ವಿಜಯಪುರ ರೈತರ ಸಮಸ್ಯೆಗಳು

Citizen journalist  Vijayapura farmers  problem

ವಿಜಯಪುರ ಜಿಲ್ಲೆಯ ಇಂಡಿ ತಾಲ್ಲೂಕಿನ ಅರ್ಜುಣಿಗಿ ಬಿಕೆ ಇಂಡಿ ಗ್ರಾಮದಲ್ಲಿ  ಕಳೆದ ೧೫ ದಿನಗಳಿಂದ ನಿರಂತರವಾಗಿ ಸುರಿಯುತ್ತಿರೋ ಮಳೆ ಇಲ್ಲಿನ ರೈತರ ಬೆಳೆಯನ್ನು ಸಂಪೂರ್ಣ ನಾಶ ಮಾಡಿದೆ. ಪ್ರತಿ ವರ್ಷ ಉತ್ತರ ಕರ್ನಾಟಕದ ಜನತೆ ಬರದಿಂದ ತತ್ತರಿಸಿ ಹೋಗ್ತಾರೆ. ಆದ್ರೆ ಈ ಬಾರಿ ಮಳೆ ಒಳ್ಳೆ ಮಳೆ ಬಿದ್ರೂ ರೈತನ ಸಂಕಷ್ಟ ಕಡಿಮೆಯಾಗಿಲ್ಲ. ಬದಲಾಗಿ  ಆದ್ರೆ ಇಲ್ಲಿನ ರೈತನ ಬೆಳೆಯ ಜೊತೆಗೆ ಬದುಕೇ ಕೊಚ್ಚಿ ಹೋಗಿದೆ. ಎಡೆಬಿಡದೆ ಸುರಿಯುತ್ತಿರುವ ಮಳೆಯಿಂದಾಗಿ ತೊಗರಿ ಬೆಳೆಯ ಗದ್ದೆಯಲ್ಲಿ ನೀರು ನಿಂತು  ಕೊಳೆತು ಹೋಗಿದೆ. ಇದರಿಂದ ರೈತ ಕಂಗಾಲಾಗಿ ಹೋಗಿದ್ದಾನೆ.

ಸಾಲ ಮಾಡಿ ಬೆಳೆದ ತೊಗರಿ ಕಾಯಿ ಬಿಡೋ ಹೊತ್ತಿಗೆ ಈ ರೀತಿ ಮಳೆಯಲ್ಲಿ ಕೊಚ್ಚಿ ಹೋಗಿರೋದು ರೈತನನ್ನು ಸಂಕಷ್ಟದ ಕೂಪಕ್ಕೆ ದೂಡಿದೆ. ನಿರಂತರ ಸುರಿಯುತ್ತಿರೋ ಮಳೆಯಿಂದ ಎಲ್ಲ ಹಳ್ಳ ಕೊಳ್ಳ ಬಾವಿಗಳು ತುಂಬಿ ಹರಿಯುತ್ತಿವೆ. ಈ ನೀರು ಸರಿಯಾದ ಚರಂಡಿ, ಕಾಲುವೆ ವ್ಯವಸ್ಥೆ ಇಲ್ಲದೆ ಗದ್ದೆಗಳಲ್ಲೇ ನೀರು ನಿಂತು ಬೆಳೆಗಳು ಕೊಳೆತು ಹೋಗುತ್ತಿವೆ. ಅದ್ರಲ್ಲೂ ಈರುಳ್ಳಿ ಬೆಳೆಗಾರರ ಗೋಳು ಹೇಳ ತೀರದು. ಕೊಯಿಲಿಗೆ ಬಂದಿರೋ ಈರುಳ್ಳಿ ಗದ್ದೆಯಲ್ಲೇ ಹಾಳಾಗುತ್ತಿವೆ.

ಮಳೆ ತಂದ ತೊಂದರೆಯಿಂದ ರೈತರಿಗೆ ಕೈಗೆ ಬಂದ ತುತ್ತು ಬಾಯಿಗೆ ಬರದಂತೆ ಸ್ಥಿತಿ ನಿರ್ಮಾಣವಾಗಿದೆ. ಇದಕ್ಕೆ ಸರ್ಕಾರ ಯಾವ ಪರಿಹಾರವನ್ನೂ ಕೊಡಲ್ಲ ಅನ್ನೋದು ರೈತರ ನೋವು. ಇನ್ನು ಮೆಕ್ಕೆ ಜೋಳ ಬೆಳೆದ ಬೆಳಗಾರರ ಸಮಸ್ಯೆ ಇದಕ್ಕಿಂತ ಭಿನ್ನವಾಗಿಲ್ಲ. ಇನ್ನೇನು ಕಟಾವು ಆಗಬೇಕು ಅನ್ನುವಷ್ಟರ ಹೊತ್ತಿಗೆ ಮಳೆರಾಯ ಆರ್ಭಟ ಇವರ ಪರಿಶ್ರಮವನ್ನೆಲ್ಲಾ ನೀರಲ್ಲಿ ಕೊಚ್ಚಿ ಹೋಗುವಂತೆ ಮಾಡಿದೆ.  ರೈತ ಹೀಗೆ ನಿರಂತರವಾಗಿ ಸಂಕಷ್ಟ ಅನುಭವಿಸುತ್ತಲೇ ಇದ್ದಾನೆ. ಇದೇ ರೀತಿ ಮುಂದುವರಿದ್ರೆ ಆತ್ಮಹತ್ಯೆಗೆ ಶರಣಾಗಬೇಕಾಗುತ್ತೆ. ಹಾಗಾಗಿ ಮುಖ್ಯಮಂತ್ರಿಗಳು ತಮ್ಮ ಪರಿಹಾರದ ನಿಧಿಯಿಂದ ಆದಷ್ಟು ಬೇಗ ಪರಿಹಾರ ಬಿಡುಗಡೆ ಮಾಡಲಿ ಅಂತ ರೈತರು ಮನವಿ ಮಾಡುತ್ತಿದ್ದಾರೆ.

ಈ ರೈತರ ಮನವಿಗೆ ಸ್ಥಳೀಯ ಅಧಿಕಾರಿಗಳು ತಕ್ಷಣ ಸ್ಪಂದಿಸಿ ಇವರ ನೆರವಿಗೆ ಧಾವಿಸಲಿ. ಜೊತೆಗೆ ಜಿಲ್ಲಾಡಳಿತ ಕೂಡ ಇತ್ತ ಗಮನಹರಿಸಿ ಇವರಿಗೆ ಸೂಕ್ತ ಪರಿಹಾರ ಒದಗಿಸಲಿ ಅನ್ನೋದು ವಿಜಯಟೈಮ್ಸ್‌ ಒತ್ತಾಯ.

Exit mobile version