ಪ್ರಭಾವಿಗಳಿಂದ ಅಕ್ರಮ ಕೆಂಪು ಕಲ್ಲಿನ ಗಣಿಗಾರಿಕೆ

illegal red stone quarry : VIP involved in illegal activities | ಪ್ರಭಾವಿಗಳಿಂದ ಅಕ್ರಮ ಕೆಂಪು ಕಲ್ಲಿನ | CJ

ಇವತ್ತಿನ ಸಿಟಿಜನ್ ಜರ್ನಲಿಸ್ಟ್ ಕಾರ್ಯಕ್ರಮದಲ್ಲಿ ನಾವು ಉಡುಪಿ ಜಿಲ್ಲೆಯ ಬೈಂದೂರಿನ ಕಾಲ್ತೋಡು ಗ್ರಾಮದಲ್ಲಿ ನಡೆಯುತ್ತಿರುವ  ಅಕ್ರಮ ಕೆಂಪು ಕಲ್ಲು ಗಣಿಗಾರಿಕೆಯ ವರದಿಯನ್ನು ನೋಡೋಣ. ಈ ಅಕ್ರಮದಲ್ಲಿ ಯಾರೆಲ್ಲಾ ಹೇಗೆ ಶಾಮೀಲಾಗಿದ್ದಾರೆ? ಇದರಿಂದ ಪರಿಸರಕ್ಕಾಗುವ ಅನ್ಯಾಯ ಏನು ಎಂಬುದನ್ನು ನೋಡಿ. ಇದು ಉಡುಪಿ ಜಿಲ್ಲೆಯ ಬೈಂದೂರು ತಾಲೂಕಿನ ಕಾಲ್ತೋಡು ಗ್ರಾಮದ  56 ಸರ್ವೆ ನಂಬರ್.  ಇದು ಮೀಸಲು ಅರಣ್ಯ ಪ್ರದೇಶ. ಇದ್ರಲ್ಲಿ ಒಟ್ಟು 36.76 ಎಕ್ರೆ ಜಾಗವಿದೆ.  ಸದ್ರಿ ಜಾಗದಲ್ಲಿ 2.34 ಎಕ್ರೆ ಸ್ಥಳವನ್ನು ಶಾಲೆಗೆ ಮೀಸಲಿಟ್ಟಿದ್ದು ಉಳಿದ 34.42 ಎಕ್ರೆ ಸ್ಥಳವನ್ನು ಮೀಸಲು ಅರಣ್ಯ ಅಂತ ಘೋಷಿಸಲಾಗಿತ್ತು.

ಈ ಮೀಸಲು ಅರಣ್ಯ ಪ್ರಾಣಿ ಪಕ್ಷಿಗಳ ಆವಾಸ ಸ್ಥಾನವಾಗಬೇಕಿತ್ತು. ಇಲ್ಲಿ ಪರಿಸರದ ರಕ್ಷಣೆಗೆ ಪೂರಕವಾಗಿ ಚಟುವಟಿಕೆಗಳು ನಡೀಬೇಕಿತ್ತು. ಆದ್ರೆ ದುರಂತ ನೋಡಿ, ಮೀಸಲು ಅರಣ್ಯ ಪ್ರದೇಶದಲ್ಲಿ ಅರಣ್ಯ ರಕ್ಷಣೆಯ ಬದಲು ಭಕ್ಷಣೆಯ ಕೆಲಸ ನಡೀತಿದೆ. ಅರಣ್ಯ ಭೂಮಿಯಲ್ಲಿ  ಬೈಂದೂರಿನ ಪ್ರಭಾವೀ ವ್ಯಕ್ತಿಗಳು ಅಕ್ರಮವಾಗಿ ಕೆಂಪುಕಲ್ಲಿನ ಗಣಿಗಾರಿಕೆಯನ್ನು ನಡೆಸಿ ಭಾರೀ ಪರಿಸರ ನಾಶ ಮಾಡ್ತಿದ್ದಾರೆ.  ಈ ಭಾರೀ ಅಕ್ರಮದಲ್ಲಿ ನೇರವಾಗಿ ಅರಣ್ಯ,  ಕಂದಾಯ ಮತ್ತು ಗಣಿ ಇಲಾಖಾ ಅಧಿಕಾರಿಗಳು ಶಾಮೀಲಾಗಿದ್ದಾರೆ. ರಾಜಕೀಯ ಮತ್ತು ಹಣದ ಬಲದಿಂದ  ಬೃಹತ್ ಮಟ್ಟದ ಕೆಂಪು ಕಲ್ಲಿನ ಗಣಿಗಾರಿಕೆಯನ್ನು ನಡೆಸುತ್ತಿದ್ದಾರೆ.

ಬೈಂದೂರು ಉಪ್ಪುಂದ ಗ್ರಾಮದ ಬಿಜೆಪಿ ಕಾರ್ಯಕರ್ತ  ಅಕ್ರಮವಾಗಿ ಗಣಿಗಾರಿಕೆ ಮಾಡುತ್ತಿದ್ದಾರೆ ಅನ್ನೋದು ಸ್ಥಳೀಯರ ಆರೋಪ.  ಯಾವುದೇ ಪರವಾನಗಿ ಇಲ್ಲದೆ, ಕಾನೂನುನನ್ನು ಉಲ್ಲಂಘಿಸಿ ಭಾರೀ ಗಣಿಗಾರಿಕೆಯನ್ನು ಕಳೆದ  2 ವರ್ಷದಿಂದ ನಡೆಸುತ್ತಿದ್ದಾರೆ. ಇದರಲ್ಲಿ ಅಧಿಕಾರಿಗಳಿಗೂ ಭರ್ಜರಿ ಕಮೀಷನ್ ತಲುಪುತ್ತಿದೆ ಅನ್ನೋದು ಸಾರ್ವಜನಿಕರ ನೇರ ಆರೋಪ. ಮನೆಯಿಲ್ಲದ ಎಷ್ಟೋ ಮಂದಿ ಬಡವರು ಸರಕಾರಿ ಜಾಗದಲ್ಲಿ ಮನೆ ನಿರ್ಮಿಸಲು ಹೋದ್ರೆ ಅಧಿಕಾರಿಗಳು, ಗ್ರಾಮದ ರೌಡಿಗಳು, ಪೊಲೀಸರು, ತಹಶೀಲ್ದಾರರಾದಿಯಾಗಿ ಬಂದು ತಡೆಯುತ್ತಾರೆ. ಆದ್ರೆ ಈ ರೀತಿ ಅಕ್ರಮವಾಗಿ ಗಣಿಗಾರಿಕೆ ಮಾಡಿ ಅರಣ್ಯ ನಾಶ ಮಾಡೋ ಆರೋಪಿಗಳ ವಿರುದ್ಧ ಯಾವ ಕ್ರಮವನ್ನೂ ಕೈಗೊಳ್ಳದೆ ಅಧಿಕಾರಿಗಳು ಸುಮ್ಮನೆ ಕೂತಿದ್ದಾರೆ. ಯಾಕೆ ಹೀಗೆ ಅನ್ನೋದು ಊರಿನ ಜನರ ಪ್ರಶ್ನೆ.

ಇಲ್ಲಿ ಗಣಿಗಾರಿಕೆ ಮಾಡಲು ಬ್ರಹತ್ ಗಾತ್ರದ ಮೆಶೀನ್‌ಗಳನ್ನು ಬಳಸಲಾಗುತ್ತಿದೆ. ಇದರಿಂದ ಸುತ್ತಮುತ್ತಲ ಪ್ರಾಣಿ ಪಕ್ಷಿಗಳು ಭಯ ಭೀತಿಯಿಂದ ಪಲಾಯನ ಮಾಡುತ್ತಿವೆ. ಕಾಡಿನ ಈ ವಿಶಾಲವಾದ ಪ್ರದೇಶವನ್ನು ನಾಶ ಮಾಡಿ ಸ್ವತಂತ್ರವಾಗಿ ಜೀವಿಸುತ್ತಿದ್ದ ಅನೇಕ ಜೀವ ಜಂತುಗಳಿಗೆ ವಾಸಿಸಲು ಜಾಗವಿಲ್ಲದಂತೆ ಮಾಡುತ್ತಿದ್ದಾರೆ. ಪರಿಸರವೆಲ್ಲಾ ದೂಳುಮಯ ಮಾಡಿ  ಪ್ರಶಾಂತವಾದ ಗಾಳಿಯನ್ನು ಮಲಿನಗೊಳಿಸಿ ಅಕ್ಕ ಪಕ್ಕದ ಜನರ ಸ್ವಚ್ಛಂದ ಉಸಿರಾಟಕ್ಕೂ ಕುತ್ತು ತರುತ್ತಿದ್ದಾರೆ ಈ ಧನದಾಹಿಗಳು. ಕಾಡನ್ನು ಉಳಿಸಿದ್ರೆ ನಾಡನ್ನು ಬೆಳೆಸಬಹುದು. ಕಾಡಿನಿಂದಲೇ ನಾಡು ಸುಖದ ಬೀಡು,  ಎಂಬ ಮಾತಿದೆ. ಆದರೆ ಇಲ್ಲಿ ಎಲ್ಲವೂ ಉಲ್ಟಾ ಆಗ್ತಿದೆ. ಇನ್ನು ಈ ಮಾಫಿಯಾದ ವಿರುದ್ಧ ದೂರು ನೀಡಲು ಜನ ಭಯಪಡುತ್ತಿದ್ದಾರೆ. ಯಾಕಂದ್ರೆ ಇದರ ವಿರುದ್ಧ ಮಾತನಾಡಿದ್ರೆ ಎಲ್ಲರನ್ನು ನಾಶ ಮಾಡಿ  ಇಷ್ಟೊಂದು ಗಂಭೀರವಾದ ಅಪರಾಧ ನಡೆಯುತ್ತಿದ್ರೂ ಉಡುಪಿ ಜಿಲ್ಲಾಧಿಕಾರಿಗಳು ಮೌನವಹಿಸಿರುವುದು ನಾನಾ ಅನುಮಾನಗಳಿಗೆ ಎಡೆಮಾಡಿ ಕೊಟ್ಟಿದೆ. ಇಲ್ಲಿನ ಅಕ್ರಮಕ್ಕೆ ಸಾಥ್‌ ಕೊಡೋ ಅಧಿಕಾರಿಗಳ ವಿರುದ್ಧ ಕಠಿಣ ಕ್ರಮಕೈಗೊಂಡು ಜನರಿಗೆ ಅರಣ್ಯ ಉಳಿಸಿಕೊಡಬೇಕು ಎಂಬುದು ಸ್ಥಳೀಯರ ಮನವಿ.

Exit mobile version