ಮಳೆ ಆರ್ಭಟ: 33 ಸಾವು, 30 ಸಾವಿರಕ್ಕೂ ಹೆಚ್ಚು ಮಂದಿ ಸ್ಥಳಾಂತರ

ಹೈದರಾಬಾದ್, ಅ. 19: ಕಳೆದೊಂದು ವಾರದಿಂದ ಹೈದರಾಬಾದ್ ನಲ್ಲಿ ಸುರಿದ ಕುಂಭದ್ರೋಣ ಮಳೆಯ ಭಾರೀ ಹೊಡೆತದಿಂದಾಗಿ 33 ಮಂದಿ ಸಾವನ್ನಪ್ಪಿದ್ದು, 30 ಸಾವಿರಕ್ಕೂ ಹೆಚ್ಚು ಜನರನ್ನು ಸ್ಥಳಾಂತರಿಸಲಾಗಿದೆ ಎಂದು ಪೌರಾಡಳಿತ ಮತ್ತು ನಗರಾಭಿವೃದ್ಧಿ ಸಚಿವ ಕೆ. ಟಿ ರಾಮರಾವ್ ಮಾಧ್ಯಮಗಳಿಗೆ ತಿಳಿಸಿದ್ದಾರೆ.

ಮಳೆ ಸಂಬಂಧಿ ಘಟನೆಯಲ್ಲಿ ಮೃತಪಟ್ಟ 33 ಜನರು ಸಾವನ್ನಪ್ಪಿದ್ದು, ಈಗಾಗಲೇ ಮೃತಪಟ್ಟ 29 ಜನರ ಕುಟುಂಬಗಳಿಗೆ ತಲಾ 5 ಲಕ್ಷ ಪರಿಹಾರವನ್ನು ನೀಡಲಾಗಿದೆ ಎಂದು ಮೃತರ ಬಗ್ಗೆ ಸರ್ಕಾರಕ್ಕೆ ಯಾವುದೇ ಮಾಹಿತಿ ಇಲ್ಲ ಎಂಬ ಆರೋಪಕ್ಕೆ ತೆರೆ ಎಳೆದರು.

ಒಟ್ಟು 80 ವಿಶೇಷ ಅಧಿಕಾರಿಗಳನ್ನು ಸರ್ಕಾರ ನೇಮಿಸಿದ್ದು, ನಗರದಲ್ಲಿ ಮೃತಪಟ್ಟವರ ಸಂಖ್ಯೆ ಕಡಿಮೆ ಮಾಡಲು ಮೂರು ಹಂತದ ವಿಪತ್ತು ನಿರ್ವಹಣಾ ಯೋಜನೆ ರೂಪಿಸಿದ್ದೇವೆ ಎಂದು ಕೆಟಿಆರ್ ತಿಳಿಸಿದರು. ಹೈದರಾಬಾದ್ ಮತ್ತು ತೆಲಂಗಾಣದ ಇತರ ಭಾಗಗಳಿಗೆ ಗುರುವಾರದವರೆಗೆ ಭಾರೀ ಮಳೆ ಎಚ್ಚರಿಕೆಯನ್ನು ಹವಾಮಾನ ಇಲಾಖೆ ನೀಡಿದೆ. ಹೀಗಾಗಿ ಸರ್ಕಾರ ಕಟ್ಟೆಚ್ಚರ ಕ್ರಮ ಕೈಗೊಳ್ಳಲು ಸೂಚಿಸಲಾಗಿದೆ. ಈಗಾಗಲೇ ಭಾರತೀಯ ಸೇನೆ ಮತ್ತು ರಾಷ್ಟ್ರೀಯ ವಿಪತ್ತು ಸ್ಪಂದನಾ ಪಡೆಯಿಂದ ಪರಿಹಾರ ಕಾಮಗಾರಿ ನಡೆಯುತ್ತಿದೆ ಎಂದರು.

ತಗ್ಗು ಪ್ರದೇಶದಲ್ಲಿ ವಾಸಿಸುವ ಎಲ್ಲ ನಿವಾಸಿಗಳು ಕೂಡಲೇ ಸರ್ಕಾರಿ ಆಶ್ರಯ ಮನೆಗಳಿಗೆ ಸ್ಥಳಾಂತರಿಸುವಂತೆ ಸೂಚಿಸಲಾಗಿದೆ. ಆಶ್ರಯ ತಾಣಗಳಿಗೆ ಆಹಾರ, ಕುಡಿಯುವ ನೀರು, ಶೌಚಾಲಯ, ವೈದ್ಯಕೀಯ ಶಿಬಿರ, ಮಾಸ್ಕ್ ಗಳನ್ನು ಒದಗಿಸಲಾಗಿದೆ ಎಂದರು. ಶಿಬಿರಗಳಲ್ಲಿ ಕೋವಿಡ್-19 ಪರೀಕ್ಷೆಗಳನ್ನು ನಡೆಸಲಾಗುತ್ತಿದೆ ಎಂದು ತಿಳಿಸಿದರು.

Exit mobile version