ಸೆ.19 ರಂದು ಚಾಮುಂಡಿ ಬೆಟ್ಟದಲ್ಲಿ ಉದ್ಘಾಟನೆಗೊಳ್ಳಲಿದೆ ಮಲ್ಟಿಲೆವಲ್ ಕಾರ್ ಪಾರ್ಕಿಂಗ್

ಮೈಸೂರು ಸೆ.3: ಮೈಸೂರಿನ ಚಾಮುಂಡಿ ಬೆಟ್ಟದಲ್ಲಿ ಮೂಲಭೂತ ಸೌಕರ್ಯಗಳನ್ನು ಕಲ್ಪಿಸಲು ಈಗಾಗಲೇ ಬೆಟ್ಟದ ಆವರಣದಲ್ಲಿ ೮೦ ಕೋಟಿ ರೂ.ವೆಚ್ಚದಲ್ಲಿ ಮಲ್ಟಿ ‌ಲೆವಲ್ ಕಾರ್ ಪಾರ್ಕಿಂಗ್ ಕಾಮಗಾರಿ ಉತ್ತಮ ಮಟ್ಟದಲ್ಲಿ ನಡೆಯುತ್ತಿದೆ. ಇದನ್ನು ಸೆಪ್ಟೆಂಬರ್ ೧೯ ರಂದು ಉದ್ಘಾಟಿಸಲಾಗುತ್ತಿದ್ದು, ಭಕ್ತಾದಿಗಳಿಗೆ ಇದರಿಂದ ಹೆಚ್ಚಿನ ಅನುಕೂಲ ಸಿಗಲಿದೆ ಎಂದು ಉಪ ಮುಖ್ಯಮಂತ್ರಿ ಗೋವಿಂದ ಎಂ.ಕಾರಜೋಳ ಅವರು ಹೇಳಿದರು.

ನಗರದ ಚಾಮುಂಡಿ ಬೆಟ್ಟದ ಕಾರ್ ಪಾರ್ಕಿಂಗ್ ‌ಕಾಮಗಾರಿ ವೀಕ್ಷಣೆ ಮಾಡಿ ಅವರು ಮಾತನಾಡಿದರು. ಸುಮಾರು ‌೮೦ ಕೋಟಿ ರೂ. ವೆಚ್ಚದಲ್ಲಿ ಕಾಮಗಾರಿ ನಡೆಯುತ್ತಿದ್ದು, ೬೦೦ ಕಾರ್ ನಿಲುಗಡೆಗೆ ಅವಕಾಶ ಕಲ್ಪಿಸಲಾಗುತ್ತಿದೆ ಹಾಗೂ ಪಾರ್ಕಿಂಗ್ ಸ್ಥಳದಿಂದ ನೇರವಾಗಿ ದೇವಾಲಯಕ್ಕೆ ಹೋಗಲು ‌ರಸ್ತೆಯನ್ನು ಮಾಡಲಾಗುವುದು .

ಒಂದು ಶಾಪಿಂಗ್ ಕಾಂಪ್ಲೆಕ್ಸ್ ಕೂಡ ನಿರ್ಮಾಣ ಹಂತದಲ್ಲಿದೆ.ಹಾಗೂ ಆಷಾಡ ಸಂದರ್ಭದಲ್ಲಿ ಭಕ್ತಾದಿಗಳು ಹೆಚ್ಚಿನ ಸಂಖ್ಯೆಯಲ್ಲಿ ಬರುವುದರಿಂದ ಬೃಹತ್ ದಾಸೋಹ ಭವನ ನಿರ್ಮಿಸಲು ಅಧಿಕಾರಿಗಳೊಂದಿಗೆ ಚರ್ಚಿಸಿ ನಿರ್ಧರಿಸಲಾಗುವುದು‌ ಎಂದರು ‌.

ಮೈಸೂರು ಭಾಗದಲ್ಲಿ ಮಳೆ ಹಾಗೂ ಪ್ರವಾಹದಿಂದ ಹಲವಾರು ಮನೆಗಳು, ಕೃಷಿ ಜಮೀನು ನಾಶವಾಗಿದ್ದು, ಅದರ ವೀಕ್ಷಣೆ ‌ಮಾಡಲಿದ್ದು ಹಲವಾರು ರಸ್ತೆ, ಸೇತುವೆ ಹಾಗೂ ಸಾರ್ವಜನಿಕ ಕಟ್ಟಡಗಳು ನಾಶವಾಗಿದ್ದು ಕಾಮಗಾರಿ ನಡೆಯುತ್ತಿದೆ ಎಂದರು.

ರಾಜ್ಯದಲ್ಲಿ ರಸ್ತೆ , ಸೇತುವೆ ಹಾಗೂ ಸಾರ್ವಜನಿಕ ಕಟ್ಟಡಗಳ ಕಾಮಗಾರಿಗೆ ಸುಮಾರು‌ ೮ ಸಾವಿರ ‌ಕೋಟಿ ಬೇಕಾಗಿದ್ದು, ತುರ್ತು ಕಾಮಗಾರಿಗಾಗಿ ಆರ್ಥಿಕ ಇಲಾಖೆಯಿಂದ ಈಗಾಗಲೇ ೫೦೦ ಕೋಟಿ ರೂ ಬಿಡುಗಡೆ ಮಾಡಲಾಗಿದ್ದು, ಕಾಮಗಾರಿಗಳು‌ ನಡೆಯುತ್ತಿವೆ ಎಂದು ತಿಳಿದಿದರು.

ಬೆಳೆ ಸರ್ವೆ ಕೂಡ ನಡೆಯುತ್ತಿದ್ದು, ರೈತರಿಗೆ ಬೆಳೆ ಪರಿಹಾರ ಹೆಚ್ಚಿಸುವಂತೆ ಪ್ರಧಾನ ಮಂತ್ರಿಗಳ ಜೊತೆ ಚರ್ಚಿಸಿ ತೀರ್ಮಾನಿಸಲಾಗುವುದು ಮತ್ತು ಸಂತ್ರಸ್ತರಿಗೆ ಪರಿಹಾರ ನೀಡುವ ಕಾರ್ಯ ವೇಗವಾಗಿ ಅಧಿಕಾರಿಗಳು ಮಾಡುತ್ತಿದ್ದಾರೆ ಎಂದರು.

ಮೈಸೂರು ದಸರಾ ಹತ್ತಿರವಾಗುತ್ತಿದ್ದು ಎಲ್ಲಾ ‌ಕಾಮಗಾರಿಗಳು ನಡೆಯುತ್ತಿವೆ. ಮೈಸೂರು ಮಹಾರಾಜರ ಗತ ವೈಭವ ಸಾರುವ ಮೂಲಕ ದಸರಾ ಮಹೋತ್ಸವ ನಡೆಯುವ ನಿಟ್ಟಿನಲ್ಲಿ ಉಸ್ತುವಾರಿ ಸಚಿವರು ಹೆಚ್ಚಿನ‌ ಕೆಲಸ ಮಾಡುತ್ತಿದ್ದಾರೆ ಎಂದರು.

ಈ ಸಂದರ್ಭದಲ್ಲಿ ಸಂಸದ ಪ್ರತಾಪ್ ‌ಸಿಂಹ, ಶಾಸಕರಾದ ಜಿ.ಟಿ ದೇವೇಗೌಡ, ಗಣ್ಯರಾದ ಎಂ.ಶಿವಣ್ಣ, ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಕೆ.ಜ್ಯೋತಿ, ಅಪರ ಜಿಲ್ಲಾಧಿಕಾರಿ ಪೂರ್ಣಿಮಾ ಹಾಗೂ ಮತ್ತಿತರ ಅಧಿಕಾರಿಗಳು ಉಪಸ್ಥಿತರಿದ್ದರು.

Exit mobile version