ಬಾದಾಮಿಯ ಸಿಡಿಲು ಪಡೆಯ ಅದ್ಬುತ ದರ್ಶನ

truckers paradise Badami'S sidilupade | ಬಾದಾಮಿಯ ಸಿಡಿಲುಪಡೆ ಸೀಕ್ರೆಟ್ ಔಟ್ | vijayatimes

ನಮ್ಮ ಸಿಟಿಜನ್ ಜರ್ನಲಿಸ್ಟ್‌ ಬರೀ ಸಮಸ್ಯೆಗಳ ಬಗ್ಗೆ ವರದಿ ಕಳುಹಿಸ್ತಾರೆ. ಆದ್ರೆ ನಮ್ಮ ಬಾಗಲಕೋಟೆಯ ಸಿಟಿಜನ್‌ ಜರ್ನಲಿಸ್ಟ್‌ ರಾಜೇಶ್‌ ದೇಸಾಯಿ ಒಂದು ವಿಶೇಷ ವರದಿ ಕಳುಹಿಸಿದ್ದಾರೆ. ಇದು ಬಾದಾಮಿಯ ಸಿಡಿಲು ಪಡೆ. ರುದ್ರರಮಣೀಯ ಪ್ರವಾಸಿ ತಾಣ.  ವಿಶ್ವದ ನಾಲ್ಕು ಸಿಡಿಲ ಪಡೆಯ ಪೈಕಿ ಬಾದಾಮಿಯ ಸಿಡಿಲ ಪಡೆ ಅತ್ಯಂತ ವಿಶಿಷ್ಟವಾದದ್ದು. ಅಂಥಾ ವಿಶೇಷ ಪ್ರವಾಸಿ ತಾಣ ನೋಡಲು ಚಾರಣ ಮಾಡಬೇಕು.

ಬಾದಾಮಿಯ ಕೊನಮ್ಮದೇವಿ ದೇವಸ್ಥಾನದ ಹತ್ತಿರದ ಅರಣ್ಯ ಇಲಾಖೆಯ ಕಾಯ್ದಿಟ್ಟ ಅರಣ್ಯ ವಲಯದ ಹೆಬ್ಬಾಗಿಲಿನ ಹಾದಿಯಿಂದ ಹೊರಡಬೇಕು ,ಇಲ್ಲಿಂದ ಸರಿಸುಮಾರು 3 ಕಿಲೋಮೀಟರು ಕಾಲ್ನಡಿಗೆಯಲ್ಲಿ  ಹೋಗಬೇಕು. ಇದು ನಿರ್ಜನ ಪ್ರದೇಶ. ಚಾರಣ ಮಾಡಬಯಸುವವರು ನೀರು ಆಹಾರ ಒಯ್ಯಲೇ ಬೇಕು. ಇನ್ನು ಈ ಬೆಟ್ಟದಲ್ಲಿ ಸಾಕಷ್ಟು ಆಯುರ್ವೇದಿಕ್ ಗಿಡಮೂಲಿಕೆಗಳು ಇರುವುದರಿಂದ ಮಳೆಗಾಲದಲ್ಲಿ ಇಲ್ಲಿ ಹರಿಯುವ ನೀರು ನಮ್ಮ ದೇಹಕ್ಕೆ ತಾಗಿದರೆ ರೋಗರುಜಿನಗಳು ಮಾಯವಾಗುತ್ತವೆ ಎನ್ನುವ ಪ್ರತೀತಿಯಿದೆ, ಹಾಗೂ ದಿವ್ಯ ಔಷಧಿ ಗಿಡಮೂಲಿಕೆಗಳನ್ನು ಒಳಗೊಂಡಿರುವಂತ ಬೆಟ್ಟ ಇದು.

ಇಲ್ಲಿ ಎಷ್ಟೇ  ನಡೆದರೂ ಆಯಾಸ ಆಗೋದಿಲ್ಲ ಇಲ್ಲಿನ ಪ್ರಕೃತಿಯ ಗಾಳಿ ಮೈಸೋಕಿದರೆ ಮೈ ಜುಮ್ ಎನ್ನುವ ರೋಮಾಂಚನವಾಗುತ್ತದೆ. ಬಿಸಿಲಿನ ಅನುಭವ ಕೂಡ ಆಗೋದಿಲ್ಲ ಅಷ್ಟೊಂದು ಆಹ್ಲಾದಕರ ವಾತಾವರಣವಾಗಿದೆ.,ಚಾರಣಪ್ರಿಯರಿಗೆ ತುಂಬಾ ಮೆಚ್ಚುಗೆ ಯಾಗುವಂತಹ ಪ್ರವಾಸಿ ತಾಣ ಈ ಸಿಡಿಲು ಪಡೆ. ಪ್ರಪಂಚದಲ್ಲಿ ನಾಲ್ಕು ಕಡೆ ಇಂಥ ಪ್ರಕೃತಿ ನಿರ್ಮಿತ ಸಿಡಿಲು ಪಡೆ ಕಾಣಬಹುದು. ಒಂದು U.S. ನಲ್ಲಿ ಮತ್ತೊಂದು ದಕ್ಷಿಣ ಆಫ್ರಿಕಾದ ಮಾಲಿಯಲ್ಲಿ ಮೂರನೆಯದ್ದು ಆಂಧ್ರಪ್ರದೇಶದ ತಿರುಪತಿ ವೆಂಕಟೇಶ್ವರ ದೇವಸ್ಥಾನ ದ ಹಿಂಭಾಗದಲ್ಲಿ ಇವೆ. ನಾಲ್ಕನೆಯದ್ದೇ ಬಾಗಲಕೋಟೆಯಲ್ಲಿ ಇರುವಂಥದ್ದು. ಇದನ್ನು ಸವಿಸ್ತಾರವಾಗಿ ವೀಕ್ಷಿಸಿ ಕಣ್ತುಂಬಿಸಿಕೊಳ್ಳಬಹುದು. ಈ ಬಂಡೆಗೆ ಸಿಡಿಲು ತಾಗಿ ಬಂಡೆಯ ಮೇಲೆ ಕಂದಕಗಳು ನಿರ್ಮಾಣವಾಗಿವೆ ಎನ್ನುವುದು ಇತಿಹಾಸಕಾರರ ಹಾಗೂ ಸಂಶೋಧಕರ ಮಾತು.

ಸಿಡಿಲು ಬಡಿದಿದ್ದರೂ ಅಲ್ಲೊಂದು ಅದ್ಬುತ ಕಲ್ಲಿನ ಕಲೆಯ ಪ್ರಪಂಚವೇ ಸ್ರಷ್ಟಿಯಾಗಿದೆ ಎಂದರೆ ತಪ್ಪಾಗಲಾರದು. ಕಲ್ಲಿನ ಬಂಡೆ 70 M.M. ಪರದೆ ಹಾಗೆ ನಿರ್ಮಾಣವಾಗಿ ಮೇಲೆ ಕಂದಕಗಳು ನಿರ್ಮಾಣವಾಗಿವೆ.  ಪ್ರಕೃತಿಯ ಈ ಅದ್ಭುತ ದೃಶ್ಯ ನೋಡಿದಾಗ ಮೈ ನವಿರೇಳುತ್ತೆ. ರುದ್ರರಮಣೀಯ ದೃಶ್ಯ ಕಂಡಾಗ ಅಚ್ಚರಿಯೂ ಆಗುತ್ತದೆ. ಆ ಕಂದಕಗಳ ಆಕಾರ, ಅವು ಸೃಷ್ಟಿಸಿರುವ ದೃಶ್ಯ  ಮನಮೋಹಕ.ಈ ದೃಶ್ಯಗಳನ್ನು  ಕಣ್ಣ ತುಂಬಿಕೊಳ್ಳುತ್ತಾ ಸಾಗಿದರೆ ನೋಡಲು ಎರಡು ಕಣ್ಣುಗಳು ಸಾಲದು ಎಂಬಂತೆ ಗೋಚರವಾಗುತ್ತದೆ. ಇಂಥಾ ಅದ್ಭುತ ಪ್ರವಾಸಿ ತಾಣ ಜನರಿಗೆ ಅಪರಿಚಿತವಾಗಿದೆ. ಪ್ರವಾಸೋದ್ಯಮ ಇಲಾಖೆ ಈ ಬಗ್ಗೆ ನಿರ್ಲಕ್ಷ್ಯ ವಹಿಸಿದೆ. ಈ ತಾಣದ ಸಂರಕ್ಷಣೆಗೆ ಯಾವ ಕ್ರಮವನ್ನೂ ಕೈಗೊಂಡಿಲ್ಲ. ಈ ತಾಣಕ್ಕೆ ಹೋಗಲು ಆದಷ್ಟು ಬೇಗ ರಸ್ತೆಯ ವ್ಯವಸ್ಥಯಾಗಲಿ, ಪ್ರವಾಸಿಗರಿಗೆ  ನಿರಾತಂಕವಾಗಿ ಸಾಗಲು  ಅನುಕೂಲವಾಗಲಿ ಎಂಬುದು ವಿಜಯಾ ಟೈಮ್ಸ್ ಆಶಯವಾಗಿದೆ.

Exit mobile version