11 ನಗರಗಳಿಗೆ ಕೋವಾಕ್ಸಿನ್ ಲಸಿಕೆ ರವಾನೆ

ಹೈದರಾಬಾದ್, ಜ. 13: ಭಾರತದಲ್ಲಿ ತಯಾರಾದ ಕೋವ್ಯಾಕ್ಸಿನ್ ಲಸಿಕೆ, ಕೋವಿಡ್‌ 19′ ವಿರುದ್ಧದ  ಲಸಿಕೆಯನ್ನು ಭಾರತದ ಹನ್ನೊಂದು ನಗರಗಳಿಗೆ ಬುಧವಾರ ಮುಂಜಾನೆ ಯಶಸ್ವಿಯಾಗಿ ರವಾನಿಸಿರುವುದಾಗಿ ಹೈದರಾಬಾದ್ ಮೂಲದ ಭಾರತ್ ಬಯೋಟೆಕ್ ಕಂಪನಿ ತಿಳಿಸಿದೆ.

ಈ ಮೂಲಕ 16.5 ಲಕ್ಷ ಡೋಸ್‌ಗಳಷ್ಟು ಲಸಿಕೆಯನ್ನು ಕೇಂದ್ರ ಸರ್ಕಾರಕ್ಕೆ ದೇಣಿಗೆಯಾಗಿ ನೀಡಿರುವುದಾಗಿ ಕಂಪನಿ ಹೇಳಿದೆ. ಭಾರತದಲ್ಲೇ ತಯಾರಾದ ಮೊದಲ ಕೋವಿಡ್‌ ವಿರುದ್ಧದ ಲಸಿಕೆಯ ಕ್ಲಿನಿಕಲ್ ಟ್ರಯಲ್‌ಗೆ ಸಹಕರಿಸಿದ ಸ್ವಯಂ ಸೇವಕರಿಗೆ, ಪಾಲುದಾರರಿಗೆ ಹಾಗೂ ದೇಶದ ಸಮಸ್ತ ನಾಗರಿಕರಿಗೆ ಮನದಾಳದ ಕೃತಜ್ಞತೆಗಳನ್ನು ಸಲ್ಲಿಸುತ್ತಿರುವುದಾಗಿ ಕಂಪನಿ ಪ್ರಕಟಣೆಯಲ್ಲಿ ತಿಳಿಸಿದೆ.

55 ಲಕ್ಷ ಡೋಸೇಜ್‌ ಲಸಿಕೆ ಖರೀದಿಸುವ ಸರ್ಕಾರದ ಆದೇಶವನ್ನು ಸ್ವೀಕರಿಸಿದ ಭಾರತ್ ಬಯೋಟೆಕ್‌, ಮೊದಲ ಬ್ಯಾಚ್‌ನಲ್ಲಿ (ಪ್ರತಿ ಪೆಟ್ಟಿಗೆಯಲ್ಲಿ (ವಯಾಲ್) 20 ಡೋಸೇಜ್‌ನಂತೆ) ಬೆಂಗಳೂರು ಸೇರಿದಂತೆ ವಿಜಯವಾಡದ ಗೊನ್ನಾವರಂ, ಗುವಾಹಟಿ, ಪಾಟ್ನಾ, ದೆಹಲಿ, ಕುರುಕ್ಷೇತ್ರ, ಪುಣೆ, ಭುವನೇಶ್ವರ, ಜೈಪುರ, ಚೆನ್ನೈ ಮತ್ತು ಲಖನೌಗೆ ಲಸಿಕೆಗಳನ್ನು ರವಾನಿಸಿದೆ.

ಕೊವಾಕ್ಸಿನ್ ಹೆಚ್ಚು ಶುದ್ಧೀಕರಿಸಿದ ಮತ್ತು ನಿಷ್ಕ್ರಿಯಗೊಂಡಿರುವ ಎರಡು-ಡೋಸ್ ಸಾರ್ಸ್‌ ಕೋವ್‌ 2 ಲಸಿಕೆಯಾಗಿದ್ದು, ಇದನ್ನು ವೆರೋ ಸೆಲ್ ಉತ್ಪಾದನಾ ವೇದಿಕೆಯಲ್ಲಿ ತಯಾರಿಸಲಾಗುತ್ತದೆ. ಇದನ್ನು ಭಾರತೀಯ ವೈದ್ಯಕೀಯ ಸಂಶೋಧನಾ ಮಂಡಳಿ ಮತ್ತು ನ್ಯಾಷನಲ್ ಇನ್‌ಸ್ಟಿಟ್ಯೂಟ್ ಆಫ್ ವೈರಾಲಜಿ ಸಹಯೋಗದೊಂದಿಗೆ ಅಭಿವೃದ್ಧಿಪಡಿಸಲಾಗಿದೆ. ನಿಷ್ಕ್ರಿಯಗೊಳಿಸಿದ ಲಸಿಕೆಯನ್ನು ಭಾರತ್ ಬಯೋಟೆಕ್‌ನ ಬಿಎಸ್‌ಎಲ್ -3 (ಬಯೋ-ಸೇಫ್ಟಿ ಲೆವೆಲ್ 3) ಜೈವಿಕ ಕಂಟೈನ್‌ಮೆಂಟ್‌ನಲ್ಲಿ ಅಭಿವೃದ್ಧಿಪಡಿಸಲಾಗಿದೆ.

Exit mobile version