ಮತ್ತೊಂದು ಬೆಳ್ಳಂದೂರು ಕೆರೆಯಾಗುತ್ತಿದೆ ಜಿಗಣಿ ಕೆರೆ

ಬೆಳ್ಳಂದೂರು ಕೆರೆಯಾಗ್ತಿದೆಯಾ ಜಿಗಣಿ ಕೆರೆ ? Jigani lake becoming like a Bellandur lake ? | cj

ಬೆಂಗಳೂರಿನ ಜಿಗಣಿ ಕೆರೆ ಸಾವಿನ ಅಂಚಿನಲ್ಲಿದೆ. ಜಿಗಣಿ ಕೆರೆ ಮತ್ತೊಂದು ಬೆಳ್ಳಂದೂರು ಕರೆಯಾಗ ಹೊರಟಿದೆ. ಇದು ಬೆಂಗಳೂರು ಆನೆಕಲ್ ತಾಲೂಕಿನ  ಜಿಗಣಿ ಕೆರೆಯ ದುಸ್ಥಿತಿ. ೧೨೦ ಹೆಕ್ಟೇರ್‌ನಲ್ಲಿರೋ ಈ ಕೆರೆ ದಶಕಗಳ ಹಿಂದೆ ಜನರ ಜೀವನಾಡಿಯಾಗಿತ್ತು. ಜನ ಇದೇ ನೀರನ್ನು ಕುಡಿಯಲು ಬಳಸುತ್ತಿದ್ದರು. ಇದೇ ನೀರು ಕೃಷಿಗೂ ಬಳಸಲಾಗುತ್ತಿತ್ತು. ಆದ್ರೆ ಈಗ ಈ ಕೆರೆಯ ದುಸ್ಥಿತಿ ನೋಡಿ. ಈ ಕೆರೆ ಅಂದ್ರೆ ಜನ ಭಯ ಬೀಳುತ್ತಿದ್ದಾರೆ. ಇದು ರೋಗಗಳ ವಾಸ ಸ್ಥಾನವಾಗಿದೆ.  ಇದರ ಹತ್ತಿರ ಹೋದ್ರೆ ಎಲ್ಲಿ ರೋಗ ಬರುತ್ತೋ  ಅನ್ನೋ ಆತಂಕದಲ್ಲಿದ್ದಾರೆ ಸ್ಥಳೀಯರು. ಈ ಕೆರೆಗೆ ಇಡೀ ಜಿಗಣಿಯ ಚರಂಡಿ ನೀರನ್ನು ಬಿಡಲಾಗುತ್ತಿದೆ. ಅಲ್ಲದೆ ಫ್ಯಾಕ್ಟರಿಗಳ ನೀರನ್ನೂ ಇದೇ ಕರೆಗೆ ಕಾನೂನುಬಾಹಿರವಾಗಿ ಹರಿಸಲಾಗುತ್ತಿದೆ. ಹಾಗಾಗಿ ಜಿಗಣಿ ಕೆರೆ ಪೂರ್ತಿ ಕೊಳಕಾಗಿದ್ದು ಕೆಟ್ಟ ವಾಸನೆ ಬರುತ್ತಿದೆ.

ಕೆರೆಯ ಅಕ್ಕ ಪಕ್ಕ ಓಡಾಡುವಾಗ ಮೂಗು ಮುಚ್ಚಿಕೊಂಡೇ ಹೋಗಬೇಕಾಗಿದೆ. ಯಾಕಂದ್ರೆ ಅಲ್ಲಿನ ಮಂದಿ ಇದೇ ಕೆರೆಯ ದಂಡೆಯ ಮೇಲೆ ಕಸಕಡ್ಡಿಗಳನ್ನು ತಂದು ಸುರಿಯುತ್ತಿದ್ದಾರೆ. ಅಲ್ಲದೆ ಈ ಕೆರೆಯ ತುಂಬಾ ಗಿಡಗಂಟಿಗಳು ಬೆಳೆದು ಕೆರೆ ಸಾವಿನಂಚಿಗೆ ತಲುಪಿದೆ. ಗಬ್ಬು ನಾರುತ್ತಿರೋ ಈ ಕೆರೆಯಲ್ಲಿ  ಮೀನು ಸಾಕಾಣಿಗೆ ಮುಂದಾಗಿದೆ ಸರ್ಕಾರ. ಯಾರಿಗೂ ಮಾಹಿತಿ ಕೊಡದೆ ಗುಟ್ಟು ಗುಟ್ಟಾಗಿ ಟೆಂಡರ್‌ ಕರೆದಿದ್ದಾರೆ. ಇದನ್ನು ಸ್ಥಳೀಯರು ಬಲವಾಗಿ ವಿರೋಧಿಸುತ್ತಿದ್ದಾರೆ. ಕೆರೆಯ ತುಂಬಾ ಕಳೆ ಬೆಳೆದು ನಿಂತಿದೆ. ಕಲುಷಿತ ನೀರಿನಿಂದ ಕೆರೆ ನೀರು ಕಪ್ಪುಗಟ್ಟಿದೆ. ಇಂಥಾ ಕೊಳಚೆ ಮತ್ತು ವಿಷ ನೀರಲ್ಲಿ ಮೀನು ಸಾಕಿದ್ರೆ ಆ ಮೀನನ್ನು ತಿಂದ ಜನರು ನಾನಾ ಕಾಯಿಲೆಗೆ ತುತ್ತಾಗುವ ಸಂಭವವಿದೆ. 

ಅಲ್ಲದೆ ಕೊಳಕು ನೀರಲ್ಲಿ ಮೀನು ಸಾಕಿದ್ರೆ ಮೀನುಗಳು ಸತ್ತು ಕೊಳೆತು ನಾರುತ್ತೆ. ಇದರಿಂದ ಸ್ಥಳೀಯರಿಗೆ ವಾಸಿಸಲು ತೊಂದರೆಯಾಗುತ್ತದೆ. ಹಾಗಾಗಿ ಮೀನುಗಾರಿಕಾ ಇಲಾಖೆ ಈ ಕೆರೆಯನ್ನು ಸ್ವಚ್ಛಗೊಳಿಸಿ ಆ ಬಳಿಕ ಮೀನುಸಾಕಾಣಿಕೆಗೆ ಅವಕಾಶ ಮಾಡಿಕೊಟ್ಟರೆ ಒಳ್ಳೆಯದು ಅನ್ನೋದು ಸ್ಥಳೀಯರ ಸಲಹೆ. ಈ ಕೆರೆಗೆ ಡ್ರೈನೇಜ್ ನೀರನ್ನು ಬಿಡುವುದನ್ನು ಮೊದಲು ನಿಲ್ಲಿಸಬೇಕು ಎಂಬುದು ಜನರ ಬೇಡಿಕೆಯಾಗಿದೆ. ಅಲ್ಲದೆ ಈ ಹಿಂದೆ ಮೀನು ಸಾಕಾಣಿಕಾ ಟೆಂಡರ್‌ ಪಡೆದುಕೊಂಡವರು ಈ ಕೆರೆಯ  ಸ್ವಚ್ಚತೆಯನ್ನು ನಿರ್ಲಕ್ಷಿಸಿದ್ದರಿಂದ ಜಿಗಣಿ ಕೆರೆಗೆ ಈ ದುಸ್ಥಿತಿ ಬಂದಿದೆ ಎಂಬುದು ಸ್ಥಳೀಯರ ದೂರು.  ಜಿಗಣಿ ಕರೆಯ ದುರವಸ್ಥೆಯನ್ನ ನೋಡಿ ಈಗಲಾದ್ರೂ ಅಧಿಕಾರಿಗಳು, ಜನಪ್ರತಿನಿಧಿಗಳು ನಿದ್ದೆಯಿಂದ ಎಚ್ಚೆತ್ತುಕೊಳ್ಳಲಿ. ಈ ಕರೆ ಮತ್ತೊಂದು ಬೆಳ್ಳಂದೂರು ಕೆರೆ ಆಗುವುದನ್ನು ತಡೆಯಲಿ.

Exit mobile version