ಭಾರೀ ಭೂಕಬಳಿಕೆ ಪ್ರಕರಣ ಬಯಲು: ನಕಲಿ ದಾಖಲೆ ಸೃಷ್ಟಿಸಿ ವಂಚಿಸುತ್ತಿದ್ದ ಕೆಲ ವಕೀಲರ ವಿರುದ್ಧ ಸಿಐಡಿ (CID) ತನಿಖೆ, ಎಫ್ಎಸ್ಎಲ್ ಪರಿಶೀಲನೆಗೆ ಹೈಕೋರ್ಟ್ (High court) ಅಸ್ತು

Kannada live news

ಬೆಂಗಳೂರು: ಬೆಂಗಳೂರಿನಲ್ಲಿ ನಕಲಿ ದಾಖಲೆ ಸೃಷ್ಟಿಸಿ ಅಮಾಯಕರ ಆಸ್ತಿ ಕಬಳಿಸುವ ದೊಡ್ಡ ಮಾಫಿಯಾ ಕಾರ್ಯನಿರ್ವಹಿಸುತ್ತಿದೆ. ಈ ಮಾಫಿಯಾದ ಭಯಾನಕತೆ ಕಳೆದ ವರ್ಷವಷ್ಟೇ ರಿಟ್ ಅರ್ಜಿಯೊಂದರ ವಿಚಾರಣೆ ವೇಳೆ ಬೆಳಕಿಗೆ ಬಂದಿತ್ತು. ಶಾ ಹರಿಲಾಲ್ ಭಿಕಾಬಾಯಿ ಕಂಪನಿಗೆ ಸೇರಿದ ಆಸ್ತಿಯನ್ನು ಮಾಲೀಕರ ಗಮನಕ್ಕೇ ಬರದೆ ಕೆಲ ವ್ಯಕ್ತಿಗಳು ಕಬಳಿಸಲು ಸಂಚು ರೂಪಿಸಿದ್ದರು. ಈ ಖದೀಮರು ನಕಲಿ ದಾಖಲೆ ಸೃಷ್ಟಿಸಿದ್ದಲ್ಲದೇ ಕೆಲ ನಕಲಿ ವ್ಯಕ್ತಿಗಳನ್ನು ಕಟ್ಟಡದ ಬಾಡಿಗೆದಾರರೆಂದು ಹೆಸರಿಸಿ ಯಶವಂತಪುರದ 5600 ಚದರಡಿ ಜಾಗದಿಂದ ಅವರನ್ನು ಖಾಲಿ ಮಾಡಿಸಲು ಕೋರ್ಟ್ನಲ್ಲಿ 2018 ರಲ್ಲಿ ಕೇಸ್ ದಾಖಲಿಸಲಾಗಿತ್ತು.

ಆ ಬಳಿಕ ಒಂದೇ ತಿಂಗಳಲ್ಲಿ ನಕಲಿ ಮಾಲೀಕರು, ನಕಲಿ ಬಾಡಿಗೆದಾರರೊಂದಿಗೆ ರಾಜಿ ಸಂಧಾನ ಮಾಡಿಕೊಂಡು ಕೇಸನ್ನು ಇತ್ಯರ್ಥ ಪಡಿಸಿಕೊಂಡರು.  ಇದಕ್ಕೆ ಕೋರ್ಟ್ ಡಿಕ್ರಿ ಪಡೆದಿದ್ದರು. ನಂತರ ಈ ಡಿಕ್ರಿ ಬಳಸಿ ಮೂಲ ಮಾಲೀಕರನ್ನೇ ಸ್ವಾಧೀನದಿಂದ ಹೊರಹಾಕಲು ಯತ್ನಿಸಿದ್ದರು. ಈ ವಿಚಾರ ಗಮನಕ್ಕೆ ಬಂದ ಕೂಡಲೇ ಮೂಲ ಮಾಲೀಕರು ಹೈಕೋರ್ಟ್ಗೆ ರಿಟ್ ಅರ್ಜಿ ಸಲ್ಲಿಸಿದ್ದರು. ಘಟನೆ ಬಗ್ಗೆ ಅಚ್ಚರಿ ವ್ಯಕ್ತಪಡಿಸಿದ್ದ ಹೈಕೋರ್ಟ್ ನ್ಯಾ. ಕೃಷ್ಣ ಎಸ್. ದೀಕ್ಷಿತ್ ಘಟನೆಯ ಬಗ್ಗೆ ಸಿಐಡಿ ತನಿಖೆಗೆ ನಿರ್ದೇಶನ ನೀಡಿದ್ದರು. ಪ್ರಕರಣದ ಗಂಭೀರತೆ ಪರಿಗಣಿಸಿದ್ದ ಹೈಕೋರ್ಟ್ ವಿಭಾಗೀಯ ಪೀಠ ಸ್ವಯಂ ಪ್ರೇರಿತ ಪಿಐಎಲ್ ದಾಖಲಿಸಿಕೊಂಡಿತ್ತು. ಸಿಐಡಿ ತನಿಖೆ ವೇಳೆ ಈ ಅಕ್ರಮದಲ್ಲಿ ಕೆಲವು ವಕೀಲರೂ ಪಾಲ್ಗೊಂಡಿದ್ದು ಪತ್ತೆಯಾಗಿತ್ತು.

ಅಲ್ಲದೇ ಬೆಂಗಳೂರಿನ ಜಯನಗರ ಸೇರಿ ಹಲವೆಡೆ ಇಂಥದ್ದೇ ಅಕ್ರಮ ಎಸಗಿರುವುದು ಕಂಡು ಬಂದಿದೆ. ಕೋರ್ಟ್ಗಳಲ್ಲಿ ದಾಖಲಾದ 71 ಪ್ರಕರಣ ಸೇರಿದಂತೆ ಒಟ್ಟು 118 ಇಂತಹ ಪ್ರಕರಣ ನಡೆದಿರುವುದು ಸಿಐಡಿ ತನಿಖೆ ವೇಳೆ ಪತ್ತೆಯಾಗಿದೆ. ಹೈಕೋರ್ಟ್ ಪ್ರಕರಣದ ತನಿಖಾಧಿಕಾರಿಗಳಿಗೆ ಸಹಕರಿಸುವಂತೆ ಕಂದಾಯಾಧಿಕಾರಿಗಳಿಗೆ ಸೂಚನೆ ನೀಡಿದೆ. ಬೆಂಗಳೂರಿನ ಲಘು ವ್ಯಾಜ್ಯಗಳ ನ್ಯಾಯಾಲಯ ಕೂಡಾ ದಾಖಲೆಗಳನ್ನು ಸಿಐಡಿಗೆ ರವಾನಿಸಿದೆ.

ಆಘಾತಕಾರಿ ವಿಚಾರ ಅಂದ್ರೆ ಈ ವಂಚಕರು ನೋಟರಿ ದಾಖಲೆಗಳನ್ನೂ ಬಳಸಿರುವುದು ತನಿಖೆ ವೇಳೆ ಪತ್ತೆಯಾಗಿದೆ. ಕೆಲ ವಕೀಲರು, ಕೆಲ ನೋಟರಿಗಳು ಶಾಮೀಲಾಗಿರುವ ಹಿನ್ನೆಲೆಯಲ್ಲಿ ಹೈಕೋರ್ಟ್ ಮುಂದೆ ಇಂತಹ ಘಟನೆ ಮರುಕಳಿಸದಂತೆ ತಡೆಯಲು ಕರ್ನಾಟಕ ರಾಜ್ಯ ವಕೀಲರ ಪರಿಷತ್ ಅನ್ನೂ ಪ್ರತಿವಾದಿಯಾಗಿಸಿದೆ. ಕೋರ್ಟ್ಗೆ ಸಲಹೆ ನೀಡಲು ವಕೀಲ ಶ್ರೀಧರ್ ಪ್ರಭುರನ್ನು ಅಮೈಕಸ್ ಕ್ಯೂರಿಯಾಗಿ ನೇಮಿಸಿತ್ತು. ಇಂದು ಕೋರ್ಟ್ಗೆ ಹೇಳಿಕೆ ನೀಡಿದ ಅಮೈಕಸ್ ಕ್ಯೂರಿ ನೋಟರಿ ದಾಖಲೆಗಳನ್ನೂ ಡಿಜಿಟಲೀಕರಣ ಮಾಡುವ ಅಗತ್ಯವಿದೆ. ನೋಟರಿ ಕಾಯ್ದೆಗೆ ತಿದ್ದುಪಡಿ ತರುವಂತೆ ಕೇಂದ್ರ ಸರ್ಕಾರಕ್ಕೆ ನಿರ್ದೇಶನ ನೀಡಬೇಕೆಂದು ಮನವಿ ಮಾಡಿದರು.

ಈ ಬಗ್ಗೆ ಅಂತಿಮ ಆದೇಶದ ವೇಳೆ ಪರಿಗಣಿಸುವುದಾಗಿ ಹೇಳಿದ ಮುಖ್ಯ ನ್ಯಾಯಮೂರ್ತಿ ರಿತು ರಾಜ್ ಅವಸ್ತಿ ಹಾಗೂ ನ್ಯಾಯಮೂರ್ತಿ ಸಚಿನ್ ಶಂಕರ್ ಮಗದುಮ್ ರವರಿದ್ದ ವಿಭಾಗೀಯ ಪೀಠ ಸದ್ಯ ಜಮೀನಿನ ದಾಖಲೆಗಳನ್ನು ವಿಧಿ ವಿಜ್ಞಾನ ಪ್ರಯೋಗಾಲಯಕ್ಕೆ ಕಳುಹಿಸಲು ಅನುಮತಿ ನೀಡಿದೆ. ತನಿಖೆ ಪ್ರಗತಿ ವರದಿ ಸಲ್ಲಿಸಲು ಸಿಐಡಿ ಪೊಲೀಸರಿಗೆ ಸೂಚನೆ ನೀಡಿದೆ.

Kannada live news

Exit mobile version