2ನೇ ಟೆಸ್ಟ್: ಕಾಂಗರೂ ಬಗ್ಗು ಬಡಿದ ಭಾರತಕ್ಕೆ 8 ವಿಕೆಟ್‌ಗಳ ಭರ್ಜರಿ ಜಯ

ಮೆಲ್ಬೋರ್ನ್, ಡಿ. 29: ಮೊದಲ ಟೆಸ್ಟ್‌ನಲ್ಲಿ ಅನುಭವಿಸಿದ್ದ ಹೀನಾಯ ಸೋಲಿನ ಕಹಿಯನ್ನು ಮರೆಮಾಚುವ ಪ್ರದರ್ಶನ ನೀಡಿದ ಭಾರತ, 2ನೇ ಟೆಸ್ಟ್‌ನಲ್ಲಿ ಆಸ್ಟ್ರೇಲಿಯಾ ವಿರುದ್ದ 8 ವಿಕೆಟ್‌ಗಳ ಜಯಭೇರಿ ಭಾರಿಸಿದೆ.

ಎಂಸಿಜಿ ಅಂಗಳದಲ್ಲಿ ನಡೆದ ಬಾಕ್ಸಿಂಗ್ ಡೇ ಟೆಸ್ಟ್ ಪಂದ್ಯದಲ್ಲಿ ‌ಬಲಿಷ್ಠ ಕಮ್ ಬ್ಯಾಕ್ ಮಾಡಿದ ಟೀಂ ಇಂಡಿಯಾ, ಸಾಂಘಿಕ ಪ್ರದರ್ಶನದ ಮೂಲಕ ಆಸೀಸ್ ವಿರುದ್ಧ ಮೇಲುಗೈ ಸಾಧಿಸಿತು. ಪಂದ್ಯದಲ್ಲಿ ಟಾಸ್ ಗೆದ್ದು ಬ್ಯಾಟಿಂಗ್ ಆಯ್ಕೆ ಮಾಡಿಕೊಂಡ ಆಸ್ಟ್ರೇಲಿಯ ಮೊದಲ ಇನ್ನಿಂಗ್ಸ್‌ನಲ್ಲಿ ಕೇವಲ 195 ರನ್‌ಗಳಿಗೆ ಆಲೌಟ್ ಆಯಿತು. ಸಾಧಾರಣ ಮೊತ್ತಕ್ಕೆ ತಕ್ಕ ಉತ್ತರ ನೀಡಿದ ಭಾರತ ಕ್ಯಾಪ್ಟನ್ ಅಜಿಂಕ್ಯಾ ರಹಾನೆ(112) ಸಮಯೋಚಿತ ಆಟದ ನೆರವಿನಿಂದ ಸುಭಧ್ರ ಸ್ಥಿತಿಗೆ ತಲುಪಿಸಿತು. ಪರಿಣಾಮ ಮೊದಲ ಇನ್ನಿಂಗ್ಸ್‌ನಲ್ಲಿ 326 ರನ್‌ಗಳಿಸಿ 131 ರನ್‌ಗಳ ಉತ್ತಮ ಮುನ್ನಡೆ ಪಡೆಯಿತು. ಎರಡನೇ ಇನ್ನಿಂಗ್ಸ್‌ನಲ್ಲೂ ಬ್ಯಾಟಿಂಗ್ ವೈಫಲ್ಯ ಅನುಭವಿಸಿದ ಆಸ್ಟ್ರೇಲಿಯಾ, ಭಾರತದ ಬೌಲರ್‌ಗಳನ್ನು ಸಮರ್ಪಕವಾಗಿ ಎದುರಿಸುವಲ್ಲಿ ವಿಫಲರಾಗಿ 200 ರನ್‌ಗಳಿಗೆ ತನ್ನೆಲ್ಲಾ ವಿಕೆಟ್‌ಗಳನ್ನು ಕಳೆದುಕೊಂಡು ಕೇವಲ 69 ರನ್‌ಗಳ ಅಲ್ಪ ಮುನ್ನಡೆ ಸಾಧಿಸಿ ಸೋಲಿನ‌ ದವಡೆಗೆ ಸಿಲುಕಿತು.

ಇದರೊಂದಿಗೆ ಗೆಲುವಿಗೆ ಕೇವಲ 70 ರನ್‌ಗಳ ಸಾಧಾರಣ ಗುರಿ ಪಡೆದ ಟೀಂ ಇಂಡಿಯಾ, 2ನೇ ಇನ್ನಿಂಗ್ಸ್‌ನಲ್ಲಿ ಆರಂಭಿಕ ಆಘಾತ ಅನುಭವಿಸಿದರು ಶುಭ್ಮನ್ ಗಿಲ್(35) ಹಾಗೂ ನಾಯಕ ಅಜಿಂಕ್ಯಾ ರಹಾನೆ(27) ಬ್ಯಾಟಿಂಗ್ ನೆರವಿನಿಂದ ಗೆಲುವಿನ ನಗೆ ಬೀರುವ ಮೂಲಕ ಸರಣಿಯಲ್ಲಿ 1-1ರ ಸಮಬಲ ಸಾಧಿಸಿತು.

ವಿರಾಟ್ ಕೊಹ್ಲಿ ಅನುಪಸ್ಥಿತಿಯಲ್ಲಿ ತಂಡವನ್ನು ಮುನ್ನಡೆಸಿದ ಅಜಿಂಕ್ಯಾ ರಹಾನೆ ನಾಯಕನಾಗಿ ಜವಾಬ್ದಾರಿಯ ಆಟವಾಡಿದರು. ಮೊದಲ ಇನ್ನಿಂಗ್ಸ್‌ನಲ್ಲಿ ಅದ್ಭುತ ಶತಕ ಬಾರಿಸಿ ತಂಡದ‌ ಗೆಲುವಿನಲ್ಲಿ ಪ್ರಮುಖ ಪಾತ್ರವಹಿಸಿದ ರಹಾನೆ, ಎರಡನೇ ಇನ್ನಿಂಗ್ಸ್‌ನಲ್ಲೂ ಉತ್ತಮ ಪ್ರದರ್ಶನ ನೀಡಿದ ಅಜಿಂಕ್ಯಾ ರಹಾನೆ, ಪಂದ್ಯ ಪುರುಷೋತ್ತಮ ಪ್ರಶಸ್ತಿ ಪಡೆದರು.

ಭಾರತದ ಪರ‌ ಎರಡನೇ ಇನ್ನಿಂಗ್ಸ್‌ನಲ್ಲಿ ಉತ್ತಮ ಪ್ರದರ್ಶನ ನೀಡಿದ ಮೊಹಮ್ಮದ್‌ ಸಿರಾಜ್ 3, ಬುಮ್ರಾ, ಅಶ್ವಿನ್ ಹಾಗೂ ಜಡೇಜಾ ತಲಾ 2 ವಿಕೆಟ್ ಪಡೆದರೆ, ಉಮೇಶ್ ಯಾದವ್ 1 ವಿಕೆಟ್ ಪಡೆದು ಆಸೀಸ್ ಬ್ಯಾಟಿಂಗ್ ಬೆನ್ನೆಲುಬು ಮುರಿದರು. ತಮ್ಮ ಚೊಚ್ಚಲ ‌ಅಂತಾರಾಷ್ಟ್ರೀಯ ಟೆಸ್ಟ್ ಪಂದ್ಯದಲ್ಲಿ ಉತ್ತಮ ಪ್ರದರ್ಶನ ನೀಡಿದ ಶುಭ್ಮನ್ ಗಿಲ್(45 ಹಾಗೂ 35) ರನ್‌ಗಳಿಸಿದರೆ. ವೇಗಿ ಮೊಹಮ್ಮದ್‌ ಸಿರಾಜ್ ಪಂದ್ಯದಲ್ಲಿ ಎರಡೂ ಇನ್ನಿಂಗ್ಸ್‌ಗಳಲ್ಲಿ 5 ವಿಕೆಟ್ ಪಡೆದು ಗಮನ ಸೆಳೆದರು. ಉಭಯ ತಂಡಗಳ ನಡುವಿನ ನಾಲ್ಕು ಪಂದ್ಯಗಳ ಟೆಸ್ಟ್ ಸರಣಿಯ ಮೂರನೇ ‌ಟೆಸ್ಟ್ ಪಂದ್ಯ ಜನವರಿ 7ರಂದು ಸಿಡ್ನಿಯಲ್ಲಿ ನಡೆಯಲಿದೆ.

Exit mobile version