ಚಿನ್ನಾಭರಣವಿದ್ದ ಬ್ಯಾಗ್ ಕಸಕ್ಕೆ ಎಸೆದು, ಕಸದ ಲಾರಿ ಹಿಂದೆ ಓಡಿದ ಮಹಿಳೆ….

ಮುಂಬೈ, ನ. 14: ದೀಪಾವಳಿ ಹಬ್ಬದ ಸಂಭ್ರಮದೊಂದಿಗೆ ಮನೆಯನ್ನು ಸ್ವಚ್ಛಗೊಳಿಸುವ ಭರದಲ್ಲಿ ಮಹಿಳೆಯೊಬ್ಬರು ಚಿನ್ನಾಭರಣದ ಬ್ಯಾಗನ್ನು ಕಸದ ತೊಟ್ಟಿಗೆ ಬಿಸಾಡಿ, ಫಜೀತಿಗೆ ಸಿಲುಕಿದ ಪ್ರಸಂಗ ನಡೆದಿದೆ.

ಮಹಾರಾಷ್ಟ್ರದ ಪುಣೆಯ ಪಿಂಪ್ಳೆ ಸೌದಾಗರ್ ನಿವಾಸಿ ರೇಖಾ ಸೇಲುಕಾರ್, ದೀಪಾವಳಿ ಹಬ್ಬಕ್ಕೆಂದು ಮನೆ ಸ್ವಚ್ಛಗೊಳಿಸಲು ಹೋಗಿ ಫಜೀತಿಗೆ ಸಿಲುಕಿದ ಮಹಿಳೆ. ಹಬ್ಬದ ಸಂಭ್ರಮದಲ್ಲಿ ಮನೆಯನ್ನು ಸ್ವಚ್ಛಗೊಳಿಸುತ್ತಿದ್ದ ರೇಖಾ, ಮನೆಯಲ್ಲಿದ್ದ ಹಳೆ ಬ್ಯಾಗ್ಗಳನ್ನು ಕಸದ ತೊಟ್ಟಿಗೆ ಬಿಸಾಡಿದ್ದಾರೆ. ಈ ನಡುವೆ ಲಕ್ಷಾಂತರ ರೂ. ಮೌಲ್ಯದ ಚಿನ್ನಾಭರಣವಿದ್ದ ಬ್ಯಾಗನ್ನು ಸಹ ಕಸದ ತೊಟ್ಟಿಗೆ ಬಿಸಾಡಿದ್ದಾರೆ. ಇದಾದ ಕೆಲವು ಹೊತ್ತಿನ ಬಳಿಕ ಚಿನ್ನಾಭರಣದ ಬ್ಯಾಗ್ ಕಾಣಿಸದಿದ್ದಾಗ ಕಂಗಾಲಾಗಿದ್ದ ರೇಖಾ ಅವರಿಗೆ ಬ್ಯಾಗನ್ನು ಕಸದ ತೊಟ್ಟಿಗೆ ಬಿಸಾಡಿದ್ದು ನೆನಪಾಗಿದೆ.

ಕೂಡಲೇ ಸ್ಥಳೀಯ ಸಾಮಾಜಿಕ ಕಾರ್ಯಕರ್ತ ಸಂಜಯ್ ಕುಟೆ ಎಂಬುವವರ ನೆರವು ಪಡೆದ ರೇಖಾ ಸೇಲುಕರ್, ಕಸ ಸಾಗಿಸಿದ ವಾಹನ ಎಲ್ಲಿಗೆ ಹೋಗಿದೆ ಎಂಬ ಮಾಹಿತಿ ಪಡೆದಿದ್ದಾರೆ. ನಂತರ ಕಸ ವಿಲೇವಾರಿ ಮಾಡುವ ಸ್ಥಳಕ್ಕೆ ತೆರಳಿ ಕಸವನ್ನು ಜಾಲಾಡಿದ ವೇಳೆ ರೇಖಾ ಅವರ ಬ್ಯಾಗ್ ಪತ್ತೆಯಾಗಿದೆ. ತಮ್ಮ ತಪ್ಪಿನಿಂದಾಗಿ ಹಲವರಿಗೆ ತೊಂದರೆ ನೀಡಿದ್ದಕ್ಕಾಗಿ ಅಧಿಕಾರಿಗಳಲ್ಲಿ ಕ್ಷಮೆ ಕೇಳಿ, ಕೃತಜ್ಞತೆಯನ್ನು ಸಲ್ಲಿಸಿದ್ದಾರೆ ಎಂದು ಸ್ಥಳೀಯ ಪತ್ರಿಕೆ ವರದಿ ಮಾಡಿದೆ.

Exit mobile version