಮುಖ್ಯಮಂತ್ರಿ ಹೆಚ್.ಡಿ .ಕುಮಾರಸ್ವಾಮಿ, ಮಾಜಿ ಸಚಿವ ಪ್ರಿಯಾಂಕ್ ಖರ್ಗೆ, ಡಿಎಂಕೆ ರಾಷ್ಟ್ರೀಯ ಅಧ್ಯಕ್ಷ ಎಂ.ಕೆ ಸ್ಟಾಲಿನ್, ದೆಹಲಿಯ ಸಿಪಿಐ ಪ್ರಧಾನ ಕಾರ್ಯದರ್ಶಿ ಸೀತಾರಾಮ್ ಯಚೂರಿ, ಸಿಪಿಐ ಪ್ರಧಾನ ಕಾರ್ಯದರ್ಶಿ ಅತುಲ್ ಕುಮಾರ್ ಅನ್ಜಾಜ್ ಮುಂತಾದ ಪ್ರಮುಖ ನಾಯಕರು ಪ್ರತಿಭಟನಾ ರ್ಯಾಲಿಯಲ್ಲಿ ಪಾಲ್ಗೊಳ್ಳಲಿದ್ದಾರೆ.


ಈ ಭಾರೀ ಪ್ರತಿಭಟನಾ ಸಮಾವೇಶದಲ್ಲಿ ಸಮಾನ ಮನಸ್ಕ ನೂರಾರು ಸಂಘಟನೆಗಳೊಂದಿಗೆ ಸುಮರು ಐದು ಲಕ್ಷಕ್ಕೂ ಮಿಕ್ಕಿದ ಜನರ ಸಮಕ್ಷಮದಲ್ಲಿ ಸಿಎಎ, ಎನ್‍ಪಿಆರ್, ಎನ್‍ಆರ್‍ಐಸಿಯನ್ನು ವಿರೋಧಿಸಿ ತೆಗೆದುಕೊಳ್ಳುವ ನಿಲುವನ್ನು ಮಾನ್ಯ ರಾಷ್ಟ್ರಪತಿ ಮತ್ತು ಭಾರತದ ಸುಪ್ರೀಂ ಕೋರ್ಟ್‍ಗೆ ಸಲ್ಲಿಸಿಲಿದ್ದೇವೆ. ಅಲ್ಲದೆ ಈ ಕಾನೂನು ಬಾಹಿರ ಮತ್ತು ಸಂವಿಧಾನ ವಿರೋಧಿ ಮಸೂದೆಗಳನ್ನು ತೊಡೆದು ಹಾಕಬೇಕೆಂದು ನಾವು ವಿನಂತಿಸಲಿದ್ದೇವೆ ಎಂದು ಪೀಪಲ್ ಫಾರಂ ಕರ್ನಾಟಕ ವೇದಿಕೆಯ ಮುಖಂಡರಾದ ನಾಸಿರ್ ಹುಸೇನ್ ಉಸ್ತಾದ್ ತಿಳಿಸಿದ್ದಾರೆ.

2003ರಲ್ಲಿ ತಿದ್ದುಪಡಿಗೆ ಒಳಗಾದ ಪೌರತ್ವ ಕಾಯಿದೆ 1955 ರ ಅಡಿಯಲ್ಲಿ ಎನ್‍ಆರ್‍ಸಿಯನ್ನು ಈಗಾಗಲೇ ಅಸ್ಸಾಂನಲ್ಲಿ 2013-14ರಲ್ಲಿ ಜಾರಿಗೊಳಿಸಲಾಗಿದೆ. ಇದನ್ನು 2021ರಲ್ಲಿ ಇಡೀ ದೇಶದಾದ್ಯಂತ ಜಾರಿಗೊಳಿಸಲು ಸರ್ಕಾರವು ನಿರ್ಧರಿಸಿದೆ. ಪೌರತ್ವ ನಿಯಮಗಳ 2003ರ ನಿಯಮಗಳ ಪ್ರಕಾರ, ಎನ್‍ಆರ್‍ಸಿಗೆ ವ್ಯಕ್ತಿಯೊಬ್ಬರ ಹೆಸರನ್ನು ಸೇರಿಸುವ ಕುರಿತ ವಿವೇಚನೆಯನ್ನು ಸ್ಥಳೀಯ ಅಧಿಕಾರಿಗಳಿಗೆ ನೀಡಲಾಗಿದೆ. ಇದರಿಂದ ದೇಶದ ಬಡ, ಅಸಹಾಯಕರಿಗೆ ಭಾರೀ ಅನ್ಯಾಯ ಆಗಲಿದೆ. ಸಿಎಎ 2019 ಸಂಪೂರ್ಣವಾಗಿ ದೇಶದ ಜಾತ್ಯಾತೀತ ತತ್ವಗಳಿಗೆ ವಿರುದ್ಧವಾಗಿದ್ದು, ಪೌರತ್ವ ನೀಡುವಲ್ಲಿ ಧರ್ಮದ ತಾರತಮ್ಯವನ್ನು ನಡೆಸಲಿದೆ. ಅಲ್ಲದೆ ಈ ಮಸೂದೆಯು ಭಾರತದ ಸಂವಿಧಾನದ ಮೂಲತತ್ವಗಳಿಗೆ ವಿರುದ್ಧವಾಗಿದೆ. ಈ ಮಸೂದೆಯನ್ನು ಹಿಂಪಡೆಯುವ ತನಕ ಶಾಂತಿಯುತವಾಗಿ ಪ್ರತಿಭಟಿಸಲಿದ್ದೇವೆ ಹಾಗೂ ಅಸಹಕಾರ ಚಳುವಳಿ ಮುಂದುವರಿಸಲಿದ್ದೇವೆ ಎಂದು ಸಮಾವೇಶ ಸಂಘಟನಾಕಾರರು ತಿಳಿಸಿದ್ದಾರೆ. 
Exit mobile version