ಸೆಲ್ಫಿ ತೆಗೆದುಕೊಳ್ಳಲು ಹೋಗಿ ನದಿಯ ಮಧ್ಯದಲ್ಲಿ ಸಿಲುಕಿದ ಯುವತಿಯರ ರಕ್ಷಣೆ

ನದಿಯ ಮಧ್ಯದಲ್ಲಿ ನಿಂತು ಸೆಲ್ಫಿ ತೆಗೆದುಕೊಳ್ಳುತ್ತಿದ್ದ ವೇಳೆ ಏಕಾಏಕಿ ನೀರು ಹರಿದುಬಂದ ಪರಿಣಾಮ ಇಬ್ಬರು ಯುವತಿಯರು ಆತಂಕಕ್ಕೆ ಸಿಲುಕಿದ್ದ ಘಟನೆ ನಡೆದಿದೆ.

ಮಧ್ಯಪ್ರದೇಶದ ಚಿಂದ್ವಾರ್ ಜಿಲ್ಲೆಯಲ್ಲಿ ಈ ಘಟನೆ ನಡೆದಿದ್ದು, ಇಬ್ಬರು ಯುವತಿಯರು ನದಿಯ ಮಧ್ಯದಲ್ಲಿ ನಿಂತು ಪರದಾಡುತ್ತಿರುವ ವೀಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.

ಜುನಾರ್ಡೋದಿಂದ ಆರು ಯುವತಿಯರ ತಂಡ ಚಿಂದ್ವಾರ ಜಿಲ್ಲೆಯಲ್ಲಿರುವ ಪೆಂಚ್ ನದಿ ದಡಕ್ಕೆ ಪ್ರವಾಸ ಕೈಗೊಂಡಿದ್ದರು. ಇವರಲ್ಲಿ ಮೇಘಾ ಜಾವ್ರೆ ಮತ್ತು ವಂದಾನಾ ತ್ರಿಪಾಠಿ ಎಂಬ ಯುವತಿಯರು ಸೆಲ್ಫಿ ಕ್ಲಿಕ್ಕಿಸಲೆಂದು ನದಿಯ ಮಧ್ಯಭಾಗಕ್ಕೆ ತೆರಳಿದ್ದ ವೇಳೆ ಏಕಾಏಕಿ ನೀರಿನ ಹರಿವು ಹೆಚ್ಚಾಗಿದೆ. ಇದರಿಂದ ದಡಕ್ಕೆ ಬರಲು ಸಾಧ್ಯವಾಗದೆ ನದಿಯಲ್ಲಿದ್ದ ಬಂಡೆಯೊಂದರ ಮೇಲೆ ನಿಲ್ಲುತ್ತಾರೆ ಮಾತ್ರವಲ್ಲದೆ ಭಯಾತಂಕದಿಂದ ಚೀರಾಡುತ್ತಾರೆ.ಇದರಿಂದ ದಡದಲ್ಲಿದ್ದ ಉಳಿದ ನಾಲ್ವರು ಸ್ನೇಹಿತೆಯರು ಬೆಚ್ಚಿಬಿದ್ದು ಪೊಲೀಸರಿಗೆ ಕರೆಮಾಡುತ್ತಾರೆ. ಕೂಡಲೇ ಕಾರ್ಯಾಚರಣೆಗಿಳಿದ 12 ಪೊಲೀಸ್ ಸಿಬ್ಬಂದಿ, ಜಿಲ್ಲಾಡಳಿತ ಮತ್ತು ಸ್ಥಳೀಯರ ಸಹಕಾರದೊಂದಿಗೆ ಯುವತಿಯರನ್ನು ರಕ್ಷಿಸುವಲ್ಲಿ ಯಶಸ್ವಿಯಾಗಿದ್ದಾರೆ.

Exit mobile version