ನೆರೆಗೆ ಕೊಚ್ಚಿ ಹೋಯ್ತು ಮಂಟೂರು ರೈತನ ಬದುಕು

Bagalkot mudhole flood problem | Citizen journalist | Vijaya times

ಉತ್ತರ ಕರ್ನಾಟಕದ ಭಾಗದ ರೈತರಿಗೆ ಬರ ಬಂದ್ರೆ ಒಂದು ಸಮಸ್ಯೆಯಾದ್ರೆ ನೆರೆ ಬಂದ್ರೆ ಇನ್ನೊಂದು ರೀತಿಯ ಸಮಸ್ಯೆ. ಈ ಬಾರಿ ಚೆನ್ನಾಗಿ ಮಳೆ ಏನೋ ಸುರಿದಿದೆ. ಆ ಮಳೆ ಮಾಡಿದ ಅವಾಂತರ ಒಂದಲ್ಲಾ ಎರಡಲ್ಲಾ. ಅದ್ರಲ್ಲೂ ಬಾಗಲಕೋಟೆ ಜಿಲ್ಲೆಯ ಮುಧೋಳ್‌ ತಾಲ್ಲೂಕಿನ ಮಂಟೂರು ಗ್ರಾಮದ ರೈತರ ನೋವು ಹೇಳ ತೀರದು.  ಭಾರೀ ಮಳೆಯಿಂದ ಬಂದ  ಪ್ರವಾಹದಿಂದ ಮುನ್ನೂರಕ್ಕೂ ಹೆಚ್ಚು ಎಕರೆ ಜಮೀನಿನ ಬೆಳೆ ಎಲ್ಲಾ ನಾಶವಾಗಿ ಹೋಗಿದೆ.

ಬೆವರು ಸುರಿಸಿ, ಕಷ್ಟ ಸಹಿಸಿ ಬೆಳೆದ ಬೆಳೆ ಧರೆಗುರುಳಿರೋ ದೃಶ್ಯ ನೋಡಿದ್ರೆ ಕರುಳು ಚುರುಕ್‌ ಅನ್ನುತ್ತೆ. ಇನ್ನೇನು ಫಸಲು ಕೈಸೇರಬೇಕು ಅನ್ನುವಷ್ಟೊತ್ತಿಗೆ ಮಳೆರಾಯನ ಅಬ್ಬರಕ್ಕೆ ಬೆಳೆಯೆಲ್ಲಾ ನೆಲಕಚ್ಚಿ ಬಿಟ್ಟಿದೆ. ನೂರಾರು ಎಕರೆ ಜೋಳದ ಗದ್ದೆಯಲ್ಲಿ ವಾರನುಗಟ್ಟಲೆ ನೀರು ತುಂಬಿ ಹೋಗಿರುವುದರಿಂದ ಕಾಂಡ ಕೊಳೆತು ಹೋಗಿ ನೆಲಕಚ್ಚಿದೆ. ಲಕ್ಷಾಂತರ ರೂಪಾಯಿ ಖರ್ಚು ಮಾಡಿ ಬೆಳೆದ ಬೆಳೆ ಈ ರೀತಿ ನಾಶ ಆಗಿರುವುದನ್ನ ಕಂಡಾಗ ರೈತನಿಗೆ ಆಕಾಶವೇ ತಲೆ ಮೇಲೆ ಬಿದ್ದಂತಾಗಿದೆ. ಈ ಜೋಳದ ಬೆಳೆ ಮೇವಲ್ಲ ಗೊಬ್ಬರಕ್ಕೂ ಬಳಕೆಯಾಗದ ಸ್ಥಿತಿಯಲ್ಲಿದೆ.  ಇನ್ನು ಕಬ್ಬು ಬೆಳೆಗಾರರ ನೋವು ಹೇಳ ತೀರದು. ಈ ಕಬ್ಬಿನ ಬೆಳೆಯ ಬಗ್ಗೆ ನೂರಾರು ಕನಸು ಕಂಡಿದ್ದ ರೈತ. ಕಬ್ಬು ಕಟಾವಾಗಿ ಪೇಮೆಂಟ್‌ ಕೈಸೇರಿದ್ರೆ ತನ್ನ ಸಮಸ್ಯೆಯೆಲ್ಲಾ ಪರಿಹಾರ ಆಗುತ್ತೆ ಅಂತ ತಿಳಿದಿದ್ದ. ಆದ್ರೆ ಈಗ ರೈತನ ಕನಸೆಲ್ಲಾ ನೆರೆಯಲ್ಲಿ ಕೊಚ್ಚಿ ಹೋಗಿದೆ. ಸಿಹಿ ತರಬೇಕಾಗಿದ್ದ ಕಬ್ಬು ಬೆಳೆ ರೈತನ ಬದುಕನ್ನು ಕಹಿಯಾಗಿಸಿದೆ. ಈಗ ಉಳಿದಿರೋದು ಸಾಲದ ಶೂಲವಷ್ಟೇ. ಬೆಳೆನಾಶದ ಬಗ್ಗೆ ಅಧಿಕಾರಿಗಳಿಗೆ ದೂರು ನೀಡಲಾಗಿದ್ದು, ಅಧಿಕಾರಿಗಳು ಬಂದು ಗದ್ದೆಗಳನ್ನು ಪರಿಶೀಲನೆ ಮಾಡಿದ್ದಾರೆ.

ಆದ್ರೆ ಸರ್ಕಾರ ಕೊಡೋ ಬೆಳೆ ಪರಿಹಾರ, ಆನೆ ಹೊಟ್ಟೆಗೆ ಅರೆಕಾಸಿನ ಮಜ್ಜಿಗೆಯಂತಾಗಿದೆ. ಈ ಪರಿಹಾರ ಕೆಲ ರೈತರಿಗೆ ಮಾತ್ರ ದಕ್ಕುತ್ತಿದ್ದು. ಹೆಚ್ಚಿನ ಸಂಖ್ಯೆಯ ರೈತರಿಗೆ ಪರಿಹಾರವೇ ಸಿಗುತ್ತಿಲ್ಲ.  ನೆರೆ, ಬರದ ಹೊಡೆತಕ್ಕೆ ನಿರಂತರವಾಗಿ ಸಿಕ್ಕ ಮುಧೋಳದ ರೈತರ ಬದುಕು ನಿಜವಾಗ್ಲೂ ಶೋಚನೀಯವಾಗಿದೆ. ಸರ್ಕಾರ ಇನ್ನಾದ್ರೂ ರೈತರ ಸಮಸ್ಯೆಯತ್ತ ಗಮನಹರಿಸಿ ಇವರಿಗೆ ಸೂಕ್ತ ಪರಿಹಾರ ಒದಗಿಸಲಿ. ರೈತರ ಬದುಕು ಹಸನಾಗಿಸಲಿ.

ಮುಧೋಳದಿಂದ ಸಿಟಿಜನ್‌ ಜರ್ನಲಿಸ್ಟ್‌ ಕೆಂಚು ಕಲಿಬಾಗಿ

Exit mobile version