ಕಾಣೆಯಾಗಿದ್ದ 76 ಮಕ್ಕಳನ್ನು ಪತ್ತೆ ಹಚ್ಚಿ ವಿಶೇ ಬಡ್ತಿ ಪಡೆದ ಮಹಿಳಾ ಹೆಡ್ ಕಾನ್ಸ್ಟೆಬಲ್

ಹೊಸದಿಲ್ಲಿ, ನ. 19: ಪ್ರಾಮಾಣಿಕತೆ, ಶ್ರಮದಾಯಕ ಪ್ರಯತ್ನದಿಂದ ಕಾಣೆಯಾಗಿದ್ದ 76 ಮಕ್ಕಳನ್ನು ಪತ್ತೆ ಮಾಡುವ ಮೂಲಕ ಕರ್ತವ್ಯನಿಷ್ಠೆ ಮೆರೆದ ಮಹಿಳಾ ಹೆಡ್ ಕಾನ್ಸ್ಟೆಬಲ್, ಔಟ್ ಆಫ್ ಟರ್ನ್ ಪ್ರಮೋಷನ್ ಅಡಿಯಲ್ಲಿ ವಿಶೇಷ ಬಡ್ತಿ ಪಡೆದು ಎಲ್ಲರ ಗಮನ ಸೆಳೆದಿದ್ದಾರೆ.

ಹೊಸದಿಲ್ಲಿಯ ಸಮಯ್ಪುರದ ಬಡ್ಲಿ ಪೊಲೀಸ್ ಠಾಣೆಯಲ್ಲಿ ಮುಖ್ಯ ಪೇದೆಯಾಗಿದ್ದ ಸೀಮಾ ಢಾಕಾ, ಹೊಸದಿಲ್ಲಿ ಪೊಲೀಸ್ ಆಯುಕ್ತ ಎಸ್.ಎನ್.ಶ್ರೀವಾಸ್ತವ್, ಕಾಣೆಯಾದ ಮಕ್ಕಳ ಪತ್ತೆಗೆ ಘೋಷಣೆ ಮಾಡಿದ್ದ ಔಟ್ ಆಫ್ ಟರ್ನ್ ಪ್ರಮೋಷನ್ ಮೂಲಕ ವಿಶೇಷ ಬಡ್ತಿ ಪಡೆದ ದೆಹಲಿಯ ಮೊದಲ ಪೊಲೀಸ್ ಎಂಬ ಖ್ಯಾತಿಗೆ ಪಾತ್ರರಾಗಿದ್ದಾರೆ.

ಕಾಣೆಯಾದ ಮಕ್ಕಳ ಪತ್ತೆಹಚ್ಚಲು ಪೊಲೀಸ್ ಸಿಬ್ಬಂದಿಯನ್ನು ಪ್ರೇರೇಪಿಸುವ ಸಲುವಾಗಿ, ಪೊಲೀಸ್ ಆಯುಕ್ತರು ಆಗಸ್ಟ್ 5, 2020 ರಂದು 14 ವರ್ಷಕ್ಕಿಂತ ಕೆಳಪಟ್ಟ ಕಾಣೆಯಾದ 50 ಅಥವಾ ಅದಕ್ಕಿಂತ ಹೆಚ್ಚು ಮಕ್ಕಳನ್ನು 12 ತಿಂಗಳೊಳಗೆ ಪತ್ತೆಹಚ್ಚಿದ ಕಾನ್‌ಸ್ಟೆಬಲ್ ಅಥವಾ ಹೆಡ್ ಕಾನ್‌ಸ್ಟೆಬಲ್‌ಗೆ ವಿಶೇಷ ಬಡ್ತಿ ನೀಡಲಾಗುವುದು ಎಂದು ಹೇಳಿದ್ದರು. ಅಲ್ಲದೇ ಒಂದೇ ಅವಧಿಯಲ್ಲಿ 15 ಕ್ಕೂ ಹೆಚ್ಚು ಮಕ್ಕಳನ್ನು ಪತ್ತೆಹಚ್ಚುವವರಿಗೆ ಅಸಾಧಾರಣ ಕಾರ್ಯ ಪುರಾಸ್ಕರ ನೀಡಲಾಗುವುದು ಎಂದು ಹೇಳಿದ್ದರು.

ಈ ಘೋಷಣೆಯಿಂದ ಉತ್ತೇಜಿತರಾದ ಸೀಮಾ ಢಾಕಾ, ನಿರಂತರ ಪ್ರಯತ್ನ, ಪ್ರಾಮಾಣಿಕ ಪರಿಶ್ರಮದ ಫಲವಾಗಿ ದೆಹಲಿ ಮತ್ತು ಇತರ ರಾಜ್ಯಗಳಲ್ಲಿ ಎರಡೂವರೆ ತಿಂಗಳ ಅವಧಿಯಲ್ಲಿ 76 ಮಕ್ಕಳನ್ನು ಪತ್ತೆಹಚ್ಚಿದ್ದಾರೆ. ಇವರಲ್ಲಿ 56 ಮಕ್ಕಳು 14 ವರ್ಷಕ್ಕಿಂತ ಕಡಿಮೆ ವಯಸ್ಸಿನವರಾಗಿದ್ದು, ಕಾಣೆಯಾದ ಈ ಮಕ್ಕಳನ್ನು ದೆಹಲಿಯಿಂದ ಮಾತ್ರವಲ್ಲ, ಇತರ ರಾಜ್ಯಗಳಾದ ಪಂಜಾಬ್ ಮತ್ತು ಪಶ್ಚಿಮ ಬಂಗಾಳದಿಂದ ಅವರು ಪತ್ತೆ ಹಚ್ಚಿದ್ದಾರೆ. ಸೀಮಾ ಢಾಕಾ ಅವರ ಈ ಕಾರ್ಯಕ್ಕೆ ಇಲಾಖೆಯ ಹಿರಿಯ ಅಧಿಕಾರಿಗಳು ಪ್ರಶಂಸಿಸಿದ್ದಾರೆ.

Exit mobile version