ಸಂತ್ರಸ್ತರ ಸಂಕಷ್ಟ ಬಿಬಿಎಂಪಿ ಅಧಿಕಾರಿಗಳೇಕೆ ಆಲಿಸುತ್ತಿಲ್ಲ

ಬೆಂಗಳೂರು, ಅ. 24: ಸತತ ಮೂರು ನಾಲ್ಕು ದಿನಗಳಿಂದ ಸತತವಾಗಿ ಮಳೆ ಸುರಿಯುತ್ತಿರುವುದರಿಂದ ಅನೇಕ ಕಡೆ ಮನೆಗಳು, ಆಸ್ತಿ- ಪಾಸ್ತಿಗಳ ಷ್ಟ ಉಂಟಾಗಿದ್ದು, ಮಳೆ ಬಾಧಿತ ಪ್ರದೇಶಗಳಿಗೆ ಭೇಟಿ ನೀಡಿದ ಮುಖ್ಯಮಂತ್ರಿ ಬಿ. ಎಸ್. ಯಡಿಯೂರಪ್ಪನವರಿಗೆ ಸ್ಥಳೀಯ ನಿವಾಸಿಗಳು ಮುತ್ತಿಗೆ ಹಾಕಿ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಬಿಬಿಎಂಪಿ ಅಧಿಕಾರಿಗಳು ತಮ್ಮ ಸಂಕಷ್ಟವನ್ನು ಆಲಿಸುತ್ತಿಲ್ಲ ಎಂದು ಅಳಲು ತೋಡಿಕೊಂಡಿದ್ದಾರೆ.

ಭಾರಿ ಮಳೆಯಿಂದಾಗಿ ಹಾನಿಗೊಳಗಾದ ಬೆಂಗಳೂರಿನ ಉತ್ತರಹಳ್ಳಿಯಲ್ಲಿರುವ ಸುಬ್ರಹ್ಮಣ್ಯಪುರಂನ ನ್ಯೂ ಸಪ್ತಗಿರಿ ಲೇಔಟ್‌ಗೆ ಭೇಟಿ ನೀಡಿ ಪರಿಶೀಲನೆ ನಡೆಸಿದ ಸಿಎಂ ಯಡಿಯೂರಪ್ಪನವರಿಗೆ, ಖುದ್ದು ಮನೆಯ ಒಳಗೆ ಬಂದು ಪರಿಶೀಲನೆ ನಡೆಸಿ ಆಗ ನಮ್ಮ ಸಂಕಷ್ಟದ ಅರಿವಾಗಲಿದೆ. ಅಧಿಕಾರಿಗಳು, ರಾಜಕಾರಣಿಗಳು ಪ್ರವಾಹ ಪೀಡಿತ ಪ್ರದೇಶಗಳಿಗೆ ಕಾರಿನಿಂದ ಹೊರಗಡೆಗೆ ಬಂದು ಪರಿಶೀಲನೆ ನಡೆಸಿ ಹೋದರೆ ನಮ್ಮ ಕಷ್ಟದ ಅರಿವಾಗುವುದು ಹೇಗೆ ಎಂದು ಸ್ಥಳೀಯರು ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ಅಲ್ಲದೇ ಪ್ರತಿ ವರ್ಷ ಮಳೆ ಬಂದಾಗಲೂ ಚರಂಡಿ ಹಾಗೂ ರಾಜಕಾಲುವೆಗಳ ನೀರು ಮನೆಗಳಿಗೆ ನುಗ್ಗಿ ಅವಾಂತರ ಸೃಷ್ಟಿಯಾಗುತ್ತದೆ. ಈಗಾಗಲೇ ಹಲವು ಬಾರಿ ಈ ಭಾಗದ ಜನಪ್ರತಿನಿಧಿಗಳಿಗೆ ಹಾಗೂ ಬಿಬಿಎಂಪಿ ಅಧಿಕಾರಿಗಳಿಗೆ ಸಮಸ್ಯೆ ಪರಿಹರಿಸುವಂತೆ ಮನವಿ ಮಾಡಿದ್ದೇವೆ. ಆದರೆ ಸಚಿವರು, ಶಾಸಕರು ಸ್ಥಳಕ್ಕೆ ಬಂದು ಭರವಸೆ ನೀಡಿ ಹೋಗುತ್ತಾರೆ. ಬಿಬಿಎಂಪಿ ಅಧಿಕಾರಿಗಳು ಇತ್ತ ಗಮನವನ್ನು ಹರಿಸುವುದಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.

Exit mobile version