ಕೊಪ್ಪಳ ಏತ ನೀರಾವರಿ ಯೋಜನೆಯ ಅಕ್ರಮ ಬಯಲು

Huge corruption in koppal lift irrigation project, black | ಕೊಪ್ಪಳ ಏತ ನೀರಾವರಿ ಯೋಜನೆಯ ಅಕ್ರಮ ಬಯಲು | cJ

ಇವತ್ತಿನ ಸಿಟಿಜನ್ ಜರ್ನಲಿಸ್ಟ್ ಕಾರ್ಯಕ್ರಮದಲ್ಲಿ ಬಾಗಲಕೋಟೆ ಜಿಲ್ಲೆಯ ಇಳಕಲ್ ತಾಲೂಕಿನಲ್ಲಿರುವ ಕೊಪ್ಪಳ ಏತ ನೀರಾವರಿಯ ಯೋಜನೆಯಲ್ಲಾದ ಅಕ್ರಮಗಳನ್ನ ವಿಜಯಟೈಮ್ಸ್‌ ಸಿಟಿಜನ್‌ ಜರ್ನಲಿಸ್ಟ್‌ ರಾಜಶೇಖರ್ ಹುಡೇದಮನಿ ಹೇರೂರು ಬಯಲು ಮಾಡಿದ್ದಾರೆ. ಅದರ ವಿವರ ಇಲ್ಲಿದೆ ನೋಡಿ. ಇದು ಬಾಗಲಕೋಟೆ ಜಿಲ್ಲೆಯ ಇಳಕಲ್ ತಾಲೂಕಿನ  ಹೇರೂರು ಗ್ರಾಮದಲ್ಲಿ ನಡೆದ  ಇಳಕಲ್ ಬಲಕುಂದಿ ಕಾಲುವೆಯ ದುಸ್ಥಿತಿ. ಇನ್ನೂ ನೀರೇ ಹರಿದಿಲ್ಲ. ಆಗ್ಲೇ  ಈ ಕಾಲುವೆ ಹೇಗೆ ಕುಸಿದು ಬಿದ್ದಿದೆ ನೋಡಿ. ಅತ್ಯಂತ ಕಳಪೆ ಮಟ್ಟದ ಕಾಮಗಾರಿ ಮಾಡಿದ್ದೇ ಈ ಕಾಲುವೆ ರೀತಿ ಕುಸಿಯಲು ಕಾರಣ.  ಇದು ಕಾಲುವೆಯ ಒಂದು ಭಾಗ ಅಂತ ತಿಳ್ಕೋಬೇಡಿ, ಕಾಲುವೆಯುದ್ದಕ್ಕೂ ಇದೇ ದೃಶ್ಯ ಕಂಡು ಬರುತ್ತೆ. ಕೆಲವು ಕಡೆ ಕಾಲುವೆಗಳೇ ಮಾಯವಾಗಿವೆ. ಕಾಲುವೆಗಳು ಎಲ್ಲಿವೆ ಅಂತ ಹುಡುಕಬೇಕಾಗಿದೆ.

ಕೊಪ್ಪಳ ಏತ ನೀರಾವರಿಯ ಕಾಲುವೆ ಕಾಮಗಾರಿಯ ಗುತ್ತಿಗೆಯನ್ನು ಜಿ.ಶಂಕರ್‌ ಅವರಿಗೆ ನೀಡಲಾಗಿದೆ. ಆದ್ರೆ ದುರಂತ ನೋಡಿ ಈ ಗುತ್ತಿಗೆದಾರರು ಕಾಲುವೆ ಕಾಮಗಾರಿಗೆ 25 ಪರ್ಸೆಂಟರಷ್ಟು ಹಣವನ್ನು ಬಳಸಿಲ್ಲ. ಅಷ್ಟೊಂದು ಕೆಟ್ಟದಾಗಿ, ಕಳಪೆಯಾಗಿ ಕಾಮಗಾರಿ ಮಾಡಿದ್ದಾರೆ. ನೋವಿನ ಸಂಗತಿ ಅಂದ್ರೆ ಜಿ.ಶಂಕರ್‌ ಅವರು ನಡೆಸಿರುವ ಕಾಮಗಾರಿಯಲ್ಲಿ ಈಗ್ಲೇ ಶೇಕಡಾ 75ರಷ್ಟು ಕಾಮಗಾರಿ ಹಾಳಾಗಿದೆ. ಒಂದು ವೇಳೆ ಈ ಕಾಲುವೆಯಲ್ಲಿ ನೀರು ಬಿಟ್ರೆ, ನೀರೆಲ್ಲಾ ರೈತರ  ಬೆಳೆಗಳೆಲ್ಲಾ ಕೊಚ್ಚಿ ಹೋಗೋ ಸಂಭವವಿದೆ ಅನ್ನೋದು ರೈತರ ಅಳಲು. ಕಾಲುವೆಯ ಕಳಪೆ ಕಾಮಗಾರಿ ಬೆಳೆಯನ್ನಷ್ಟೇ ಅಲ್ಲ, ರಸ್ತೆ, ಪಾದಚಾರಿ ಮಾರ್ಗಕ್ಕೂ ಕುತ್ತು ತರುತ್ತಿದೆ ಅಂತಾರೆ ಇವರು. ಕಾಲುವೆ ಕಾಮಗಾರಿಯ ವೆಚ್ಚ ಎಷ್ಟು ಗೊತ್ತಾ? ಬರೋಬ್ಬರಿ ೪೦೦ ಕೋಟಿ. ಆದ್ರೆ ಈ ೪೦೦ ಕೋಟಿಯನ್ನು ನುಂಗಿ ನೀರು ಕುಡಿದ ಗುತ್ತಿಗೆದಾರ ಇಡೀ ಯೋಜನೆಯನ್ನ ವಿಫಲಗೊಳಿಸಿ, ರೈತರಿಗೆ ವಂಚನೆ ಮಾಡಿದ್ದಾರೆ. ಭಾರೀ ಅಕ್ರಮ ಎಸಗಿ ದೇಶದ್ರೋಹದ ಕೆಲಸ ಮಾಡಿದ್ದಾರೆ.

ಇನ್ನೊಂದು ವಿಚಾರ ಗೊತ್ತಾ? ಈ ಕಾಲುವೆ ಮೇಲೆ ಸೋಲಾರ ಅಳವಡಿಸಿದ್ದು ಇದರಲ್ಲಿ ೧೦ ಮೇಗಾ ವ್ಯಾಟ್‌ ವಿದ್ಯುತ್‌ ಉತ್ಪಾದನೆಯಾಗುತ್ತಿದೆ. ಇದರಿಂದ ಸರ್ಕಾರ ಕ್ಕೆ ಪ್ರತಿ ಯುನಿಟ್ ಗೆ ೧೦ ಪೈಸೆ ಸಂದಾಯ ವಾಗುತ್ತೆ. ಈ ಹಣ ಈ ಯೋಜನೆಯಲ್ಲಿ ಭೂಮಿ ಕಳೆದುಕೊಂಡ ರೈತರಿಗೆ ಪರಿಹಾರವಾಗಿ ನೀಡಬೇಕೆಂದು ಮನವಿ ಮಾಡಲಾಗಿತ್ತು. ಆದ್ರೆ ಈಗ ಸರ್ಕಾರ ರೈತರನ್ನು ಮರೆತೇ ಬಿಟ್ಟಿದೆ. ಈ ಕಾಲುವೆಗೆ ನೀರು ಹರಿಸುವ ಮೊದಲೇ ಇಷ್ಟೆಲ್ಲಾ ತೊಂದರೆಗಳಾಗಿವೆ. ಇನ್ನು ನೀರು ಹರಿಸಿದ್ರೆ ಈ ಭಾಗದ ರೈತರ ಗತಿ ಅದೋಗತಿ. ರೈತರ ಬೆಳೆಯೆಲ್ಲಾ ಕೊಚ್ಚಿ ಹೋಗಿ ರೈತರ ಬಾಳು ನೀರು ಪಾಲಾಗೋದ್ರಲ್ಲಿ ಯಾವ ಸಂದೇಹವೂ ಇಲ್ಲ ಅನ್ನೋದು ಊರಿನ ಜನರ ದೂರು.

ಕಾಲುವೆ ಕಳಪೆ ಕಾಮಗಾರಿ ಬಗ್ಗೆ ಅಧಿಕಾರಿಗಳಿಗೆ ಈಗಾಗಲೇ ಗೊತ್ತಿದೆ. ಆದ್ರೆ ಗುತ್ತಿಗೆದಾರನಿಂದ ಕಮಿಷನ್‌ ತಿಂದ ಅಧಿಕಾರಿಗಳು ಕಣ್ಣಿದ್ದೂ ಕುರುಡರಂತೆ ವರ್ತಿಸುತ್ತಿದ್ದಾರೆ. ಈ ಕ್ಷೇತ್ರದ ಬಿಜೆಪಿ ಶಾಸಕ ದೊಡ್ಡನಗೌಡ ಪಾಟೀಲರಂತು ತಮಗೂ ಇದಕ್ಕೂ ಸಂಬಂಧವೇ ಇಲ್ಲದಂತೆ ವರ್ತಿಸುತ್ತಿದ್ದಾರೆ. ಅತ್ಯಂತ ಕಳಪೆ ಕಾಮಗಾರಿ ಮಾಡಿರುವ ಗುತ್ತಿಗೆದಾರನಿಂದ ಮತ್ತೆ ಈ ಕಾಮಗಾರಿ ನಿರ್ಮಾಣ ಮಾಡಿಸಬೇಕು. ಆತನನ್ನು ಕಪ್ಪು  ಪಟ್ಟಿಗೆ    ಸೇರಿಸಬೇಕು. ಇನ್ನು ಜಿ.ಶಂಕರ್‌ಗೆ ಯಾವುದೇ ಕಾಮಗಾರಿ ನೀಡಬಾರದು. ಅಲ್ಲದೆ ಈತನಿಂದ ರೈತರಿಗೆ ಆದ ನಷ್ಟವನ್ನು ಭರಿಸುವಂತೆ ಹೇಳಬೇಕು ಎಂಬುದು ಸ್ಥಳೀಯರ ಆಗ್ರಹವಾಗಿದೆ. ಅಷ್ಟೇ ಅಲ್ಲ ಈ ಕಾಮಗಾರಿಯನ್ನು ಸರಿ ಪಡಿಸದಿದ್ದಲ್ಲಿ ಮುಂದಿನ ದಿನಗಳಲ್ಲಿ ಗುತ್ತಿಗೆದಾರ ಹಾಗೂ ಸರ್ಕಾರದ ವಿರುದ್ಧ   ಉಗ್ರ ಹೋರಾಟಕ್ಕೆ  ಇಳಿಯುತ್ತೇವೆ ಎಂಬುದು ಜನರ ಎಚ್ಚರಿಕೆಯಾಗಿದೆನೋಡಿದೀರಲ್ಲಾ ಇಳಕಲ್ ತಾಲೂಕಿನ ಕೊಪ್ಪಳದ ಏತ ನೀರಾವರಿ ಯೋಜನೆಯ ಕಳಪೆ ಕಾಮಗಾರಿಯನ್ನು? ಜನರ ಆಕ್ರೋಶವನ್ನು ಅರ್ಥ ಮಾಡಿಕೊಂಡು ಕೃಷ್ಣ ಜಲಭಾಗ್ಯ ನಿಗಮ ಎಂ.ಡಿಯವರು ಸೂಕ್ತ ಕ್ರಮವನ್ನು  ಕೈಗೊಳ್ಳಲಿ. ಇಲ್ಲದಿದ್ದರೆ ಜನ ಉಗ್ರ ಹೋರಾಟವನ್ನ ಎದುರಿಸಲಿ.

Exit mobile version