ರಾಕಿಂಗ್ ಸ್ಟಾರ್ ಯಶ್ ಅಭಿನಯದ, ಕೆಜಿಎಫ್-2 ಚಿತ್ರದ ಬಿಡುಗಡೆಗಾಗಿ ಪ್ರೇಕ್ಷಕರು ಕಾಯುತ್ತಿದ್ದಾರೆ. ಇದರ ಬೆನ್ನಲ್ಲೇ ಸಾಕಷ್ಟು ಕುತೂಹಲ ಕೆರಳಿಸಿರುವ ಈ ಚಿತ್ರದ ಮತ್ತೊಂದು ಪೋಸ್ಟರ್ ಸದ್ಯ ಟ್ವಿಟರ್ನಲ್ಲಿ ಟ್ರೆಂಡ್ ಆಗುತ್ತಿದೆ.
ಕೆಜಿಎಫ್-2 ಚಿತ್ರದಲ್ಲಿ ಬರಲಿರುವ “ಅಧೀರ”ನ ಪಾತ್ರದ ಬಗ್ಗೆ ಸಾಕಷ್ಟು ನಿರೀಕ್ಷೆ ಹುಟ್ಟಿಸಿದೆ. ಬಾಲಿವುಡ್ನ ಸಂಜಯ್ ದತ್ ಅಧೀರನ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಇದೀಗ ಅಧೀರನ ಫಸ್ಟ್ ಲುಕ್ ಇರುವ ಪೋಸ್ಟರ್ ಅನ್ನು ಚಿತ್ರತಂಡ ರಿಲೀಸ್ ಮಾಡುವ ಮೂಲಕ ಸಿನಿಮಾದ ಮೇಲಿನ ನಿರೀಕ್ಷೆಯನ್ನು ದುಪ್ಪಟ್ಟು ಮಾಡಿದೆ.
ಇಂದು ನಟ ಸಂಜಯ್ ದತ್ ಅವರ ಜನ್ಮದಿನದ ಹಿನ್ನೆಲೆಯಲ್ಲಿ ಚಿತ್ರತಂಡ ಕೆಜಿಎಫ್-2 ಚಿತ್ರದ ಪೋಸ್ಟರ್ ರಿಲೀಸ್ ಮಾಡಿದೆ. ಆ ಮೂಲಕ ಚಿತ್ರದಲ್ಲಿ ಅಧೀರನ ಪಾತ್ರ ಹೇಗಿರಲಿದೆ ಎಂಬ ಸಣ್ಣ ಎಳೆಯನ್ನು ಚಿತ್ರತಂಡ ಬಿಟ್ಟುಕೊಟ್ಟಿದೆ. ಅಧೀರ ಖಡ್ಗವನ್ನು ತಲೆಗೆ ಒತ್ತಿ ಕೂತಿದ್ದಾನೆ. ಅಷ್ಟೇ ಅಲ್ಲ, ಅಧೀರನ ಮುಖದ ಮೇಲೆ ದೇವನಾಗರಿ ಲಿಪಿಯಲ್ಲಿ ಏನನ್ನೋ ಬರೆಯಲಾಗಿದೆ. ಅಧೀರ ಹಾಕಿರುವ ಉಡುಗೆ ಕೂಡ ವಿಶೇವಾಗಿಯೇ ಇದೆ. ಅಧೀರನ ಪಾತ್ರದಲ್ಲಿರುವ ನಟ ಸಂಜಯ್ ದತ್ ಅವರ ಲುಕ್, ಸಿನಿ ರಸಿಕರನ್ನು ಆಕರ್ಷಿಸುತ್ತಿದೆ. ಟ್ವಿಟರ್ ನಲ್ಲಿ ಅಧೀರನ ಲುಕ್ ರಿವೀಲ್ ಮಾಡಿರುವ ನಿರ್ದೇಶಕ ಪ್ರಶಾಂತ್ ನೀಲ್, ಚಿತ್ರದ ಮೇಲಿನ ನಿರೀಕ್ಷೆಯನ್ನು ಮತ್ತಷ್ಟು ಹೆಚ್ಚಿಸಿದ್ದಾರೆ.