ಖಾತೆ ಬದಲಾವಣೆ: ಶ್ರೀರಾಮುಲು- ಸುಧಾಕರ್ ವಿವಾದಕ್ಕೆ ಪೂರ್ಣವಿರಾಮ

ಬೆಂಗಳೂರು ಅ.13: ಏಕಾ ಏಕಿ ಬದಲಾದ ಖಾತೆಯಿಂದ ಅಸಮಾಧಾನಗೊಂಡಿದ್ದ ಸಚಿವ ಶ್ರೀರಾಮುಲು ಮನಸ್ತಾಪ ಶಮನಗೊಂಡಿದ್ದು, ಮುಖ್ಯ ಮಂತ್ರಿ ಬಿ ಎಸ್ ಯಡಿಯೂರಪ್ಪ ಮಾಡಿದ ಸಂಧಾನವು ಯಶಸ್ವಿಯಾಗಿದೆ. ಆರೋಗ್ಯ  ಮತ್ತು ಕುಟುಂಬ ಕಲ್ಯಾಣ ಮತ್ತು ಹಿಂದುಳಿದ ವರ್ಗಗಳ ಕಲ್ಯಾಣ ಖಾತೆ ಹಿಂಪಡೆದ ರಾಜ್ಯ ಸರ್ಕಾರವು ಸಮಾಜ ಕಲ್ಯಾಣ ಖಾತೆಯನ್ನು ನೀಡಿದ್ದರಿಂದ ಬೆಸರಗೊಂಡಿದ್ದ ಶ್ರೀರಾಮುಲು ಅಜ್ಞಾತ ಸ್ಥಳಕ್ಕೆ ತೆರಳಿದ್ದರು.

ಇಂದು ಮುಖ್ಯಮಂತ್ರಿ ಬಿ ಎಸ್ ಯಡಿಯೂರಪ್ಪನವರು ಸಂಧಾನಕ್ಕೆಂದು ಸುಧಾಕರ್ ಹಾಗೂ ಶ್ರೀರಾಮುಲು ಅವರನ್ನು ತಮ್ಮ ಅಧಿಕೃತ ನಿವಾಸವಾದ ಕಾವೇರಿಗೆ ಕರೆಸಿಕೊಂಡಿದ್ದರು. ಈ ಸಲುವಾಗಿ ಉಭಯ ಸಚಿವರಿಬ್ಬರೂ ಬೆಳಿಗ್ಗೆ ಸಿಎಂ ಅಧಿಕ್ಋತ ನಿವಾಸಕ್ಕೆ ಆಗಮಿಸಿದ್ದು ಸುಮಾರು 20 ನಿಮಿಷಗಳ ಕಾಲ ಮುಖ್ಯಮಂತ್ರಿ ಜೊತೆ ಮಾತುಕತೆ ನಡೆಸಿದರು.

ನೀವು ಇಲಾಖೆ ಸಚಿವರಾಗಿ ನಿಮ್ಮ ಖಾತೆಯನ್ನು ಯಶಸ್ವಯಾಗಿಯೇ ನಿಭಾಯಿಸಿದ್ದೀರಿ. ಖಾತೆ ಹಿಂದೆ ಪಡೆದಿರುವುದನ್ನು ಹಿನ್ನಡೆಯೆಂದು ಭಾವಿಸಬೇಡಿ. ಏಕೆಂದರೆ ಹೈಕಮಾಂಡ್ ನಿರ್ದೇಶನದಂತೆ ನಾನು ಖಾತೆ ಮರು ಹಂಚಿಕೆ ಮಾಡಿದ್ದೇನೆಯೇ ಹೊರತು, ಬೇರೆ ಯಾವ ಅಸಮಾಧಾನದಿಂದಲೂ ಅಲ್ಲ. ಈ ಕೊವಿಡ್‌ ಪೆಂಡಾಮಿಕ್‌ ಪರಿಸ್ಥಿತಿಯಲ್ಲಿ ನಿಮಗೆ ವಹಿಸಿದ ಖಾತೆಯನ್ನು ಸಮರ್ಪಕವಾಗಿ ನಿಭಾಯಿಸಿದ್ದೀರಿ. ವರಿಷ್ಟರ ನಿರ್ಧೇಶನದಂತೆ ಕೆಲವು ಖಾತೆಗಳನ್ನು ಬದಲಿಸಲಾಗಿದೆ. ಹಾಗೆಯೇ ರಾಜ್ಯ ಸರ್ಕಾರದ ನಿರ್ವಹಣೆಯಲ್ಲಿ ಸಮಾಜ ಕಲ್ಯಾಣ ಇಲಾಖೆಯೂ ಅತ್ಯಂತ ಪ್ರಮುಖ ಇಲಾಖೆಯಾಗಿದೆ. ಇದನ್ನು ನೀವು ನಿಭಾಯಿಸುವಿರೆಂಬ ನಂಬಿಕೆಯಿಂದ ಈ ಖಾತೆಯ ಜವಬ್ದಾರಿಯನ್ನು ನಿಮಗೆ ನೀಡಲಾಗಿದೆ.  ಇದರಲ್ಲಿ ಹಿನ್ನಡೆ ಮುನ್ನಡೆ ಎಂಬ ಬೇಧ  ಬರುವುದಿಲ್ಲ ಎಂದು ಶ್ರೀರಾಮುಲು ಅವರಿಗೆ ಮನವರಿಕೆ ಮಾಡಿಕೊಟ್ಟಿದ್ದಾರೆ.

ಖಾತೆ ಬದಲಿಸುವುದು ಮುಖ್ಯಮಂತ್ರಿಗೆ ಬಿಟ್ಟಿದ್ದು, ಆದರೆ ನನ್ನನ್ನು ಸೌಜನ್ಯಕ್ಕಾದರೂ ಒಂದು ಮಾತು ಹೇಳಿ, ನನ್ನ ಗಮನಕ್ಕೆ ತರದೆ ಬದಲಾವಣೆ ಮಾಡಿದ್ದು ಅತೀವ ನೋವುಂಟಾಗಿದೆ. ಹೀಗೆ ದಿಢೀರನೆ ಖಾತೆ ಬದಲಾವಣೆ ಮಾಡಿದ್ದರಿಂದ, ನಾನು ಭ್ರಷ್ಟಾಚಾರ ಮಾಡಿದ್ದೇನೆಂದು ವಿರೋಧ ಪಕ್ಷದವರು ಆರೋಪಿಸುತ್ತಾರೆ. ಇಂತಹ ತೀರ್ಮಾನ ಕೈಗೊಳ್ಳುವ  ಮೊದಲು ನನ್ನ ಅಭಿಪ್ರಾಯ ಕೇಳಬೇಕಿತ್ತು, ನನ್ನೊಬ್ಬನ ಖಾತೆಯನ್ನಷ್ಟೇ ಬದಲಾಯಿಸಿದರೆ ನಾನು ಜನರಿಗೆ ಏನೆಂದು ಉತ್ತರಿಸಲಿ? ಎಂದು ಬಿಎಸ್‌ವೈ ಬಳಿ ತಮ್ಮ ಅಸಮಧಾನವನ್ನು  ವ್ಯಕ್ತಪಡಿಸಿದ್ದಾರೆ.

ನಾಲ್ಕು ವಿಧಾನ ಸಭಾ ಕ್ಷೇತ್ರದ ಚುನಾವಣೆ ನಡೆಯಲಿದ್ದು ಅದು ಮುಗಿದ ಬಳಿಕ ಸಚಿವ ಸಂಪುಟ ಪುನಾರಾರಚನೆ ಆಗುವುದಿದೆ. ಆ ಸಂದರ್ಭದಲ್ಲಿ ನಿಮ್ಮ ನಾಯಕತ್ವಕ್ಕೆ ಅನುಗುಣವಾಗಿ ಸ್ಥಾನ-ಮಾನ ನೀಡಲಾಗುವುದು ಎಂದರು. ಈ ಸಂಧರ್ಭದಲ್ಲಿ ವರಿಷ್ಟರ ತೀರ್ಮಾನವನ್ನು ಪ್ರಶ್ನಿಸುವ ದುಸ್ಸಾಹಸ ಮಾಡಬೇಡಿ ಎಂದು ಮನವರಿಕೆ ಮಾಡಿಸಿದರು. ಮುಂದಿನ ದಿನಗಳಲ್ಲಿ ನಿಮಗೆ ಉತ್ತಮ ಭವಿಷ್ಯವಿದೆ, ಎಂದು ಸಿಎಂ ಅವರು ಅಭಯ ನೀಡಿದ್ದಾರೆ. ಕೊನೆಗೆ ಶ್ರೀರಾಮುಲು ಅವರು ಈ ಖಾತೆಯ ವಿವಾದಕ್ಕೆ ಒಲ್ಲದ ಮನಸ್ಸಿಂದಲೇ  ಪೂರ್ಣವಿರಾಮವಿಟ್ಟಿದ್ದಾರೆ.

Exit mobile version