ಬಸ್ಸ್ಟ್ಯಾಂಡಲ್ಲೇ ಅನೈತಿಕ ಚಟುವಟಿಕೆ: ಬೀದರಿನ ಸಂತಪೂರ್ ದುಸ್ಥಿತಿ

Bad condition of Bidar Santhapura bus stop | ಬಸ್‌ಸ್ಟ್ಯಾಂಡಲ್ಲೇ ಅನೈತಿಕ ಚಟುವಟಿಕೆ: ಬೀದರಿನ  ದುಸ್ಥಿತಿ

ಬೀದರ್‌ನ ಸಿಟಿಜನ್ ಜರ್ನಲಿಸ್ಟ್ ಪರಮೇಶ್ವರ ಬಿರಾದಾರ ಅವರು ಬಸ್‌ಸ್ಟ್ಯಾಂಡ್‌ ಬಗ್ಗೆ ಕಳುಹಿಸಿರುವ ವಿಚಿತ್ರ ವರದಿಯನ್ನ ನೋಡಿ. ಇದು ಬೀದರ ಜಿಲ್ಲೆಯ ಸಂತಪೂರ ಪಟ್ಟಣದ ಬಸ್ ನಿಲ್ದಾಣದ ಚಿತ್ರಣ. ನೋಡಲು ವಿಶಾಲವಾಗಿದೆ. ದೂರದಿಂದ ನೋಡುವವರಿಗೆ ಪರವಾಗಿಲ್ಲ ಬಸ್‌ನಿಲ್ದಾಣ ಸುಸಜ್ಜಿತವಾಗಿದೆ ಅಂತ ಕಾಣುತ್ತೆ.  ಈ ಬಸ್‌ನಿಲ್ದಾಣಕ್ಕೆ  ಸಂತಪೂರ ಊರಿನ ಜನ ಪಟ್ಟಕಷ್ಟ ಅಷ್ಟಿಷ್ಟಲ್ಲ. ತಮ್ಮ ಊರಲ್ಲೊಂದು ಸುಸಜ್ಜಿತ ಬಸ್‌ ನಿಲ್ದಾಣ ಆಗಬೇಕು ಎಂಬ ಆಸೆಯಿಂದ ಶಾಸಕರಿಗೆ ಸಚಿವರಿಗೆ ನೂರಾರು ಬಾರಿ ಮನವಿ ಸಲ್ಲಿಸಿದ ಪ್ರತಿಫಲವಾಗಿ ಇದು ನಿರ್ಮಾಣ ಆಗಿದೆ. ಬರೋಬ್ಬರಿ 3 ಎಕರೆ ವ್ಯಾಪ್ತಿಯಲ್ಲಿ ಸುತ್ತುಗೋಡೆ ನಿರ್ಮಿಸಿ ಇದರೊಳಗೆ ನೋಡುಗರ ಕಣ್ಣು ಕೋರೆಸುವಂತೆ ಸುಸಜ್ಜಿತ ನಿಲ್ದಾಣದ ಕಟ್ಟಡ ಕಟ್ಟಲಾಯಿತು. ಒಂದು ವರ್ಷದ ಬಳಿಕ ಅಂದ್ರೆ 2014 ರಲ್ಲಿ ಈ ನಿಲ್ದಾಣವನ್ನು ಗಣ್ಯರ ಸಮ್ಮುಖದಲ್ಲಿ ಅದ್ದೂರಿಯಾಗಿ ಉದ್ಘಾಟಿಸಲಾಯಿತು.

ಆದ್ರೆ ದುರಂತ ನೋಡಿ. ಈಗ ಜನರ ಶ್ರಮ ಎಲ್ಲಾ ನೀರಿನಲ್ಲಿಟ್ಟ ಹೋಮದಂತಾಗಿದೆ. ಬಸ್‌ನಿಲ್ದಾಣ ಬರೀ ಹೆಸರಿಗಷ್ಟೇ ಇದೆ. ಈ ಬಸ್‌ನಿಲ್ದಾಣದ ಹತ್ತಿರ ಹೋದ್ರೆ ನಿಜ ಬಣ್ಣಬಯಲಾಗುತ್ತೆ. ನಮ್ಮ ನಿರ್ಲಜ್ಜ ಅಧಿಕಾರಿಗಳ ನಿರ್ಲಕ್ಷ್ಯದ ಬಂಡವಾಳ ಗೊತ್ತಾಗುತ್ತೆ. ತಮಾಷೆ ಅಂದ್ರೆ ಈ ಬಸ್‌ ನಿಲ್ದಾಣವನ್ನು ಸಂತಪೂರ ಪಟ್ಟಣದಿಂದ 700 ಮೀಟರ್ ದೂರದ ನಿರ್ಜನ ಪ್ರದೇಶದಲ್ಲಿ ನಿರ್ಮಿಸಲಾಗಿದೆ. ಇದರಿಂದ ಜನರಿಗೆ ಉಪಯೋಗ ಆಗುತ್ತಾ ಇಲ್ವಾ ಅನ್ನೋದನ್ನ ಕಿಂಚಿತ್ತೂ ಯೋಚಿಸದೆ, ಬರೀ ಕಮಿಷನ್‌ ಆಸೆಗೆ ಕಟ್ಟಿದ್ದಾರೆ ಅನ್ನೋದು ಸ್ಥಳೀಯರ ದೂರು. “ದೇವರು ಕೊಟ್ಟರೂ, ಪೂಜಾರಿ ಬಿಡ ” ಎಂಬಂತೆ, ಸರ್ಕಾರ ಕೋಟಿ – ಕೋಟಿ ಹಣ ಸುರಿದು ಈ ಬಸ್ ನಿಲ್ದಾಣ ನಿರ್ಮಿಸಿದರೂ ಇದರಿಂದ ಜನಸಾಮಾನ್ಯರಿಗೆ ಯಾವುದೇ ಉಪಯೋಗ ಆಗ್ತಿಲ್ಲ. ಯಾಕಂದ್ರೆ ಇಲ್ಲಿಗೆ ಬಸ್ಸೇ ಬರ್ತಿಲ್ಲ.

ಈ ಬಸ್‌ ನಿಲ್ದಾಣದ ಮುಂದೆಯೇ  400 ಕ್ಕೂ ಅಧಿಕ ಬಸ್ ಗಳು ಓಡಾಡ್ತವೆ. ಆದ್ರೆ ಇಲ್ಲಿನ ಜನರ ದೌರ್ಭಾಗ್ಯ ನೋಡಿ. ೪೦೦ ಬಸ್‌ಗಳ ಪೈಕಿ ಒಂದೇ ಒಂದು ಬಸ್ ಕೂಡ ಈ ನಿಲ್ದಾಣಕ್ಕೆ ಬರುವುದಿಲ್ಲ ಎಂಬುದು ಜನರ ಅಳಲು.  ಇನ್ನೊಂದು ಪ್ರಮುಖ ವಿಚಾರ ಏನು ಗೊತ್ತಾ?  ಈ ಬಸ್ ನಿಲ್ದಾಣದೊಳಗೆ ಮಹಿಳೆಯರ ವಿಶ್ರಾಂತಿ ಗೃಹ, ಸಂಚಾರ ನಿಯಂತ್ರಕರ ಕೋಣೆ, ಉಪಹಾರ ಗೃಹ, ಶೌಚಾಲಯಗಳನ್ನೆಲ್ಲಾ ನಿರ್ಮಿಸಲಾಗಿದೆ. ಆದ್ರೆ ಆ ಕೋಣೆಗಳು ಈಗ ಅನೈತಿಕ ಚಟುವಟಿಕೆಗಳ ತಾಣವಾಗಿದೆ.  ಈ ತಾಣದಲ್ಲಿ  ಪುಂಡ – ಪೋಕರಿಗಳು ಸಂಜೆಯಾಗುತ್ತಿದ್ದಂತೆಯೇ ನಿಲ್ದಾಣದ ಒಳಗಿರುವ ಸಂಚಾರ ನಿಯಂತ್ರಕರ ತೆರೆದ ಕೋಣೆಯಲ್ಲಿ ಕದ್ದು ಮುಚ್ಚಿ ಅನೈತಿಕ ಚಟುವಟಿಕೆಯನ್ನು ನಡೆಸುತ್ತಾರೆ,ಎಂಬುದು ಇಲ್ಲಿನ ಜನರ ಆರೋಪ. ಅಷ್ಟೇ ಅಲ್ಲ  ನೂರಾರು ಮದ್ಯ ವ್ಯಸನಿಗಳು ಈ ಕಟ್ಟಡವನ್ನು ಮದ್ಯ ಸೇವನೆಯ ಅಡ್ಡವಾಗಿಸಿದ್ದಾರೆ. ಇದಕ್ಕೆ ಇಲ್ಲಿ ಎಲ್ಲೆಂದರಲ್ಲಿ ಬಿದ್ದಿರುವ ಸಾರಾಯಿ, ಬೀಯರ್ ಬಾಟಲಿಗಳೇ ಸಾಕ್ಷಿ.  ಪ್ರಯಾಣಿಕರಿಗೆ ಕುಳಿತುಕೊಳ್ಳಲೆಂದು ಗ್ರೈನೇಟ್ ಕಲ್ಲುಗಳಿಂದ ತಯಾರಿಸಿದ ಸುಂದರವಾದ  ಈ ಆಸನಗಳ ದು:ಸ್ಥಿತಿಯನ್ನೊಮ್ಮೆ ನೀವೇ ನೋಡಿ. ನಿಲ್ದಾಣದ ಹತ್ತಿರವೇ “ಮೊರಾರ್ಜಿ ದೇಸಾಯಿ ವಸತಿ ಶಾಲೆ ಮತ್ತು ಅನುಭವ ಮಂಟಪ ಗುರುಕುಲ ಎಂಬ ಶಾಲೆಗಳಿದ್ದು, ಈ ಶಾಲೆಗಳಲ್ಲಿ ವ್ಯಾಸಂಗ ಮಾಡುತ್ತಿರುವ ವಿದ್ಯಾರ್ಥಿಗಳು 2 ಮೈಲಿ ದೂರ  ನಡೆದುಕೊಂಡೇ ಹೋಗತ್ತಾರೆ.

ಕನಿಷ್ಟ ಪಕ್ಷ ಈ ನಿಲ್ದಾಣದ ಮುಖೇನ ಬಸ್ ಗಳೇನಾದರೂ ಸಂಚರಿಸಿದ್ರೆ ಈ ಶಾಲಾ ಮಕ್ಕಳಿಗೆ ಅನುಕೂಲವಾಗುತ್ತಿತ್ತು ಎಂಬುದು ಊರಿನ ಜನರ ಆಶಯ.  ಎಂಥಾ ದುರಂತ ಅಲ್ವಾ? ಸರ್ಕಾರ ಕೋಟಿಗಟ್ಟಲೆ ಖರ್ಚು ಮಾಡಿ ಕಟ್ಟಿದ ಬಸ್‌ಸ್ಟ್ಯಾಂಡ್‌ನಲ್ಲಿ ಒಂದೂ ಬಸ್‌ ಬರ್ತಿಲ್ಲಾ ಅಂದ್ರೆ ಅಲ್ಲಿನ ಅಧಿಕಾರಿಗಳು ಏನ್‌ ಮಾಡ್ತಿದ್ದಾರೆ. ಜಿಲ್ಲಾಡಳಿತ ಏನ್‌ ಮಾಡ್ತಿದೆ? ಜನರ ತೆರಿಗೆ ಹಣಕ್ಕೆ ಬೆಲೆ ಇಲ್ವಾ? ಹಾಗಾಗಿ ಬೀದರ್‌ ಜಿಲ್ಲಾಧಿಕಾರಿಗಳು, ಔರಾದ್ ತಾಲೂಕು ದಂಡಾಧಿಕಾರಿಗಳು, ಸಾರಿಗೆ ಸಂಸ್ಥೆಯ ಮೇಲಾಧಿಕಾರಿಗಳು ಸಂತಪೂರ ಬಸ್ ನಿಲ್ದಾಣವನ್ನು ಮರು ದುರಸ್ತಿಗೊಳಿಸುವಂತೆ ಸೂಚಿಸಿ, , ಶೀಘ್ರವೇ ಈ ಬಸ್ ನಿಲ್ದಾಣವನ್ನು  ಸಾರ್ವಜನಿಕರಿಗೆ  ಅನುಕೂಲವಾಗುವಂತೆ ಮಾಡಬೇಕೆಂಬುದೇ ವಿಜಯ ಟೈಮ್ಸ್ ಆಶಯವಾಗಿದೆ.

Exit mobile version