ಬಾರದ ಲೋಕಕ್ಕೆ ಅಣ್ಣನ ಪಯಣ: ಟಿ.ಎಸ್.ನಾಗಾಭರಣ ಕಂಬನಿ

ಬೆಂಗಳೂರು, ನ. 3: ರಂಗಭೂಮಿಗೆ ವಿಶೇಷ ಕೊಡುಗೆ ನೀಡಿರುವ ನನ್ನ ಪ್ರತೀ ಬೆಳವಣಿಗೆಯಲ್ಲಿ ಬಹುಮುಖ್ಯಪಾತ್ರ ನಿರ್ವಹಿಸಿದ್ದ ಹಿರಿಯಣ್ಣ ರಂಗಕರ್ಮಿ ಹೆಚ್.ಜಿ.ಸೋಮಶೇಖರ ರಾವ್ ಅವರ ನಿಧನ ಅತ್ಯಂತ ದುಃಖವಾಗಿದೆಎಂದು ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷರು, ರಂಗಕರ್ಮಿ ಟಿ.ಎಸ್.ನಾಗಾಭರಣ ಅವರು ಸಂತಾಪ ವ್ಯಕ್ತಪಡಿಸಿದ್ದಾರೆ.

1970ರಿಂದ ಸುದೀರ್ಘ 50 ವರ್ಷಗಳಿಂದಲೂ ರಂಗಭೂಮಿ, ಸಿನಿಮಾ ಕಿರುತೆರೆ ಸೇರಿದಂತೆ ಎಲ್ಲದರಲ್ಲೂ ಅವರ ಜೊತೆಗೆ ಹೆಜ್ಜೆ ಹಾಕಿದ್ದೇನೆ. ಎಂತಹ ಕ್ಲಿಷ್ಟ ಸನ್ನಿವೇಶದಲ್ಲೂ ಬೆನ್ನುಲುಬಾಗಿ ನಿಂತು ಬೆಂಬಲ ವ್ಯಕ್ತಪಡಿಸುತ್ತಿದ್ದರು. ನನ್ನ ಬೆಳವಣಿಗೆಯನ್ನು ಹೃಯದಸ್ಪರ್ಶಿಯಾಗಿ ಖುಸಿಪಡುತ್ತಿದ್ದ ನನ್ನ ಅಣ್ಣ ಇಂದು ಬಾರದಲೋಕಕ್ಕೆ ಪಯಣಿಸಿರುವುದು ನನಗೆ ಅರಗಿಸಿಕೊಳ್ಳಲು ಸಾಧ್ಯವಾಗುತ್ತಿಲ್ಲ ಎಂದು ಅತ್ಯಂತ ನೋವಿನ ವಿದಾಯವನ್ನು ವ್ಯಕ್ತಪಡಿಸಿದ್ದಾರೆ.

ಸಂಗ್ಯಾ-ಬಾಳ್ಯ ನಾಟಕದಲ್ಲಿ ಅವರ ತಮ್ಮನಾಗಿ ನಟನೆ ಮಾಡಿದ್ದು, ನಾವಿಬ್ಬರೂ ಅಣ್ಣ-ತಮ್ಮ ನಟನೆಯ ನಾಟಕ ಹಲವು ಯಶಸ್ವಿ ಪ್ರದರ್ಶನ ಕಂಡಿತ್ತು. ನಿಜ ಜೀವನದಲ್ಲಿಯೂ ನಾವಿಬ್ಬರೂ ಅಣ್ಣತಮ್ಮನಂತೆಯೇ ಬದುಕಿದವರು ಇಂದು ಅವರಿಲ್ಲದ ದಿನಗಳ ಬಗ್ಗೆ ಊಹಿಸಿಕೊಳ್ಳಲು ಕಷ್ಟವಾಗುತ್ತಿದೆ ಎಂದು ನೋವಿನಿಂದ ಕಂಬನಿ ಮಿಡಿದಿದ್ದಾರೆ.

ನನ್ನ ವೈಯಕ್ತಿಕ ಬದುಕಿರಲೀ, ವೃತ್ತಿಯಲ್ಲಾಗಲೀ ತೊಂದರೆ ಎದುರಾದರೆ ತನ್ನದೇ ಸಮಸ್ಯೆ ಎಂಬಂತೆ ಪರಿಹಾರ ಸೂಚಿಸುವ ಜೊತೆಗೆ ತಾವೇ ಮುಂದೆ ನಿಂತು ಬಗೆಹರಿಸುತ್ತಿದ್ದ (ಅಣ್ಣ ಹೆಚ್.ಜಿ.ಸೋಮಶೇಖರ) ಸೋಮಣ್ಣ ಇನ್ನಿಲ್ಲ ಎಂಬ ಸುದ್ದಿ ಬರಸಿಡಿಲಿನಂತಾಗಿದೆ.

ಪಾಶ್ವಿಮಾತ್ಯ ಮತ್ತು ಭಾರತೀಯ ನಾಟಕಕರ್ತೃಗಳ ಕೃತಿಗಳನ್ನು ರಂಗದ ಮೇಲೆ ಜೀವಂತಗೊಳಿಸಿದ ಸೋಮಶೇಖರ ರಾವ್ ಅವರು 1992-93ನೇ ಸಾಲಿನ ರಾಜ್ಯ ಸರ್ಕಾರದ ಅತ್ಯತ್ತಮ ಪೋಷಕ ನಟ ಪ್ರಶಸ್ತಿಯನ್ನು ಪಡೆದಿದ್ದರು. ಬ್ಯಾಂಕ್ ಉದ್ಯೋಗಿಯಾಗಿದ್ದುಕೊಂಡೇ ರಂಗಭೂಮಿ, ಸಿನಿಮಾ ಕ್ಷೇತ್ರಕ್ಕೆ ದೊಡ್ಡ ಮಟ್ಟದ ಕೊಡುಗೆ ನೀಡಿದವರು ಎಂದು ಶ್ಲಾಘಿಸಿದ್ದಾರೆ.

Exit mobile version