ಬೆಂಗಳೂರು, ಅ. 24: ಮೂರು ದಿನಗಳಿಂದ ರಾಜ್ಯ ರಾಜಧಾನಿ ಬೆಂಗಳೂರಿನಲ್ಲಿ ಮಳೆಯ ಆರ್ಭಟ ಹೆಚ್ಚಾಗಿದ್ದು, ಅನೇಕ ಕಡೆಗಳಲ್ಲಿ ಮಳೆ ನೀರು ಮನೆಗಳಿಗೆ ಅಪಾರ್ಟ್ಮೆಂಟ್ಗಳಿಗೆ ನುಗ್ಗಿ ಜನಜೀವನ ಅಸ್ತವ್ಯಸ್ತವಾಗಿದೆ ಹಾಗೆಯೇ ಸಂಚಾರಕ್ಕೂ ಅಡ್ಡಿಯುಂಟಾಗಿದೆ. ಈ ಕಾರಣದಿಂದ ಇಂದು ಮಧ್ಯಾಹ್ನ ಸಿಎಂ ಯಡಿಯೂರಪ್ಪ ನೇತೃತ್ವದಲ್ಲಿ ಬಿಬಿಎಂಪಿ ಅಧಿಕಾರಿಗಳ ಜತೆಗೆ ತುರ್ತು ಸಭೆಯನ್ನು ನಡೆಸಿದ್ದಾರೆ.
ಮಳೆಯಿಂದ ಹಾನಿಗೊಳಗಾದ ಪ್ರದೇಶಗಳ ಬಗ್ಗೆ, ಸಂತ್ರಸ್ತರಿಗೆ ನೆರವು ಒದಗಿಸುವ ಬಗ್ಗೆ ಸಭೆಯಲ್ಲಿ ಚರ್ಚೆ ಮಾಡಲಾಗಿದ್ದು, ಸೂಕ್ತ ಪರಿಹಾರ ಘೋಷಣೆ ಬಗ್ಗೆ ಸಭೆಯಲ್ಲಿ ನಿರ್ಧರಿಸಲಾಗಿದೆ. ಗೃಹೋಪಯೋಗಿ ವಸ್ತುಗಳನ್ನು ಕಳೆದುಕೊಂಡವರಿಗೆ, ಮನೆ ಕಳೆದುಕೊಂಡವರಿಗೆ ಪರಿಹಾರ ಹಾಗೂ ಆಹಾರ ಪದಾರ್ಥಗಳ ವಿತರಣೆ ಬಗ್ಗೆ ಸಭೆಯಲ್ಲಿ ನಿರ್ಧಾರ ಮಾಡಲಾಗಿದೆ.
ಸಭೆಯ ಬಳಿಕ ಮಾಧ್ಯಮಮಿತ್ರರೊಂದಿಗೆ ಮಾತನಾಡಿದ ಮುಖ್ಯಮಂತ್ರಿ ಬಿ. ಎಸ್ ಯಡಿಯೂರಪ್ಪ ಮಳೆಯಿಂದ ಹಾನಿಗೊಳಗಾದ ಪ್ರತೀ ಕುಟುಂಬಕ್ಕೆ ತಲಾ 25 ಸಾವಿರ ನೀಡುವುದಾಗಿ ಘೋಷಣೆ ಮಾಡಿದ್ದಾರೆ. ಸಭೆಯಲ್ಲಿ ಕಂದಾಯ ಸಚಿವ ಆರ್ ಅಶೋಕ್, ಬಿಬಿಎಂಪಿ ಆಯುಕ್ತ ಮಂಜುನಾಥ್ ಪ್ರಸಾದ್, ಬೆಂಗಳೂರು ಪೊಲೀಸ್ ಕಮಿಷನರ್ ಕಮಲ್ ಪಂತ್ ಭಾಗಿಯಾಗಿದ್ದರು. ಮಳೆಯಿಂದ ಹಾನಿಗೊಳಗಾದವರಿಗೆ ಸ್ಥಳದಲ್ಲೇ 25 ಸಾವಿರ ರೂ. ಚೆಕ್ ವಿತರಣೆ ಮಾಡಲಾಗುತ್ತದೆ ಎಂದು ಸಿಎಂ ಬಿಎಸ್ ಯಡಿಯೂರಪ್ಪ ತಿಳಿಸಿದ್ದಾರೆ.
ಬೆಂಗಳೂರಿನಲ್ಲಿ ನಿನ್ನೆ ಸುರಿದ ಭಾರಿ ಮಳೆಯಾದ ಹಿನ್ನಲೆ, ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪ ಬಿಬಿಎಂಪಿ ಆಯುಕ್ತರಾದ ಮಂಜುನಾಥ ಪ್ರಸಾದ್ ಅವರಿಗೆ ಕರೆ ಮಾಡಿ ನೀರು ನುಗ್ಗಿದ ಪ್ರದೇಶಗಳಿಗೆ ಭೇಟಿ ಮಾಡಿ ಪರಿಸ್ಥಿತಿ ಅವಲೋಕಿಸುವಂತೆ ಸೂಚನೆ ನೀಡಿದ್ದಾರೆ. ಹಾಗೆಯೇ ಸಿಎಂ ಬಿಎಸ್ವೈ ಬಿಬಿಎಂಪಿ ಆಯುಕ್ತರಿಗೆ ಇಂದು ಮತ್ತು ನಾಳೆ ಸಹ ಬಾರಿ ಮಳೆಯ ಮುನ್ಸೂಚನೆಯನ್ನು ಹವಾಮಾನ ಇಲಾಖೆ ನೀಡಿರುವುದರಿಂದ ಮುನ್ನೆಚ್ಚರಿಕಾ ಕ್ರಮಗಳನ್ನು ಕೈಗೊಳ್ಳುವಂತೆ ಸೂಚನೆ ನೀಡಿದ್ದಾರೆ.
ಮಳೆಪೀಡಿತ ಪ್ರದೇಶಗಳಿಗೆ ಸಿಎಂ ಬಿಎಸ್ವೈ ಭೇಟಿ ನೀಡಲು ಮುಂದಾಗಿದ್ದು, ಸದ್ಯದ ಪರಿಸ್ಥಿತಿ ಅವಲೋಕಿಸಲು ಸಿಟಿ ರೌಂಡ್ಸ್ ನಡೆಸಲು ನಿರ್ಧಾರ ಮಾಡಿದ್ದಾರೆ. ಬೆಂಗಳೂರಿನಲ್ಲಿ ಆಗಿರುವ ಮಳೆ ಹಾನಿ ಬಗ್ಗೆ ಸಿಎಂ ಬಿಎಸ್ವೈ ಸಚಿವರಿಂದ ಮಾಹಿತಿ ಪಡೆದಿದ್ದಾರೆ.
ಎಲ್ಲೆಲ್ಲಿ ಮಳೆ ಸುರಿದಿದೆ, ಅಲ್ಲಿ ಮಳೆಯಿಂದ ಯಾವ ರೀತಿ ಅವಾಂತರ ಸೃಷ್ಟಿ ಯಾಗಿದೆ, ಮಳೆಯಿಂದ ಹಾನಿಯಾಗಿರುವ ಪ್ರಮಾಣ, ನಿರಾಶ್ರಿತರ ಪರಿಸ್ಥಿತಿ, ನಿರಾಶ್ರಿತರಿಗೆ ಒದಗಿಸುವ ಸೌಲಭ್ಯ ಹಾಗೂ ಮುಂದೆ ಏನು ಕ್ರಮ ಮಾಡಬೇಕು ಎಂಬುದರ ಬಗ್ಗೆ ಸಿಎಂ ಅವಲೋಕನ ನಡೆಸಿ, ಅಧಿಕಾರಿಗಳು ಮತ್ತು ಸಚಿವರ ಜೊತೆ ಸಿಎಂ ಚರ್ಚೆ ನಡೆಸಿದ್ದಾರೆ ಎಂಬುದು ತಿಳಿದು ಬಂದಿದೆ.