ಕಾಸರಗೋಡಲ್ಲಿ ೧೦ನೇ ತರಗತಿ ಪರೀಕ್ಷೆ ಬರೆದ ವಿದ್ಯಾರ್ಥಿನಿಗೂ ಇತ್ತು ಕೊರೊನಾ

ಕೇರಳದ ಬೋರ್ಡ್ ಎಕ್ಸಾಂ ಬರೆದ ೧೦ನೇ ತರಗತಿ ವಿದ್ಯಾರ್ಥಿನಿಗೂ ಕರೊನಾ ಸೋಂಕು ಧೃಡಪಟ್ಟಿದೆ. ಆಕೆ ತನ್ನ ತಂದೆಯ ಜತೆಗೆ ಪರೀಕ್ಷಾ ಕೇಂದ್ರಕ್ಕೆ ಆಗಮಿಸಿದ್ದಳು. ಈ ತಿಂಗಳು ಪತ್ತೆಯಾದ ಪಾಸಿಟಿವ್ ಕೇಸ್‌ಗಳ ಪೈಕಿ ಈ ವಿದ್ಯಾರ್ಥಿನಿಯದ್ದೂ ಒಂದು.

ಕಾಸರಗೋಡಿನ ಸರ್ಕಾರಿ ಶಾಲೆಯ ೧೦ನೇ ತರಗತಿ ವಿದ್ಯಾರ್ಥಿನಿ ಕಳೆದ ವಾರ ತಂದೆಯ ಜತೆಗೆ ಪರೀಕ್ಷಾ ಕೇಂದ್ರಕ್ಕೆ ಬಂದಿದ್ದಳು. ಈ ವಿದ್ಯಾರ್ಥಿನಿಯ ತಂದೆ ಮಾರ್ಚ್ ೧೭ರಂದು ವಿದೇಶದಿಂದ ಆಗಮಿಸಿದ್ದರು. ಅವರಿಗೂ ಸೋಂಕು ಧೃಡಪಟ್ಟಿದ್ದು, ಜತೆಗೆ ಕುಟುಂಬದ ಇತರೆ ಇಬ್ಬರು ಸದಸ್ಯರಿಗೂ ಸೋಂಕು ತಗುಲಿದೆ. ಎಲ್ಲರನ್ನೂ ಕ್ವಾರಂಟೈನ್?ನಲ್ಲಿ ಇರುವಂತೆ ಸೂಚಿಸಲಾಗಿದ್ದು, ಚಿಕಿತ್ಸೆ ಮುಂದುವರಿದಿದೆ ಎಂದು ಆರೋಗ್ಯ ಅಧಿಕಾರಿಗಳು ತಿಳಿಸಿದ್ದಾರೆ.

ವಿದ್ಯಾರ್ಥಿನಿ ಜತೆಗೆ ಸಂಪರ್ಕಕ್ಕೆ ಪರೀಕ್ಷೆ ದಿನ ಯಾರೆಲ್ಲ ಬಂದಿದ್ದರು ಎಂಬುದನ್ನು ಗುರುತಿಸಲಾಗುತ್ತಿದ್ದು, ಅವರಿಗೂ ಈಗ ಕ್ವಾರಂಟೈನ್ ಇರುವಂತೆ ಸೂಚಿಸಲಾಗುತ್ತದೆ. ಮಾರ್ಚ್ ೧೯ರಂದು ಪರೀಕ್ಷೆ ಬರೆದ ಸಂದರ್ಭದಲ್ಲಿ ಕನಿಷ್ಠ ೧೯ ವಿದ್ಯಾರ್ಥಿಗಳು ಆಕೆಯ ಸಂಪರ್ಕಕ್ಕೆ ಬಂದಿದ್ದು, ಅವರ ಪತ್ತೆಗೆ ಪ್ರಯತ್ನ ನಡೆದಿದೆ. ಕೇರಳದಲ್ಲಿ ಸೋಂಕು ಪೀಡಿತರ ಸಂಖ್ಯೆ ೧೬೦ರ ಗಡಿ ದಾಟಿದೆ.

Exit mobile version