ಬೀದರ್ ಜಿಲ್ಲೆಯ ರಾಷ್ಟ್ರೀಯ ಹೆದ್ದಾರಿಯ ಸಮಸ್ಯೆ

Bidar highway stinking badly| citizen journalist reports |  ಬೀದರ್‌ನ ರಾಷ್ಟ್ರೀಯ ಹೆದ್ದಾರಿ | cj

ಬೀದರ್ ಜಿಲ್ಲೆಯ ರಾಷ್ಟ್ರೀಯ ಹೆದ್ದಾರಿಯಲ್ಲಿ   ಪ್ರತಿನಿತ್ಯ ಸಾವಿರಾರು ವಾಹನಗಳು  ಓಡಾಡುತ್ತವೆ. ಅಲ್ಲದೆ ರಾಷ್ಟ್ರೀಯ ಹೆದ್ದಾರಿ ತುಂಬಾ ಡಾಬಾ ಹೊಟೇಲ್‌ಗಳು ಭರ್ಜರಿ ವ್ಯಾಪಾರ ಮಾಡ್ತಿವೆ. ಆದ್ರೆ ಇದೇ ಈಗ ಬೀದರ್‌ನ ನಾರಾಯಣಪುರ ಮಂದಿಗೆ ಶಾಪವಾಗಿ ಪರಿಣಮಿಸಿದೆ. ಎಲ್ಲಿ ನೋಡಿದ್ರೂ ಕಸದ ರಾಶಿ. ಗಬ್ಬು ನಾತ, ನೊಣ, ಸೊಳ್ಳೆಗಳ ಕಾಟ.  ಇದು ಬೀದರ್ ಜಿಲ್ಲೆಯ ಔರಾದ ತಾಲೂಕಿನ ನಾರಾಯಣಪುರ ಗ್ರಾಮದ  ರಾಷ್ಟ್ರೀಯ  ಹೆದ್ಧಾರಿಯಲ್ಲಿ ಕಂಡು ಬರುವ ಸಾಮಾನ್ಯ ದೃಶ್ಯ.

 ನಾರಾಯಣಪುರ ಗ್ರಾಮದ  ರಾಷ್ಟ್ರೀಯ  ಹೆದ್ಧಾರಿ ಬದಿಯಲ್ಲಿ ಕೆಲವು   ಡಾಬಾಗಳಿವೆ. ಈ ಡಾಬಾಗಳಿಗೆ ಬರುವ  ಗ್ರಾಹಕರು ತಿಂದು ಕುಡಿದು ಎಸೆದ ಬಿಯರ್ ಬಾಟಲಿಗಳು ಹಾಗೂ ಕಸದ  ಮೂಟೆಗಳನ್ನು ಡಾಬಾ ಮಾಲೀಕರು  ರಸ್ತೆ ಬದಿಗೆ ಎಸೆದು ಇಡೀ ಪರಿಸರವನ್ನು ಗಬ್ಬು ನಾರುವಂತೆ ಮಾಡಿದ್ದಾರೆ.    ರಸ್ತೆಯ ಇಕ್ಕೆಲೆಗಳೆಡೆ ಕಣ್ಣು ಹಾಯಿಸಿದ್ರೆ ನಮಗೆ ಕಾಣ ಸಿಗೋದು ಚೆಲ್ಲಾ – ಪಿಲ್ಲಿಯಾಗಿ ಬಿದ್ದಿರುವ ತ್ಯಾಜ್ಯದ ರಾಶಿ, ಗೋಣಿ ಚೀಲಗಳಲ್ಲಿ ತುಂಬಿಸಿಟ್ಟಿರುವ ಬೀಯರ್ ಬಾಟಲಿಗಳು.

ಮೊದಲೇ  ಕೊರೋನಾದ ಅಟ್ಟಹಾಸಕ್ಕೆ ಇಡೀ ದೇಶವೇ  ಅಕ್ಷರಶ: ತತ್ತರಿಸಿಹೋಗಿದೆ.  ಇಂತಹ ಪರಿಸ್ಥಿತಿಯಲ್ಲೇ  ಅಧಿಕಾರಿಗಳ ಹಾಗೂ ಜನರ  ನಿರ್ಲಕ್ಷತನದಿಂದ ಈ ರಸ್ತೆ ಕಸದ ಕೊಂಪೆಯಾಗಿ  ಬದಲಾಗಿದ್ದು ದುರಂತವೇ ಸರಿ.  ಇನ್ನೂ ಸಾಲದೆಂಬಂತೆ ಕ್ಷೌರೀಕರು ಮುಖ್ಯ ರಸ್ತೆಯ ಪಕ್ಕದಲ್ಲೇ ಎಸೆದಿರುವ ಕೇಶ ರಾಶಿ.  ಬುದ್ದಿಜೀವಿಯಾದ ಈ ಮನುಷ್ಯರೇ ಈ ರೀತಿಯಾಗಿ ನಡೆದುಕೊಂಡರೆ ಇನ್ನು ಪ್ರಾಣಿ ಪಕ್ಷಿಗಳು ಹೇಗಿರಬೇಕು? ಇದೇ ರೀತಿ ಔರಾದ(ಬಾ) ಪಟ್ಟಣದಿಂದ ಕೂಗಳತೆಯಷ್ಟೇ ಹತ್ತಿರದಲ್ಲಿರುವ ನಾರಾಯಣಪುರ ಮುಖ್ಯ ರಸ್ತೆಯಲ್ಲೂ  ಮೂರ್ಕಾಲ್ಕು ಢಾಬಾಗಳಿವೆ. ಈ ಢಾಬಾಗಳದ್ದೂ ಅದೇ ಕತೆ. ಪ್ರತಿನಿತ್ಯ ಇಲ್ಲಿ ಕೂಡ ರಾಶಿ ರಾಶಿ ತ್ಯಾಜ್ಯ ಪದಾರ್ಥ ಹಾಗೂ ಮದ್ಯದ ಬಾಟಲಿಗಳನ್ನು ರಸ್ತೆಬದಿಗೆ ಎಸೆಯುತ್ತಿದ್ದಾರೆ. ಅಲ್ಲದೆ  ಬಾಟಲಿಗಳನ್ನು ಒಡೆದು  ಚೂರುಗಳನ್ನೇಲ್ಲಾ ರಸ್ತೆ ಬದಿಯಲ್ಲೇ ಎಸೆದು ಹೋಗುತ್ತಿದ್ದಾರೆ.

ಇದು ಕಿರಿದಾದ ರಸ್ತೆಯಾಗಿದೆ. ಇದರ ಮೇಲೆ ದಿನನಿತ್ಯ ಓಡಾಡುವ ಪಾದಾಚಾರಿಗಳು, ದ್ವಿಚಕ್ರ ವಾಹನ ಸವಾರರು ಮೂಗು ಮುಚ್ಚಿಕೊಂಡೇ ಸಂಚರಿಸಬೇಕಾಗಿದೆ. ಇಲ್ಲಿ ಎಸೆದ ತ್ಯಾಜ್ಯಗಳನ್ನು ತಿನ್ನಲು ಹಂದಿಗಳು ನಾಯಿಗಳು ಇಲ್ಲಿ ನಿತ್ಯವೂ ಬರುವುದರಿಂದ ಹೊಲದಲ್ಲಿ ಬೆಳೆ ನಾಶ ಮಾಡುತ್ತವೆ ಎಂಬುದು ಇಲ್ಲಿನ ಜನರ ಗೋಳು. ಅಲ್ಲದೆ ಹಂದಿಗಳು ಬೇಕಾಬಿಟ್ಟಿ ಓಡಾಡುತ್ತಿರುವುದರಿಂದ ರಸ್ತೆಯಲ್ಲಿ ಮೂರ್ನಾಲ್ಕು ಅಪಘಾತಗಳೂ ಸಂಭವಿಸಿವೆ.

 ಕಸದ ರಾಶಿಯಿಂದಾಗಿ ಇಲ್ಲಿನ ರಸ್ತೆಗಳು ಕೂಡ  ಕಿರಿದಾಗಿದೆ. ಹಾಗಾಗಿ ಇಲ್ಲಿ ಬರುವ ಘನ ವಾಹನಗಳಿಗೆ ರಸ್ತೆಯ ಮೇಲೆ ಓಡಾಡಲು ಭಾರೀ  ಸಮಸ್ಯೆಯಾಗುತ್ತಿದೆ. ಇಲ್ಲಿನ ಸಮಸ್ಯೆಯ ಬಗ್ಗೆ ಜನಸಾಮಾನ್ಯರು ಅಧಿಕಾರಿಗಳಿಗೆ ಸಾಕಷ್ಟು ಬಾರಿ ದೂರು ನೀಡಿದ್ದರೂ ಅಧಿಕಾರಿಗಳು ಕ್ಯಾರೇ ಅಂದಿಲ್ಲ ಅನ್ನೋದು ಅಲ್ಲಿನ ಜನರ ದೂರು.  ನಿತ್ಯ ಓಡಾಡುವ ಜನರಿಗೆ ಇಲ್ಲಿ ನಾನಾ ಸಾಂಕ್ರಾಮಿಕ ಕಾಯಿಲೆಯ ಭಯ ಆವರಿಸಿದೆ.  ಮಕ್ಕಳು ಮರಿಗಳು ಇಲ್ಲಿ ಓಡಾಡುವಾಗ ಗಾಜಿನ ಪುಡಿ ಕಾಲಿಗೆ ಚುಚ್ಚಿ ಅನಾಹುತವಾಗುವ ಸಂಭವವಿದೆ. ನಾರಾಯಣಪುರ ಗ್ರಾಮದ ಜನರ ಸಮಸ್ಯೆಯನ್ನು ಸಂಬಂಧ ಪಟ್ಟ ಅಧಿಕಾರಿಗಳು ಇದನ್ನುನೋಡಿ ತಕ್ಕ ಪರಿಹಾರ ಮಾಡಬೇಕು ಜನರ ಕಷ್ಟಗಳಿಗೆ ಸ್ಪಂದಿಸಬೇಕು ಎಂಬುದು ವಿಜಯಾ ಟೈಮ್ಸ್ ಆಶಯವಾಗಿದೆ.

Exit mobile version