ಜಗತ್ತಿನ ಸಿರಿವಂತರ ಸಾಲಿನಲ್ಲಿ ಮುಖೇಶ್ ಅಂಬಾನಿಗೆ 5ನೇ ಸ್ಥಾನ

Image : Forbes India

ವಿಶ್ವದ ಅಗ್ರಮಾನ್ಯ ಶ್ರೀಮಂತರ ಸಾಲಿನಲ್ಲಿ ಜಗತ್ತಿನ ಗಮನ ಸೆಳೆದಿರುವ ರಿಲಯನ್ಸ್ ಇಂಡಸ್ಟ್ರೀಸ್‍ ಲಿಮಿಟೆಡ್‍ ಅಧ್ಯಕ್ಷ ಮುಕೇಶ್​ ಅಂಬಾನಿ ವಿಶ್ವದ 5ನೇ ಶ್ರೀಮಂತ ವ್ಯಕ್ತಿಯಾಗಿ ಹೊರ ಹೊಮ್ಮಿದ್ದಾರೆ.


ಉದ್ಯಮ ಕ್ಷೇತ್ರದಲ್ಲಿ ತಮ್ಮದೇ ಛಾಪು ಮೂಡಿಸಿರುವ ಮುಖೇಶ್ ಅಂಬಾನಿ ಒಡೆತನದ ರಿಲಯನ್ಸ್​ ಜಿಯೋ ಸಂಸ್ಥೆಯ ಮೇಲೆ ವಿದೇಶಿ ಸಂಸ್ಥೆಗಳು ನಿರಂತರವಾಗಿ ಹೂಡಿಕೆ ಮಾಡುತ್ತಿವೆ. ಇದರ ಪರಿಣಾಮ, ಮುಖೇಶ್‍ ಅಂಬಾನಿ ಅವರ ಸಂಪತ್ತು ಒಂದೇ ದಿನ 2.12 ಶತಕೋಟಿ ಡಾಲರ್ ಏರಿಕೆಯಾಗಿದೆ. ಇದರಿಂದಾಗಿ ಮುಖೇಶ್‍ ಅಂಬಾನಿ ವಿಶ್ವದ ಸಿರಿವಂತರ ಸಾಲಿನಲ್ಲಿ 5ನೇ ಸ್ಥಾನಕ್ಕೇರಿದ್ದಾರೆ. ಆ ಮೂಲಕ ಗೂಗಲ್ ಸಂಸ್ಥಾಪಕ ಲ್ಯಾರಿ ಪೇಜ್ ಮತ್ತು ಅಮೆರಿಕಾದ ಕೊಡುಗೈದಾನಿ ವಾರೆನ್ ಭಪೆಟ್​ ಅವರನ್ನು ಅಂಬಾನಿ ಹಿಂದಿಕ್ಕಿದ್ದಾರೆ.

ಫೋರ್ಬ್ಸ್​​ನ ರಿಯಲ್​ ಟೈಮ್​ ಡೇಟಾದಲ್ಲಿ ಈ ಮಾಹಿತಿ ಲಭ್ಯವಾಗಿದೆ. ಸದ್ಯ ಅಂಬಾನಿ ಆಸ್ತಿ 5,59,734 ಕೋಟಿ ರೂಪಾಯಿ ಆದರೆ, ನಾಲ್ಕನೇ ಸ್ಥಾನದಲ್ಲಿರುವ ಫೇಸ್​ಬುಕ್​ ಸಂಸ್ಥಾಪಕ ಮಾರ್ಕ್​​ ಜುಕರ್​ಬರ್ಗ್ ಆಸ್ತಿ ಮೌಲ್ಯ 6,64,263 ಕೋಟಿ ರೂಪಾಯಿ ಆಗಿದೆ. ಅಮೆಜಾನ್​​ ಸ್ಥಾಪಕ ಮತ್ತು ಸಿಇಒ ಜೆಫ್​ ಬೆಜೋಸ್​ ಶ್ರೀಮಂತರ ಸಾಲಿನಲ್ಲಿ ಮೊದಲಿದ್ದಾರೆ. ಮೈಕ್ರೋಸಾಫ್ಟ್ ಸಹ​ ಸಂಸ್ಥಾಪಕ  ಬಿಲ್​ ಗೇಟ್ಸ್​ ಎರಡನೇ ಸ್ಥಾನದಲ್ಲಿದ್ದಾರೆ. LVMH ಸಂಸ್ಥೆಯ ಒಡೆಯ ಬರ್ನಾಟ್​ ಅರ್ನಾಡ್​ ಮೂರನೇ ಸ್ಥಾನದಲ್ಲಿದ್ದರೆ, ಫೇಸ್​ಬುಕ್​ ಸ್ಥಾಪಕ ಮಾರ್ಕ್​ ಜುಕರ್​ಬರ್ಗ್​ ನಾಲ್ಕನೇ ಸ್ಥಾನದಲ್ಲಿ ಹಾಗೂ ಅಂಬಾನಿ ಐದನೇ ಸ್ಥಾನದಲ್ಲಿದ್ದಾರೆ.

ಸತತವಾಗಿ ಜಿಯೋ ಸಂಸ್ಥೆಯ ಮೇಲೆ ಹೂಡಿಕೆ ಆದ ಬೆನ್ನಲ್ಲೇ ರಿಲಾಯನ್ಸ್​ ಷೇರುಗಳ ಮೌಲ್ಯ ದ್ವಿಗುಣವಾಗಿದೆ. ಹೀಗಾಗಿ ಅಂಬಾನಿ ಆಸ್ತಿ ಮೌಲ್ಯ ಹೆಚ್ಚಿದೆ. ಈ ಮೊದಲು ಅಂಬಾನಿ ವಿಶ್ವದ ಏಳನೇ ಶ್ರೀಮಂತರಾಗಿದ್ದರು. ಇತ್ತೀಚೆಗೆ ಅವರು ಆರನೇ ಸ್ಥಾನಕ್ಕೆ ಜಿಗಿದಿದ್ದರು.

Exit mobile version