ಬಿಜೆಪಿ ಸರ್ಕಾರಕ್ಕೆ ತಕ್ಕ ಪಾಠ ಕಲಿಸಿ ಮಾಜಿ ಸಿಎಂ ಮನವಿ

ಶಿರಾ, ಅ. 30: ಶಿರಾ ತಾಲೂಕಿನ ಬಾಲೇನಹಳ್ಳಿ, ಚಿಕ್ಕದಾಸರಹಳ್ಳಿ, ಕಳ್ಳಂಬೆಳ್ಳ, ಮರಳಪ್ಪನಹಳ್ಳಿಯಲ್ಲಿ ರೋಡ್ ಶೋ ನಡೆಸಿ ಮತಯಾಚಿಸಿ ಮಾತನಾಡಿದ ಕಾಂಗ್ರೆಸ್ ಶಾಸಕಾಂಗ ಪಕ್ಷದ ನಾಯಕ ಸಿದ್ದರಾಮಯ್ಯ, ‘ಅನ್ನಭಾಗ್ಯ ಯೋಜನೆಯಲ್ಲಿ ಹಂದಿಗಳು ತಿನ್ನದಂತಹ ಅಕ್ಕಿ, ರಾಗಿಯನ್ನು ನೀಡಿ, ಬಡಜನರ ಹೊಟ್ಟೆ ಮೇಲೆ ಹೊಡೆಯುತ್ತಿರುವ ಬಿಜೆಪಿ ಸರ್ಕಾರಕ್ಕೆ ತಕ್ಕ ಪಾಠ ಕಲಿಸಿ’ ಎಂದು ಮನವಿ ಮಾಡಿಕೊಂಡರು.

ಕಾಂಗ್ರೆಸ್‌ ಸರ್ಕಾರವು ‘ಹಸಿವಿನಿಂದ ಯಾರು ಸಂಕಷ್ಟ ಪಡಬಾರದು ಎಂದು ಅನ್ನಭಾಗ್ಯ ಯೋಜನೆ ಜಾರಿಗೊಳಿಸಿದ್ದು, ಬಿಪಿಎಲ್‌ ಕಾರ್ಡ್‌ ಹೊಂದಿದವರಿಗೆ 7 ಕೆ.ಜಿ ಅಕ್ಕಿ ನೀಡುತ್ತಿತ್ತು. ಆದರೆ ಬಿಜೆಪಿ ಸರ್ಕಾರ ಅಧಿಕಾರಕ್ಕೆ ಬಂದ ಮೇಲೆ ೭ ಕೆ. ಜಿ ಅಕ್ಕಿಯಲ್ಲಿ 2 ಕೆ.ಜಿ ಕಡಿತ ಮಾಡಿದೆ. ಅದು ಕೂಡ ತಿನ್ನಲು ಯೋಗ್ಯವಾಗಿಲ್ಲ. ಅನ್ನಭಾಗ್ಯದಲ್ಲೂ ಭ್ರಷ್ಟಾಚಾರ ನಡೆಸುತ್ತಿರುವವರಿಗೆ ಜನರು ತಕ್ಕ ಉತ್ತರ ನೀಡುವುದೇ ಸೂಕ್ತ’ ಎಂದರು.

ನಂತರ ಮಾತನಾಡಿದ ಶಾಸಕ ಎಂ.ಬಿ.ಪಾಟೀಲ ‘ಜಯಚಂದ್ರ ಅವರು ಕೃಷ್ಣ ಹಾಗೂ ಕಾವೇರಿ ನದಿ ನೀರು ತಂದು ಈ ಭಾಗದ ಜನರ ಬದುಕು ಹಸನು ಮಾಡಿದ್ದಾರೆ. ಇವರ ಜನಪರ ಕಾಳಜಿ ಹಾಗೂ ಇಚ್ಛಾಶಕ್ತಿ ಗುರುತಿಸಿ ಮತ ನೀಡಬೇಕು’ ಎಂದರು.

‘ಜಯಚಂದ್ರ ಆಯ್ಕೆಯಿಂದ ಶಿರಾ ಕ್ಷೇತ್ರಕ್ಕೆ ಮಾತ್ರ ಲಾಭವಾಗುವುದಿಲ್ಲ. ವಿಧಾನಸಭೆಯಲ್ಲಿ ಸರ್ಕಾರದ ಭ್ರಷ್ಟಾಚಾರ ಬಯಲು ಮಾಡುವ ಮೂಲಕ ರಾಜ್ಯಕ್ಕೆ ಶಕ್ತಿಯಾಗುತ್ತಾರೆ’ ಎಂದು ಶಾಸಕ ದಿನೇಶ್ ಗುಂಡೂರಾವ್ ಹೇಳಿದರು.

ಈ ಸಂದರ್ಭದಲ್ಲಿ ಅಭ್ಯರ್ಥಿ ಟಿ.ಬಿ.ಜಯಚಂದ್ರ, ಶಾಸಕ ಡಾ.ಯತೀಂದ್ರ, ಬಾಲೇನಹಳ್ಳಿ ಪ್ರಕಾಶ್, ಅರೇಹಳ್ಳಿ ರಮೇಶ್, ಹೆಂಜಾರಪ್ಪ, ಪರ್ವತಪ್ಪ, ದಿವಾಕರ್ ಗೌಡ, ಮಾರೇಗೌಡ, ಡಾ.ಮನು ಪಾಟೀಲ್, ಕಾಲೇಗೌಡ, ಅಭಿ, ಶ್ರೀರಂಗ, ನಾರಾಯಣಪ್ಪ, ಮಾರೇಗೌಡ ಉಪಸ್ಥಿತರಿದ್ದರು.

Exit mobile version