ಬೆಂಗಳೂರು, ನ. 10: ಎರಡು ವಿಧಾನಸಭಾ ಕ್ಷೇತ್ರದ ಉಪಚುನಾವಣೆಯಲ್ಲಿ ಮತದಾರ ಕೊಟ್ಟ ತೀರ್ಪನ್ನು ನಾವು ಗೌರವಯುತವಾಗಿ ಒಪ್ಪುತ್ತೇವೆ. ಪಕ್ಷದ ಅಧ್ಯಕ್ಷನಾಗಿ ಈ ಸೋಲಿನ ಹೊಣೆ ನಾನು ಹೊರುತ್ತೇನೆಯೇ ಹೊರತು, ಬೇರೆಯವರ ಮೇಲೆ ಹಾಕುವುದಿಲ್ಲ. ಮುಂದಿನ ದಿನಗಳಲ್ಲಿ ಪಕ್ಷ ಸಂಘಟಿಸಿ ಸರ್ಕಾರದ ವೈಫಲ್ಯದ ವಿರುದ್ಧ ಹೋರಾಟ ಮುಂದುವರಿಸುತ್ತೇವೆ’ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ ಶಿವಕುಮಾರ್ ತಿಳಿಸಿದ್ದಾರೆ.
ರಾಜರಾಜೇಶ್ವರಿ ನಗರ ಹಾಗೂ ಶಿರಾ ವಿಧಾನಸಭಾ ಕ್ಷೇತ್ರದ ಉಪಚುನಾವಣೆ ಫಲಿತಾಂಶ ಪ್ರಕಟವಾದ ಹಿನ್ನೆಲೆಯಲ್ಲಿ ಮಂಗಳವಾರ ತಮ್ಮ ಸದಾಶಿವನಗರ ನಿವಾಸದಲ್ಲಿ ಡಿ.ಕೆ ಶಿವಕುಮಾರ್ ಮಾಧ್ಯಮಗಳ ಜತೆ ಮಾತನಾಡಿದರು.
‘ರಾಜ್ಯದಲ್ಲಿ ನಡೆದ ಎರಡು ವಿಧಾನಸಭಾ ಕ್ಷೇತ್ರದ ಉಪಚುನಾವಣೆ ಫಲಿತಾಂಶ ಬಂದಿದೆ. ಮತದಾರರು ಕೊಟ್ಟ ತೀರ್ಪನ್ನು ನಾವು ಬಹಳ ಗೌರವಯುತವಾಗಿ ಒಪ್ಪಿಕೊಂಡಿದ್ದೇವೆ. ಕಾಂಗ್ರೆಸ್ ಪಕ್ಷ ಮತದಾರರ ತೀರ್ಪು ಪ್ರಶ್ನೆ ಮಾಡುವುದಿಲ್ಲ.
ಈ ಫಲಿತಾಂಶ ಹೇಗಾಯಿತು, ಯಾಕಾಯಿತು ಎಂಬುದನ್ನು ಮುಂದಿನ ದಿನಗಳಲ್ಲಿ ಕೂತು ಚರ್ಚೆ ಮಾಡುತ್ತೇವೆ. ಎಲ್ಲಿ ಏನೇನು ಸರಿ ಮಾಡಿಕೊಳ್ಳಬೇಕೋ ಅದನ್ನು ಮಾಡುತ್ತೇವೆ.
ಈ ಚುನಾವಣೆಯಲ್ಲಿ ಸೋತಿದ್ದೇವೆ ಎಂದು ನಾನಾಗಲಿ, ಪಕ್ಷವಾಗಲಿ ಹಿಂಜರಿಯುವ ಅಗತ್ಯವಿಲ್ಲ. ಉಪಚುನಾವಣೆಯಲ್ಲಿ ಅಧಿಕಾರದಲ್ಲಿರುವ ಪಕ್ಷಕ್ಕೆ ಶೇ.15ರಷ್ಟು ಅನುಕೂಲವಾಗುವ ಅನುಭವ ನಮಗಿದೆ.
ನಾವೂ ಹಿಂದೆ ಬಳ್ಳಾರಿ, ಗುಂಡ್ಲುಪೇಟೆ, ನಂಜನಗೂಡು ಉಪಚುನಾವಣೆಯಲ್ಲಿ ಗೆದ್ದರೂ ನಂತರ ಚುನಾವಣೆಯಲ್ಲಿ ಸೋತಿದ್ದೆವು. ಹೀಗಾಗಿ ಯಾರೂ ಬೇಸರವಾಗುವುದು ಬೇಡ ಅಂತಾ ಹೇಳಲು ಬಯಸುತ್ತೇನೆ. ಈ ಚುನಾವಣೆಯಲ್ಲಿ ನಮ್ಮ ಕ್ಷೇತ್ರದಲ್ಲಿರುವ ಕಾರ್ಯಕರ್ತರು ಹಾಗೂ ರಾಜ್ಯದ ಕಾರ್ಯಕರ್ತರು ತಮ್ಮ ಶಕ್ತಿ ಮೀರಿ ಪಕ್ಷದ ಅಭ್ಯರ್ಥಿ ಗೆಲುವಿಗಾಗಿ ಶ್ರಮಿಸಿದ್ದಾರೆ.