ಚಿಕ್ಕಬಳ್ಳಾಪುರದ ಚಿಂತಾಮಣಿ ತಾಲೂಕಿನ ಗಣಿಗಾರಿಕೆ

ಇತ್ತೀಚೆಗೆ ರಾಜ್ಯದಲ್ಲಿ ಅಕ್ರಮ ಗಣಿಗಾರಿಕೆಯ ಅಬ್ಬರ ಹೆಚ್ಚುತ್ತಲೇ ಇದೆ. ಹಣದಾಸೆಗೆ ಜನ ಕಾನೂನು ಮೀರಿ ಗಣಿಗಾರಿಕೆ ನಡೆಸಿ ಸ್ಳಳೀಯರಿಗೆ ಭಾರೀ ತೊಂದರೆ ಕೊಡ್ತಿದ್ದಾರೆ. ಇದಕ್ಕೆ ಚಿಂತಾಮಣಿಯ ನರಸಾಪುರದಲ್ಲಿ ನಡೀತಿರೋ ಅಕ್ರಮಗಣಿಗಾರಿಕೆಯೇ ಸಾಕ್ಷಿ. ಚಿಕ್ಕಬಳ್ಳಾಪುರ ಜಿಲ್ಲೆಯ ಚಿಂತಾಮಣಿ ತಾಲೂಕಿನ ಅಂಬಾಜಿ ದುರ್ಗಾ ಹೋಬಳಿಯ ಕೋಟಗಲ್ ಗ್ರಾಮದ  ನರಸಾಪುರದಲ್ಲಿ ನಡೆಯುತ್ತಿರುವ ಅಕ್ರಮಗಣಿಗಾರಿಕೆಯ ಮಾಹಿತಿ ಇಲ್ಲಿದೆ. ಗಣಿಗಾರಿಕೆಯಿಂದ ಊರಿನಲ್ಲಿರುವ ಮನೆಗಳೆಲ್ಲಾ ಬಿರುಕು ಬಿಡುತ್ತಿವೆ. ಹೊಸಮನೆಗಳನ್ನಂತೂ ಕಟ್ಟುವ ಹಾಗೇ ಇಲ್ಲ. ಈಗಾಗಲೇ ಇಲ್ಲಿ ಹಲವಾರು ಪ್ರಾಣಿ ಪಕ್ಷಿಗಳ ಮಾರಣಹೋಮವಾಗಿವೆ. ಸುತ್ತಮುತ್ತಲೂ ಯಾವುದೇ ಬೆಳೆ ಬೆಳೆಯುವಂತಿದೆ.

ಇಲ್ಲಿನ ಬೆಟ್ಟ ಸುಮಾರು 150 ಅಡಿ ಎತ್ತರವಾಗಿತ್ತು ಆದರೆ ಈಗ ಹೇಗಿದೆ ನೋಡಿ ಇನ್ನೂ ಆಳಕ್ಕೆ ಅಗಿಯುತ್ತಲೇ ಇದ್ದಾರೆ.  ಇಲ್ಲಿ ಸುತ್ತ ಮುತ್ತ ತುಂಬಾ ಮನೆಗಳಿವೆ ಎಲ್ಲಾ ಮನೆಗಳಿಗೂ ಈ ಗಣಿಗಾರಿಕೆಯಿಂದ ಅನೇಕ ತೊಂದರೆಗಳು ಆಗ್ತಾನೇ ಇವೆ. ಮನೆಗಳು ಬಿರುಕು ಬಿಟ್ಟಿವೆ. ಯಾವಾಗ ಮನೆ ಬೀಳುತ್ತದೋ ಎಂಬ ಭಯದಿಂದಲೇ ಬದುಕುತ್ತಿದ್ದಾರೆ ಇಲ್ಲಿನ ಜನರು. ಓದುತ್ತಿರುವ ಮಕ್ಕಳಿಗೂ ತುಂಬಾನೆ ತೊಂದರೆಗಳಾಗುತ್ತಿವೆ. ಓದಲು ಕುಳಿತರೆ ಈ ಗಣಿಗಾರಿಕೆಯ ವಿಪರೀತ ಶಬ್ದದಿಂದಾಗಿ ಓದಲೂ ಆಗುತ್ತಿಲ್ಲವೆಂಬುದು ಇಲ್ಲಿಯ ವಿದ್ಯಾರ್ಥಿಯ ಅಳಲಾಗಿದೆ. ಗಣಿಗಾರಿಕೆಯಿಂದಾಗಿ ಬರುವ ಕೆಟ್ಟ ನೀರು  ಇಲ್ಲಿನ ಕೆರೆಗೆ ಸೇರಿ  ಕೆರೆಯ ನೀರೂ ಕಲುಷಿತಗೊಂಡಿದೆ. ಈ ಕೆರೆಯ ನೀರನ್ನೂ ಬಳಸಲು ಜನ ಸಾಮಾನ್ಯರಿಗೆ ತೊಂದರೆಗಳಾಗುತ್ತಿವೆ. ಬೆಟ್ಟವನ್ನು ಒಡೆಯಲು ಬಳಸುವ ಮದ್ದು ಗುಂಡುಗಳಿಂದ ವಿಷಯುಕ್ತ ಅನಿಲ ಸೋರಿಕೆಯಾಗುವುದರಿಂದ ಜನರು ರೋಗಕ್ಕೆ ತುತ್ತಾಗುತ್ತಿದ್ದಾರೆ.  ಪ್ರಾಣಿ ಪಕ್ಷಿಗಳು  ಸಾಯುತ್ತಿವೆ. ಗಣಿಗಾರಿಕೆಯಿಂದ ಆಗುವ ಶಬ್ದಮಾಲಿನ್ಯದಿಂದಾಗಿ ಜನರಿಗೆ ಕಿರಿಕಿರಿಯಾಗುತ್ತಿದೆ. ಸುತ್ತಲಿನ ಪರಿಸರವೆಲ್ಲಾ ದೂಳಿನಿಂದ ಕೂಡಿದೆ.

ಈ ಗಣಿಗಾರಿಕೆಯ ಮಾಲೀಕರು ಹೊಸಕೋಟೆಯವರಾಗಿದ್ದು ಇವರ ಹಿಂದೆ ಪ್ರಭಾವಿ ರಾಜಕಾರಣಿಗಳಿದ್ದು ಇವರ ವಿರುದ್ಧ ಯಾರೂ ಕ್ರಮಕೈಗೊಳ್ಳುತ್ತಿಲ್ಲ. ಎಂಬುದು ಇಲ್ಲಿನ ಜನರ ದೂರಾಗಿದೆ.  ಇಲ್ಲಿನ ಜನರು ತಮ್ಮ ಅಹವಾಲನ್ನು ಗಣಿ ಮತ್ತು ಭೂವಿಜ್ಞಾನ ಇಲಾಖೆಯ ಗಮನಕ್ಕೆ ತಂದಿದ್ದರೂ ಯಾವುದೇ ಪ್ರಯೋಜನವೇ ಆಗಲಿಲ್ಲ .ಚಿಂತಾಮಣಿ ತಾಲೂಕಿನ  ಕೋಟಗಲ್ ಗ್ರಾಮದ   ಜನರ ಕಷ್ಟಗಳು  ಆದಷ್ಟು ಬೇಗ ನಿವಾರಣೆಯಾಗಲಿ  ಅಧಿಕಾರಿಗಳು ಇತ್ತ ನೋಡಿ ಇವರ ಕಷ್ಟಕ್ಕೆ ಸ್ಪಂದಿಸಲಿ ಎಂಬುದೇ ವಿಜಯಾ ಟೈಮ್ಸ್ ಆಶಯವಾಗಿದೆ.

Exit mobile version