ಕೊರೊನಾ ಸಂದಿಗ್ಧ ಪರಿಸ್ಥಿತಿಯಲ್ಲಿ ದಸರಾ ಆಚರಣೆ ಅಗತ್ಯವಿಲ್ಲ: ಡಾ.ಎಸ್.ಎಲ್.ಭೈರಪ್ಪ

ಮೈಸೂರು: ದೇಶದೆಲ್ಲೆಡೆ ಕೊರೊನಾ ಹಾವಳಿ ಹೆಚ್ಚಿದ್ದು, ಜನರು ಜೀವ ಕಳೆದುಕೊಳ್ಳುವ ಪರಿಸ್ಥಿತಿ ಎದುರಾಗಿದೆ. ಇಂತಹ ಸಂದಿಗ್ಧತೆಯಲ್ಲೂ ನಾಡಹಬ್ಬ ದಸರಾ ಮಹೋತ್ಸವ ಆಚರಣೆ ಅವಶ್ಯಕತೆ ಇತ್ತೆ ಎಂದು ಕಾದಂಬರಿಕಾರ ಎಸ್‌.ಎಲ್.ಭೈರಪ್ಪ ವಿರೋಧ ವ್ಯಕ್ತಪಡಿಸಿದ್ದಾರೆ.

ಕುವೆಂಪುನಗರದಲ್ಲಿ ಶನಿವಾರ ಕೋಟ ಶಿವರಾಮ ಕಾರಂತ ಹುಟ್ಟೂರ ಪ್ರಶಸ್ತಿ ಸ್ವೀಕರಿಸಿ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಜನರ ಆರೋಗ್ಯದ ಹಿತದೃಷ್ಟಿಯಿಂದ ದಸರಾ ಅಚರಣೆ ಬಗ್ಗೆ ಸರ್ಕಾರ ಮತ್ತೊಮ್ಮೆ ಗಂಭೀರವಾಗಿ ಚಿಂತಿಸಬೇಕಿದೆ ಎಂದು ಸಲಹೆ ನೀಡಿದ್ದಾರೆ.

ಕೋವಿಡ್‌ ಸಂದರ್ಭದಲ್ಲಿ ದಸರಾ ಆಚರಣೆ ಅಗತ್ಯವಿಲ್ಲ. ಮೈಸೂರು ದಸರಾ ಆಚರಣೆಗೆ ಇನ್ನೂರು ಜನರ ಅಗತ್ಯವೂ ಇಲ್ಲ. ಎಲ್ಲರೂ ತಮ್ಮ ತಮ್ಮ ಮನೆಯಲ್ಲೇ ಹಬ್ಬ ಆಚರಿಸಿ ಕೊಂಡರೆ ಉತ್ತಮ. ಚಾಮುಂಡಿಬೆಟ್ಟದಲ್ಲಿ ದೇವರಿಗೆ ಪೂಜೆ ಸಲ್ಲಿಸಿ ಅರಮನೆಯಲ್ಲಿ ಅಂಬಾರಿಗೆ ಪೂಜೆ ಸಲ್ಲಿಸಿದರೆ ಸಾಕು.

ಇದಕ್ಕೆ ಜನ ಏಕೆ ಬೇಕು? ಆನೆ ಮೇಲೆ ಅಂಬಾರಿ ಕೂರಿಸಲು ಮಾವುತರು ಇದ್ದರೆ ಸಾಕು, ಬೇರೆಯವರು ಯಾಕೆ? ಕೆಲವರು ದಸರಾ ಇಲ್ಲದಿದ್ದರೆ ನಮ್ಮ ಬಿಸಿನೆಸ್ ಹಾಳಾಗುತ್ತಿದೆ ಎನ್ನುತ್ತಿದ್ದಾರೆ. ಇವರ ಬಿಸಿನೆಸ್‌ಗಾಗಿ ಜನರು ತೊಂದರೆ ಅನುಭವಿಸಬೇಕೇ ಎಂದು ಭೈರಪ್ಪ ಪ್ರಶ್ನಿಸಿದರು.

ಯಾವುದೇ ಕಾರಣಕ್ಕೂ ಜನರ ಗುಂಪನ್ನು ಸೇರಿಸಬಾರದು. ಸರ್ಕಾರ ತನ್ನ ನಿರ್ಧಾರವನ್ನು ಪ್ರಕಟಿಸಬಹುದು. ಆದರೆ ಜನರ ಆರೋಗ್ಯ ಮುಖ್ಯ. ಹಾಗಾಗಿ ದಸರಾ ಆಚರಣೆ ಅಗತ್ಯವಿಲ್ಲ ಎಂದು ಹೇಳಿದರು.

Exit mobile version