ಕೊರೊನಾ ಭೀತಿ ನಡುವೆ ಮತ್ತೆ ಟ್ರ್ಯಾಕಿಗೆ ಸುವರ್ಣ ರಥ

ಬೆಂಗಳೂರು,.22: ಐಷಾರಾಮಿ ರೈಲಾದ ಗೋಲ್ಡನ್ ಚಾರಿಯಟ್ ಮತ್ತೆ ಸಂಚಾರ ಆರಂಭಿಸಲಿದೆ. ಜನವರಿಯಿಂದ ಆರಂಭವಾಗುವ ಸಂಚಾರಕ್ಕೆ ಈಗಾಗಲೇ ಮುಂಗಡ ಟಿಕೆಟ್ ಕಾಯ್ದಿರಿಸುವಿಕೆ ಆರಂಭವಾಗಿದ್ದು, 9 ತಿಂಗಳಿನಿಂದ ಐಷಾರಾಮಿ ರೈಲು ಗೋಲ್ಡನ್ ಚಾರಿಯಟ್ ರೈಲು ಸಂಚಾರ ಸ್ಥಗಿತಗೊಂಡಿತ್ತು. ಪ್ರವಾಸೋದ್ಯಮಕ್ಕೆ ಅನುಕೂಲ ನೀಡಲು ಹೊಸ ವಿನ್ಯಾಸ, ಹೊಸ  ಸೇವೆಗಳ ಜತೆ ಗೋಲ್ಡನ್ ಚಾರಿಯಟ್ ರೈಲು, ಸಂಚಾರಕ್ಕೆ ಮತ್ತೆ ಚಾಲನೆ ನೀಡಲಾಗುತ್ತಿದೆ.

ಐಷಾರಾಮಿ ಗೋಲ್ಡನ್ ಚಾರಿಯಟ್ ಬೆಂಗಳೂರು ನಗರದಿಂದ ಮೂರು ಪ್ರವಾಸಿ ಪ್ಯಾಕೇಜ್‍ಗಳಲ್ಲಿ ಸಂಚಾರ ನಡೆಸಲಿದೆ. ಎರಡು ಪ್ಯಾಕೇಜ್ ಗಳು ಕರ್ನಾಟಕದ ಪ್ರವಾಸಿ ತಾಣಗಳ ದರ್ಶನ ಮಾಡಿಸಲಿದೆ. ಮತ್ತೊಂದು ಪ್ಯಾಕೇಜ್ ತಮಿಳುನಾಡು ಮತ್ತು ಕೇರಳ ರಾಜ್ಯದ ಸಂಚಾರವನ್ನು ಒಳಗೊಂಡಿದೆ.

ಗೋಲ್ಡನ್ ಚಾರಿಯಟ್ ರೈಲನ್ನು 2018ರಲ್ಲಿ ಕರ್ನಾಟಕ ಪ್ರವಾಸೋದ್ಯಮ ಇಲಾಖೆ ಐಆರ್‌ಸಿಟಿಸಿಗೆ ಹಸ್ತಾಂತರ ಮಾಡಿತ್ತು. ಯೋಜನೆಯಂತೆ 2020ರ ಜನವರಿಯಿಂದ ರೈಲು ಸಂಚಾರ ನಡೆಸಬೇಕಿತ್ತು. ಈಗ ರೈಲು ಸಂಚಾರಕ್ಕೆ ದಿನಾಂಕ ನಿಗದಿಯಾಗಿದೆ. ಐಆರ್‌ಸಿಟಿಸಿಗೆ 2021ರ ಜನವರಿಯಿಂದ ಮಾರ್ಚ್ ತನಕ ಗೋಲ್ಡನ್ ಚಾರಿಯಟ್ ರೈಲನ್ನು ಓಡಿಸಲಿದೆ. ಹೊಸ ಮಾದರಿಯಲ್ಲಿ, ನೂತನ ವಿನ್ಯಾಸ, ಸೇವೆಗಳ ಜೊತೆ ರೈಲು ಸಂಚಾರ ನಡೆಸಲಿದೆ.

ಬೆಳಗಾವಿ ಸಂಸದ ದಿ. ಸುರೇಶ್ ಅಂಗಡಿ ರೈಲ್ವೆ ಖಾತೆ ರಾಜ್ಯ ಸಚಿವರಾಗಿದ್ದಾಗ ಗೋಲ್ಡನ್ ಚಾರಿಯಟ್ ರೈಲು ಸಂಚಾರ ಆರಂಭಿಸುವ ಕುರಿತು ಪ್ರಕ್ರಿಯೆ ಆರಂಭವಾಗಿತ್ತು. ಕರ್ನಾಟಕ ರಾಜ್ಯ ಪ್ರವಾಸೋದ್ಯಮ ಅಭಿವೃದ್ಧಿ ನಿಗಮ (ಕೆಎಸ್‌ಟಿಡಿಸಿ) ಜೊತೆಗೆ ಭಾರತೀಯ ರೈಲ್ವೆ ಕೇಟರಿಂಗ್ ಮತ್ತು ಪ್ರವಾಸೋದ್ಯಮ ನಿಗಮ (ಐಆರ್‌ಟಿಸಿ) ಒಪ್ಫಂದ ಮಾಡಿಕೊಂಡಿತ್ತು.

ಗೋಲ್ಡನ್ ಚಾರಿಯಟ್ ರೈಲಿನ ವಿನ್ಯಾಸವನ್ನು ಬದಲಾವಣೆ ಮಾಡಿದೆ.  ಪ್ರವಾಸಿ ಪ್ಯಾಕೇಜ್ ಗಳ ದರವೂ ಕಡಿಮೆ ಇದೆ. ಸ್ಮಾರ್ಟ್ ಟಿವಿ, ಸಿಸಿಟಿವಿ, ಫೈರ್ ಅಲಾರಾಂ ಸೇರಿ ಹಲವು ಹೊಸ ಸೇವೆಗಳನ್ನು ಸಹ ಪರಿಚಯಿಸುತ್ತಿದೆ.

ಗೋಲ್ಡನ್ ಚಾರಿಯಟ್ ವೆಬ್‍ಸೈಟ್‍ನಲ್ಲಿ ಪ್ಯಾಕೇಜ್ ವಿವರ ಲಭ್ಯವಿದೆ, ಮುಂಗಡ ಬುಕ್ಕಿಂಗ್ ಸಹ ಆರಂಭವಾಗಿದೆ. ಐಷಾರಾಮಿ ಗೋಲ್ಡನ್ ಚಾರಿಯಟ್ ರೈಲು ನಿರ್ವಹಣೆಯನ್ನು 10 ವರ್ಷಗಳ ಕಾಲ ಮಲ್ಪೆ ಗ್ರೂಪ್ ಆಫ್ ಹೋಟೆಲ್‍ಗೆ ನೀಡಲಾಗಿತ್ತು. 18 ಬೋಗಿಗಳ ರೈಲು ಸಂಚಾರದಿಂದ ಲಾಭಕ್ಕಿಂತ ನಷ್ಟವೇ ಹೆಚ್ಚಾಗಿತ್ತು.  ಇದರಿಂದಾಗಿ 2018ರ ಸೆಪ್ಟೆಂಬರ್‌ನಲ್ಲಿ ಒಪ್ಪಂದ ಅಂತ್ಯಗೊಂಡಿತ್ತು. ಬಳಿಕ ಐಆರ್‍ಟಿಸಿಗೆ ನಿರ್ವಹಣೆಯನ್ನು ನೀಡಲಾಗಿತ್ತು. ಇದೀಗ ಹೊಸ ಲುಕ್ ನೊಂದಿಗೆ ಸಜ್ಜಾಗಿದೆ, ಗೋಲ್ಡನ್ ಚಾರಿಯಟ್.

Exit mobile version