ಹೊಟ್ಟೆಪಾಡಿಗಾಗಿ ರಸ್ತೆಯಲ್ಲಿ ಮಾರ್ಷಲ್ ಆರ್ಟ್ ಕಲೆಯನ್ನು ಪ್ರದರ್ಶಿಸಿ ಹಣ ಸಂಪಾದನೆ ಮಾಡಲು ಮುಂದಾಗಿದ್ದ ಅಜ್ಜಿಗೆ ಬಾಲಿವುಡ್ ನಟ ಸೋನು ಸೂದ್ ತಾವು ಕೊಟ್ಟಿದ್ದ ಭರವಸೆಯನ್ನು ಈಡೇರಿಸಿದ್ದಾರೆ.
ಕೆಲವು ದಿನಗಳ ಹಿಂದೆ ಮಹಾರಾಷ್ಟ್ರದ ಶಾಂತಾ ಪವಾರ್ ಎಂಬ ಅಜ್ಜಿ ರಸ್ತೆಯಲ್ಲಿ ನಿಂತು ಮಾರ್ಷಲ್ ಆರ್ಟ್ ಕಲೆಯನ್ನು ಪ್ರದರ್ಶಿಸಿದ್ದರು. ಅಜ್ಜಿಯ ಈ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಭಾರೀ ವೈರಲ್ ಆಗಿತ್ತು. ಈ ನಡುವೆ ವಿಡಿಯೋವನ್ನು ನೋಡಿದ್ದ ನಟ ಸೋನು ಸೂದ್, ಅಜ್ಜಿಗೆ ನೆರವು ನೀಡುವ ಭರವಸೆ ನೀಡಿದ್ದರು. ಅದರಂತೆ ತಾವು ನೀಡಿದ್ದ ಭರವಸೆಯನ್ನು ನಟ ಸೋನು ಸೂದ್ ಈಡೇರಿಸಿದ್ದಾರೆ.
ಅಜ್ಜಿ ತಾನು ಕಲಿತಿದ್ದ ಜೀವರಕ್ಷಕ ಕಲೆಯನ್ನು ಇತರರಿಗೆ ಹೇಳಿ ಕೊಡುವ ಉದ್ದೇಶದಿಂದ ಶಾಲೆಯೊಂದನ್ನು ತೆರೆಯುವ ಕನಸು ಹೊತ್ತಿದ್ದರು. ಅದರಂತೆ ಅಜ್ಜಿಯ ಈ ಕನಸನ್ನು ನನಸು ಮಾಡಿರುವ ಸೋನು ಸೂದ್, ಅಜ್ಜಿಗೆ ಮಾರ್ಷಲ್ ಆರ್ಟ್ ಶಾಲೆ ವ್ಯವಸ್ಥೆ ಮಾಡಿದ್ದಾರೆ. ಹೀಗಾಗಿ ಅಜ್ಜಿ ಶಾಂತಾ ಪವಾರ್, ಮಕ್ಕಳು ಹಾಗೂ ಮಹಿಳೆಯರಿಗೆ ಮಾರ್ಷಲ್ ಆರ್ಟ್ ಕಲಿಸಿಕೊಡುವಲ್ಲಿ ನಿರತರಾಗಿದ್ದಾರೆ. ವಿಶೇಷವೆಂದರೆ ಅಜ್ಜಿ ಶಾಂತಾ ಪವಾರ್ ತಮ್ಮ ಶಾಲೆಗೆ ಸೋನು ಸೂದ್ ಅವರ ಹೆಸರನ್ನೇ ಇಟ್ಟಿದ್ದು, ತಮ್ಮ ಕನಸು ನನಸಾಗಲು ನೆರವಾಗಿದ್ದಕ್ಕೆ ಧನ್ಯವಾದವನ್ನು ಹೇಳಿದ್ದಾರೆ. ಅಲ್ಲದೇ ಶೀಘ್ರವೇ ತಮ್ಮ ಶಾಲೆಗೆ ಭೇಟಿ ನೀಡುವಂತೆಯೂ ಮನವಿ ಮಾಡಿದ್ದಾರೆ.