ನಿರ್ಭಯಾ ಅತ್ಯಾಚಾರಿಗಳನ್ನು ಗಲ್ಲಿಗೇರಿಸುವ ಅವಕಾಶ ಕೊಡಿ: ಅಂತಾರಾಷ್ಟ್ರೀಯ ಶೂಟರ್‌ ನಿಂದ ಗೃಹ ಸಚಿವರಿಗೆ ರಕ್ತದಲ್ಲಿ ಪತ್ರ

ನವದೆಹಲಿ,ಡಿ.16: ದೆಹಲಿ ನಿರ್ಭಯಾ ಅತ್ಯಾಚಾರಿಗಳನ್ನು ಗಲ್ಲಿಗೆ ಹಾಕಿ ಎಂಬ ಕೂಗು ದೇಶದೆಲ್ಲೆಡೆ ಕೇಳಿಬರುತ್ತಿದೆ.  ಇಂತಹ ಕ್ರೂರಿಗಳನ್ನು ಗಲ್ಲಿಗೆ ಹಾಕಲು ನಾನು ಸಿದ್ದ ಎಂದು ದೇಶಾದ್ಯಂತ ಹಲವರು ಮುಂದೆ ಬರುತ್ತಿದ್ದಾರೆ. ಈಗ ಅಂತಾರಾಷ್ಟ್ರೀಯ ಮಟ್ಟದ ಕ್ರೀಡಾಪಟು ಶೂಟರ್ ವರ್ತಿಕಾ ಸಿಂಗ್ ಅವರ ಸರದಿ.

“ತಮ್ಮ ಮೇಲೆ ದೌರ್ಜನ್ಯ ಎಸಗುವ ಪುರುಷರ ವಧೆಗೆ ಮಹಿಳೆ ಸಮರ್ಥಳು ಎಂಬ ಸಂದೇಶವನ್ನು ರವಾನಿಸುವ ಸಲುವಾಗಿ ನಿರ್ಭಯಾ ಅತ್ಯಾಚಾರಿಗಳನ್ನು ಗಲ್ಲಿಗೇರಿಸುವ ಅವಕಾಶವನ್ನು ನನಗೆ ನೀಡಬೇಕು,” ಎಂದು ಅಂತಾರಾಷ್ಟ್ರೀಯ ಶೂಟರ್‌ ವರ್ತಿಕಾ ಸಿಂಗ್  ಅವರು ಕೇಂದ್ರ ಗೃಹ ಸಚಿವ ಅಮಿತ್‌ ಶಾ ಅವರಿಗೆ ಮನವಿ ಮಾಡಿದ್ದಾರೆ. ಈ ಸಂಬಂಧ ತಮ್ಮ ಹೆಬ್ಬರಳನ್ನು ಕೊಯ್ದುಕೊಂಡು, ಅದರ ರಕ್ತದಲ್ಲಿ ಸಿಂಗ್‌ ಅವರು ಗೃಹ ಸಚಿವರಿಗೆ ಪತ್ರ ಬರೆದಿದ್ದಾರೆ. ಸುದ್ದಿಮಾಧ್ಯಮಗಳಿಗೆ ಅದರ ಪ್ರತಿಯನ್ನು ಬಿಡುಗಡೆ ಮಾಡಿದ್ದಾರೆ.

ಅಲ್ಲದೆ ‘ನಾನು ಈ ಕೆಲಸವನ್ನು ಪ್ರಚಾರಕ್ಕಾಗಿ ಮಾಡಿಲ್ಲ. ನನಗೆ ನಟಿಯರು, ಶಾಸಕಿಯರು ಹಾಗೂ ಸಂಸದೆಯರು ಬೆಂಬಲ ನೀಡಬೇಕು. ಇದು ಅತ್ಯಾಚಾರಿಗಳಿಗೆ ತಕ್ಕ ಪಾಠವಾಗಬೇಕು. ಮಹಿಳೆ ಅಬಲೆಯಲ್ಲ, ಸಬಲೆ ಎಂಬುದನ್ನು ಸಾಬೀತುಪಡಿಸಬೇಕು’ ಎಂದು ಹೇಳಿದ್ದಾರೆ.

ದೇಶವನ್ನೇ ನಡುಗಿಸಿದ 2012ರ ನಿರ್ಭಯಾ ಸಾಮೂಹಿಕ ಅತ್ಯಾಚಾರ ಪ್ರಕರಣದಲ್ಲಿ ಮರಣದಂಡನೆಗೆ ಗುರಿಯಾಗಿರುವ ಅಪರಾಧಿಗಳನ್ನು ಸೋಮವಾರ (ಡಿ.16) ಗಲ್ಲಿಗೆ ಏರಿಸುವ ಸಾಧ್ಯತೆ ಇದೆ ಎಂದು ಮೂಲಗಳು ತಿಳಿಸಿವೆ.  2012ರ ಡಿಸೆಂಬರ್‌ 16ರಂದೇ ಆರು ಮಂದಿ ಪಾತಕಿಗಳು ಚಲಿಸುವ ಬಸ್ಸಿನಲ್ಲಿ ನಿರ್ಭಯಾರನ್ನು ಅತ್ಯಾಚಾರಗೈದು ಹತ್ಯೆ ಮಾಡಿದ್ದರು. ಅವರ ಪೈಕಿ ಒಬ್ಬ ತಿಹಾರ್‌ ಜೈಲಿನಲ್ಲಿಯೇ ಕಾಯಿಲೆಯಿಂದ ಮೃತಪಟ್ಟಿದ್ದು, ಅಪ್ತಾಪ್ತನಾಗಿದ್ದ ಇನ್ನೊಬ್ಬ ಶಿಕ್ಷೆ ಪೂರೈಸಿ ಬಿಡುಗಡೆ ಹೊಂದಿದ್ದಾನೆ. ಉಳಿದ ನಾಲ್ವರನ್ನು ಗಲ್ಲಿಗೆ ಏರಿಸಲು ತಿಹಾರ್‌ ಜೈಲಿನಲ್ಲಿ ಸಿದ್ಧತೆ ಮಾಡಿಕೊಳ್ಳಲಾಗಿದೆ.


Exit mobile version