ವಿದ್ಯುತ್ ಬಿಲ್ ಕಟ್ಟದ ಕಾರಣ ಕತ್ತಲಾಯ್ತು ಹೊಯ್ಸಳೇಶ್ವರ

ಹಾಸನ, ನ. 14: ಬೇಲೂರು ತಾಲೂಕಿನ ಹಳೇಬೀಡಿನಲ್ಲಿರುವ ಹೊಯ್ಸಳೇಶ್ವರ ದೇಗುಲವು ಕಳೆದ ಎರಡು ವಾರಗಳಿಂದ ಕತ್ತಲಲ್ಲಿ ಮುಳುಗಿದ್ದು, ಬಿಲ್‌ ಕಟ್ಟದ ಕಾರಣ ವಿದ್ಯುತ್‌ ಪೂರೈಕೆಯನ್ನು ನಿಲ್ಲಿಸಲಾಗಿದೆ ಎಂದು ತಿಳಿದುಬಂದಿದೆ.

ಭಾರತೀಯ ಐತಿಹಾಸಿಕ ಸರ್ವೇಕ್ಷಣಾ ಇಲಾಖೆ (ಎಎಸ್‌ಐ) ಈ ದೇವಾಲಯವನ್ನು ನಿರ್ವಹಣೆ ಮಾಡುತ್ತಿದ್ದು, 6 ತಿಂಗಳಿನಿಂದ ಸುಮಾರು 45 ಸಾವಿರ ರೂ. ವಿದ್ಯುತ್‌ ಬಿಲ್‌ ಬಾಕಿ ಉಳಿಸಿಕೊಂಡಿದೆ ಎಂದು ಚಾಮುಂಡೇಶ್ವರಿ ವಿದ್ಯುತ್‌ ಪ್ರಸರಣ ನಿಗಮ ನಿಯಮಿತದ ಮೂಲಗಳಿಂದ ತಿಳಿದುಬಂದಿದೆ.

ಪ್ರವಾಸಿಗರ ಪ್ರವೇಶದ ಸಮಯವು ಸೂರ್ಯ ಮುಳುಗುವುದರೊಳಗಾಗಿ ಮುಕ್ತಾಯವಾಗಿರುವ ಹಿನ್ನೆಲೆಯಲ್ಲಿ ಅಷ್ಟಾಗಿ ತೊಂದರೆ ಕಾಣಿಸುತ್ತಿಲ್ಲ. ಆದರೆ, ನಿರ್ವಹಣೆ ಕೆಲಸ ಮಾಡುತ್ತಿರುವವರು ಟಾರ್ಚ್‌ ಹಿಡಿದು ಕೆಲಸ ಮಾಡುತ್ತಿದ್ದಾರೆ.
ದೇವಾಲಯದ ಆವರಣದಲ್ಲಿರುವ ಪಾರ್ಕ್‌ಗೆ ಸಂಜೆ ಆರು ಗಂಟೆ ಮೇಲೆ ಪ್ರವೇಶಿಸಲು ಟಾರ್ಚ್‌ ಹಿಡಿದು ಬರಬೇಕಿದೆ ಎಂದು ಅಲ್ಲಿನ ಸಿಬ್ಬಂದಿ ತಿಳಿಸಿದ್ದಾರೆ.

ದೇವಾಲಯದ ವಿದ್ಯುತ್‌ ಬಿಲ್‌ 35 ಸಾವಿರ ರೂ.ಗಳಾಗಿದ್ದರೆ ಅಲ್ಲಿನ ಶೌಚಾಲಯದ ವಿದ್ಯುತ್‌ ಬಿಲ್‌ 12 ಸಾವಿರ ರೂ. ಇದೆ. ಕಳೆದ 6 ತಿಂಗಳಿನಿಂದ ಬಾಕಿ ಉಳಿದಿರುವ ಬಿಲ್‌ ಇದಾಗಿದೆ. ಹೊಯ್ಸಳೇಶ್ವರ ದೇಗುಲದ ಸಮೀಪದಲ್ಲೇ ಇರುವ ಜೈನ ದೇಗುಲ, ಕೇದಾರೇಶ್ವರ ದೇಗುಲಗಳ ವಿದ್ಯುತ್‌ ಬಿಲ್‌ ಸಹ ಕಟ್ಟಿಲ್ಲದ ಕಾರಣ ಈ ದೇಗುಲಗಳ ವಿದ್ಯುತ್‌ ಪೂರೈಕೆಯನ್ನೂ ನಿಲ್ಲಿಸಲಾಗಿದೆ ಎಂದು ಹೇಳಲಾಗುತ್ತಿದೆ.

Exit mobile version