ಮೆಲ್ಬೋರ್ನ್ ಟೆಸ್ಟ್: ರಹಾನೆ ಶತಕದ ಅಬ್ಬರ; ಟೀಂ ಇಂಡಿಯಾಕ್ಕೆ ಇನ್ನಿಂಗ್ಸ್ ಮುನ್ನಡೆ

ಮೆಲ್ಬೋರ್ನ್, ಡಿ. 27: ಹಂಗಾಮಿ ನಾಯಕ ಅಜಿಂಕ್ಯ ರಹಾನೆ (104) ಅಮೋಘ ಶತಕ ಹಾಗೂ ಬ್ಯಾಟ್ಸ್‌ಮನ್‌ಗಳ ಜವಾಬ್ದಾರಿಯುತ ಬ್ಯಾಟಿಂಗ್ ನೆರವಿನಿಂದ ಟೀಂ ಇಂಡಿಯಾ ತಂಡ ಬಾಕ್ಸಿಂಗ್ ಡೇ ಟೆಸ್ಟ್ ಪಂದ್ಯದಲ್ಲಿ ಆಸ್ಟ್ರೇಲಿಯಾ ವಿರುದ್ಧ ಇನಿಂಗ್ಸ್ ಮುನ್ನಡೆ ಪಡೆಯುವಲ್ಲಿ ಸಫಲವಾಗಿದೆ.

ಎಂಸಿಜಿ ಕ್ರೀಡಾಂಗಣದಲ್ಲಿ ನಡೆಯುತ್ತಿರುವ ಪಂದ್ಯದ ಎರಡನೇ ದಿನವಾದ ಭಾನುವಾರ 1 ವಿಕೆಟ್ ಗೆ 36 ರನ್‌ಗಳಿಂದ ದಿನದಾಟ ಮುಂದುವರಿಸಿದ ಭಾರತ ದಿನದಂತ್ಯಕ್ಕೆ 91. 3 ಓವರ್ ಗಳಲ್ಲಿ 5 ವಿಕೆಟ್ ನಷ್ಟಕ್ಕೆ  277 ರನ್ ಗಳಿಸಿ, ಒಟ್ಟಾರೆ 82 ರನ್ ಗಳ ಅಮೂಲ್ಯ ಮುನ್ನಡೆ ಪಡೆದಿದೆ.

ಅಜಿಂಕ್ಯ ರಹಾನೆ ಸಿಕ್ಕ ಜೀವದಾನಗಳ ಲಾಭ ಪಡೆದು ಅಜೇಯ 104 ರನ್ ಕಲೆ ಹಾಕಿದ್ದಾರೆ. ಇದರೊಂದಿಗೆ ಟೆಸ್ಟ್ ಕ್ರಿಕೆಟ್ ವೃತ್ತಿ ಬದುಕಿನ 12ನೇ ಶತಕ ಬಾರಿಸಿ ಮಿಂಚಿದರು. 195ನೇ ಎಸೆತದಲ್ಲಿ ರಹಾನೆ ಶತಕ ಸಿಡಿಸಿ ಸಂಭ್ರಮಿಸಿದರು. ಇದಕ್ಕೂ ಮುನ್ನ ದಿನದಾಟ ಆರಂಭಿಸಿದ ಶುಭ್ಮನ್ ಗಿಲ್ 45, ಚೇತೇಶ್ವರ ಪೂಜಾರ 17, ಹನುಮ ವಿಹಾರಿ 21, ರಿಷಬ್ ಪಂತ್ 29 ಮತ್ತು ರವೀಂದ್ರ ಜಡೇಜಾ ಅಜೇಯ 40 ರನ್ ಬಾರಿಸಿದರು.

Exit mobile version