ಆದಷ್ಟು ಬೇಗ ರಾಜ್ಯದಲ್ಲಿ1 ರಿಂದ 5ನೇ ತರಗತಿ ಶಾಲೆ ತೆರೆಯುತ್ತೇವೆ: ಶಿಕ್ಷಣ ಸಚಿವ ಬಿ.ಸಿ ನಾಗೇಶ್

ಇಷ್ಟು ದಿನ ರಜಾಮಜಾದಲ್ಲಿದ್ದ ಪುಟ್ಟ ಮಕ್ಕಳಿಗೆ ಶಿಕ್ಷಣ ಸಚಿವರು ಶಾಕ್‌ ನೀಡುವ ಯೋಚನೆಯಲ್ಲಿದ್ದಾರೆ. ಸದ್ಯದಲ್ಲೇ ತಾಂತ್ರಿಕ ಸಮಿತಿ ಸಭೆ ನಡೆಸಿ 1ರಿಂದ 5ನೇ ತರಗತಿ ಶಾಲೆ ತೆರೆಯುವ ನಿರ್ಧಾರ ಮಾಡಲಿದ್ದಾರಂತೆ.

ಶಿವಮೊಗ್ಗ: 1 ರಿಂದ 5ನೇ ತರಗತಿಯವರೆಗೆ ಶಾಲೆ ಆರಂಭಿಸುವ ವಿಚಾರವಾಗಿ ತಾಂತ್ರಿಕ ಸಭೆ ಸದ್ಯದಲ್ಲಿಯೇ ಮಾಡುತ್ತಿದ್ದೇವೆ. ತಾಂತ್ರಿಕ ಸಮಿತಿ ಸಭೆ ಅನುಮತಿ ನೀಡಿದ ನಂತರ ಆರಂಭಿಸುತ್ತೇವೆ ಎಂದು ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಸಚಿವ ಬಿ.ಸಿ ನಾಗೇಶ್ ಹೇಳಿದ್ದಾರೆ.

ಶಿವಮೊಗ್ಗದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಸಚಿವರು, 6, 7, 8ನೇ ತರಗತಿಗಳನ್ನು ನಮ್ಮ ಶಿಕ್ಷಕರು ನಡೆಸಿದಂತಹ ರೀತಿ ನೋಡಿ ತುಂಬ ಸಂತೋಷವಾಗಿದೆ. ಖಂಡಿತ ಸದ್ಯದಲ್ಲೇ 1 ರಿಂದ 5ನೇ ತರಗತಿ ವರೆಗೆ ಶಾಲೆ ತೆರೆಯುವ ಬಗ್ಗೆ ತಾಂತ್ರಿಕ ಸಮಿತಿ ಮುಂದೆ ಚರ್ಚೆ ಮಾಡ್ತೇವೆ ನಂತರ ಆರಂಭಿಸುತ್ತೇವೆ ಎಂದರು. 

ಪಠ್ಯ ಕಡಿತಗೊಳಿಸುವ ವಿಚಾರವಾಗಿ ಮಾತನಾಡಿ, ಬ್ರಿಡ್ಜ್ ಕೋರ್ಸ್ ಮಾಡುತ್ತಿದ್ದೇವೆ. ಸಿಲೆಬಸ್ ಪೂರ್ತಿ ಮಾಡಿದರೆ ಮಕ್ಕಳಿಗೆ ಲಾಭ. ಒಂದೂವರೆ ವರ್ಷ ಮಕ್ಕಳು ಶಾಲೆಯಿಂದ ದೂರ ಉಳಿದಿದ್ದಾರೆ. ಅದನ್ನು ಬ್ರಿಡ್ಜ್ ಕೋರ್ಸ್ ನಲ್ಲಿ ಪೂರ್ಣಗೊಳಿಸಬೇಕಿದೆ. ಈ ವರ್ಷವು ಪಠ್ಯ ಕಡಿತಗೊಳಿಸಿದರೆ ಮುಂದಿನ ತರಗತಿಗಳಿಗೆ ತೊಂದರೆ ಆಗುತ್ತದೆ. ಹೀಗಾಗಿ ಆ ಬಗ್ಗೆ ಯಾವ ನಿರ್ಣಯ ಕೈಗೊಂಡಿಲ್ಲ.

ಶಿಕ್ಷಕರ ರಜೆ ಕಡಿಮೆ ಮಾಡಿ ಸಿಲೆಬಸ್ ಪೂರ್ಣಗೊಳಿಸಬಹುದಾ ಎಂಬ ಬಗ್ಗೆ ಯೋಚನೆ ಇದೆ. ಈ ಬಗ್ಗೆ ಯಾವುದೇ ಚರ್ಚೆ ನಡೆದಿಲ್ಲ. ಮುಂದಿನ ದಿನಗಳಲ್ಲಿ ಶಿಕ್ಷಕರ ಸಹಕಾರ ನೋಡಿ, ಅವಶ್ಯಕತೆ ಬಿದ್ದರೆ ನಿರ್ಣಯ ಕೈಗೊಳ್ಳುತ್ತೇವೆ. ಪಠ್ಯ ಕಡಿತಗೊಳಿಸುವ ಬಗ್ಗೆ ಪ್ರಯತ್ನ ಮಾಡುತ್ತೇವೆ ಎಂದು ತಿಳಿಸಿದರು.

Exit mobile version