ಗಣಿಗಾರಿಕೆ ಕುಡಿಸುತ್ತಿದೆ ವಿಷನೀರು

#ಗಣಿಗಾರಿಕೆ  ಕುಡಿಸುತ್ತಿದೆ  ವಿಷ  ನೀರು | ILLEGAL MINING -POISON WATER | Citizen journalist

ಚಿಕ್ಕಬಳ್ಳಾಪುರ ಪಂಚ ನದಿಗಳ ನಾಡು. ಆದ್ರೆ ಈಗ ಈ ನದಿಗಳ ಮೂಲವೇ ನಾಶವಾಗಿ ಹೋಗುತ್ತಿದೆ. ಬೆಟ್ಟ ಗುಡ್ಡಗಳು ಪುಡಿಪುಡಿಯಾಗಿ ಹೋಗಿವೆ. ಜನ ನೀರಿಲ್ಲದೆ, ಪ್ರಾಣಿಗಳು ಮೇವಿಲ್ಲದೆ ಒದ್ದಾಡುತ್ತಿದ್ದಾರೆ. ಈ ಭಾರೀ ಸಮಸ್ಯೆಗೆ ಕಾರಣ ಏನು ಗೊತ್ತಾ? ಅಕ್ರಮ ಗಣಿಗಾರಿಕೆ.

ಚಿಕ್ಕಬಳ್ಳಾಪುರದ ಬಾಗೇಪಲ್ಲಿ ತಾಲೂಕಿನ ಕೊತ್ತಕೋಟೆ ಗ್ರಾಮ ಪಂಚಾಯತಿ ವ್ಯಾಪ್ತಿಯಲ್ಲಿಎಗ್ಗಿಲ್ಲದೆ ಭಯಾನಕವಾಗಿ ಅಕ್ರಮ ಗಣಿಗಾರಿಕೆ ನಡೆಯುತ್ತಿದೆ. ಜನವಸತಿ ಪ್ರದೇಶದಲ್ಲಿ ನಡೀತಿರೋ ಈ ಗಣಿಗಾರಿಕೆಯಿಂದ ಜನ ತತ್ತರಿಸಿ ಹೋಗಿದ್ದಾರೆ. ನಿರಂತರವಾಗಿ ನಡೀತಿರೋ ಅಕ್ರಮ ಗಣಿಗಾರಿಕೆಯಿಂದ ಬೆಟ್ಟಗುಡ್ಡಗಳೆಲ್ಲಾ ನಾಶವಾಗಿ ಹೋಗಿವೆ. ಜನಮೂಲಗಳೆಲ್ಲಾ ಬತ್ತಿ ಹೋಗಿವೆ. ಶಬ್ದ ಮಾಲಿನ್ಯ, ವಾಯು ಮಾಲಿನ್ಯದಿಂದ ನಾನಾ ರೋಗಗಗಳು ಜನರನ್ನ ಕಾಡ್ತಿವೆ.

ಮುಖ್ಯವಾಗಿ ಬಾಗೇಪಲ್ಲಿಯ ಜನರು ಬೆಟ್ಟ ಗುಡ್ಡಗಳನ್ನೇ ನಂಬಿ ಜೀವನ ನಡೆಸುತ್ತಿದ್ದಾರೆ. ಇಲ್ಲಿನ ಮಂದಿಯ ಮುಖ್ಯ ಕಸುಬು ಹೈನುಗಾರಿಕೆ. ಕುರಿ ಮೇಕೆ ದನ ಮುಂತಾದ ಸಾಕು ಪ್ರಾಣಿಗಳನ್ನು ಸಾಕಿಕೊಂಡು ಜೀವನ ಸಾಗಿಸುವವರು. ಆದರೆ ದುರಂತ ನೋಡಿ, ಅಕ್ರಮ ಗಣಿಗಾರಿಕೆಯಿಂದ ಸಾಕು ಪ್ರಾಣಿಗಳಿಗೆ ಮೇವಿಲ್ಲದಂತಾಗಿದೆ.

ಗಣಿಗಾರಿಕೆಯ ಅಬ್ಬರಕ್ಕೆ ಬೆಟ್ಟಗುಡ್ಡಗಳು ಮರಗಳು ಗಿಡ ಗಂಟಿಗಳೇ ಇಲ್ಲದಂತಾಗಿವೆ. ಇದರಿಂದ ಬೆಟ್ಟಗುಡ್ಡಗಳಲ್ಲಿ ವಾಸಿಸುತ್ತಿದ್ದ ಜಿಂಕೆಗಳು ಆಹಾರವಿಲ್ಲದೆ ಬಳಲುತ್ತಾ ದಿಕ್ಕಾಪಾಲಾಗಿ ನಾಯಿಗಳ ಪಾಲಾಗುತ್ತಿವೆ. ಬಾಗೇಪಲ್ಲಿಯಲ್ಲಿ ೨೦೧೭ ರಿಂದ ಗಣೀಗಾರಿಕೆ ನಡೆಯುತ್ತಿದೆ. ಈ ಬಗ್ಗೆ ಸರ‍್ವಜನಿಕರು ಜಿಲ್ಲಾಧಿಕಾರಿಗಳಿಗೆ ಮನವಿಯನ್ನು ನೀಡಿದ್ದರು. ಗಣಿಗಾರಿಕೆ ಆರಂಭವಾದ ಮೇಲೂ ೨ ದಿನ ತಾಲೂಕು ಪಂಚಾಯತ್ ಕಛೇರಿ ಮುಂದೆ ಪ್ರತಿಭಟನೆಯನ್ನು ಮಾಡಿದ್ದರೂ, ಆದ್ರೆ ಯಾವುದಕ್ಕೂ ಕ್ಯಾರೇ ಅನ್ನದೆ ಗಣಿಗಾರಿಕೆ ನಿರಾತಂಕವಾಗಿ ಸಾಗುತ್ತಿದೆ.

ಗಣಿಗಾರಿಕೆಯಿಂದ ಸುತ್ತಮುತ್ತಲಿನ ಪ್ರದೇಶಗಳು ಕೆಸರುಮಯವಾಗಿವೆ. ಈ ಗಣಿಗಾರಿಕೆಯಿಂದಾಗಿ ಗ್ರಾಮದ ಜನರು ಕೊಳಕು ನೀರನ್ನೇ ಉಪಯೋಗಿಸಬೇಕಾಗಿದೆ. ಮನೆಯ ಸುತ್ತ ಮುತ್ತೆಲೆಲ್ಲಾ ಕೊಳಕು ನೀರೇ ತುಂಬಿಕೊಂಡಿದೆ. ಅದರಿಂದ ಅನೇಕ ಕಾಯಿಲೆಗಳಿಗೆ ತುತ್ತಾಗುತ್ತಿದ್ದಾರೆ. ಕುರಿ, ಮೇಕೆಗಳೂ ನಿತ್ಯ ಕೊಳಕು ನೀರನ್ನೇ ಸೇವನೆ ಮಾಡುತ್ತಿರುವುದರಿಂದ ಅವು ಕೂಡ ನಾನಾ ರೋಗಗಳಿಗೆ ತುತ್ತಾಗುತ್ತಿವೆ. ಬಾಗೇಪಲ್ಲಿ ತಾಲೂಕಿನ ಜನರು ಕುಡಿಯುವ ನೀರಿಗೆ ಕೆರೆಗಳನ್ನೇ ಅವಲಂಭಿಸುತ್ತಿದ್ರು. ಈ ಕೆರೆಗಳಿಗೆ ಬೆಟ್ಟಗಳಿಂದ ನೀರು ಹರಿದು ಬರುತ್ತಿತ್ತು. ಆದ್ರೆ ಇದೀಗ ನೀರಿನ ಉಗಮಸ್ಥಾನಗಳೆಲ್ಲಾ ಗಣಿಗಾರಿಕೆ ಬಲಿಯಾಗಿ ನಾಶವಾಗಿವೆ.

ಇಡೀ ಗ್ರಾಮಸ್ಥರಿಗೆ ಇಲ್ಲಿ ಕೊಳಕು ನೀರೇ ಗತಿಯಾಗಿದೆ ಬಟ್ಟೆ ಒಗೆಯಲು, ಪಾತ್ರೆ ತೊಳೆಯಲು ಕುಡಿಯಲು ಈ ಕೊಳಕು ನೀರನ್ನೇ ಉಪಯೋಗಿಸುತ್ತಿದ್ದಾರೆ ನೋಡಿ. ಜಲ ಮೂಲಗಳಲ್ಲೇ ಗಣಿಗಾರಿಕೆಯಿಂದ ನಾಶವಾಗಿರೋದ್ರಿಂದ ಜನ ಶುದ್ಧ ಕುಡಿಯುವ ನೀರು ಅರಸಿ ಮೈಲಿಗಟ್ಟಲೆ ದೂರ ಹೋಗಬೇಕಾಗಿದೆ. ಈ ಕೊಳಕು ನೀರನ್ನು ಕುಡಿದು ಜನ ನಾನಾ ರೋಗಗಳಿಂದ ಬಳಲುತ್ತಿದ್ದಾರೆ. ನೀರಿಗಾಗಿ ಈ ಗ್ರಾಮದಲ್ಲಿ ಹಾಹಾಕಾರ ಪ್ರಾರಂಭವಾಗಿದೆ. ಹನಿ ನೀರಿಗಾಗಿ ಜನ ಕಾದಾಟ ಮಾಡುವ ಸ್ಥಿತಿ ಎದುರಾಗಿದೆ. ಆದ್ರೂ ಯಾರೂ ಇವರ ಕಷ್ಟಗಳನ್ನು ಕೇಳುವವರಿಲ್ಲ ಎಂಬುದು ಇವರ ದೂರು.

ಗಣಿಗಾರಿಕೆಯಿಂದ ಇಷ್ಟೆಲ್ಲಾ ಸಮಸ್ಯೆಗಳು ಉಂಟಾದ್ರೂ, ಗಣಿ ಮತ್ತು ಭೂವಿಜ್ಙಾನ ಇಲಾಖೆಯಾಗಲಿ, ಪರಿಸರ ಇಲಾಖೆ, ಪಂಚಾಯತ್, ಜಿಲ್ಲಾಡಳಿತ ಯಾವುದೂ ಇವರ ನೋವಿಗೆ ಸ್ಪಂದಿಸುತ್ತಿಲ್ಲ. ಲಂಚ ತಿಂದ ಅಧಿಕಾರಿಗಳಿಗೆ ಜನರ ನೋವಿಗಿಂತ ಕಾಸೇ ದೊಡ್ಡದಾಗಿದೆ. ಅಲ್ಲದೆ ಇದರಿಂದಾಗೋ ಭಾರೀ ಅಪಾಯವನ್ನು ನರ‍್ಲಕ್ಷ್ಯಿಸುತ್ತಿದ್ದಾರೆ. ಈಗಲಾದ್ರೂ ಜಿಲ್ಲಾಡಳಿತ ಕಣ್ತೆರೆದು ಈ ಜನರ ಸಮಸ್ಯೆಗೆ ಸ್ಪಂದಿಸಲಿ. ಜನರ ನೋವನ್ನ ಪರಿಹರಿಸಲಿ.

ಬಾಗೇಪಲ್ಲಿಯಿಂದ ಸಿಟಿಜನ್ ರ‍್ನಲಿಸ್ಟ್ ನರಸಿಂಹಮರ‍್ತಿ

Exit mobile version