ದ್ವಿತೀಯ ಪಿಯು ಪರೀಕ್ಷೆಗಳು ಏಪ್ರಿಲ್‌ ಕೊನೆಯ ವಾರಕ್ಕೆ ಮುಂದೂಡುವ ಸಾಧ್ಯತೆ

ಬೆಂಗಳೂರು ಡಿ 29 :  ಕೊರೊನಾ ಕಾರಣದಿಂದ ಈ ಸಾಲಿನ ಶೈಕ್ಷಣಿಕ ವರ್ಷ ತಡವಾಗಿ ಆರಂಭವಾಗಿರುವ ಹಿನ್ನಲೆಯಲ್ಲಿ  ಪಾಠಗಳು ಇನ್ನೂ ಪೂರ್ಣಗೊಳ್ಳದ ಕಾರಣ ಮಾರ್ಚ್‌ ತಿಂಗಳಿನಲ್ಲಿ ನಡೆಯಬೇಕಿದ್ದ ದ್ವಿತೀಯ ಪಿಯು ಪರೀಕ್ಷೆಗಳು ಏಪ್ರಿಲ್ ಕೊನೆಯ ವಾರಕ್ಕೆ ಮುಂದೂಡಿಕೆಯಾಗುವ ಸಾಧ್ಯತೆಗಳಿವೆ ಎಂದು ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಸಚಿವ ಬಿ.ಸಿ.ನಾಗೇಶ್ ಅವರು ಬುಧವಾರ ಸ್ಪಷ್ಟಪಡಿಸಿದ್ದಾರೆ.

ಸುದ್ದಿಗಾರರೊಂದಿಗೆ  ಈ ಬಗ್ಗೆ ಮಾತನಾಡಿರುವ ಅವರು, ಏಪ್ರಿಲ್ ಕೊನೆಯ ವಾರದಲ್ಲಿ  ಪರೀಕ್ಷೆಗಳನ್ನು ನಡೆಸಿದರೆ ವಿಳಂಬವಾಗುವುದಿಲ್ಲ. ಏಕೆಂದರೆ, ಪರೀಕ್ಷೆ ವಿಳಂಬವಾಗಿದ್ದೇ ಆದರೆ, ಅದು ರಾಷ್ಟ್ರೀಯ ಅರ್ಹತೆ ಮತ್ತು ಪ್ರವೇಶ ಪರೀಕ್ಷೆ (NEET), ಸಾಮಾನ್ಯ ಪ್ರವೇಶ ಪರೀಕ್ಷೆ ಮತ್ತು ವಿದ್ಯಾರ್ಥಿಗಳ ಇತರ ಪ್ರವೇಶ ಪರೀಕ್ಷೆಗಳ ವೇಳಾಪಟ್ಟಿಗಳ ಮೇಲೆ ಪರಿಣಾಮ ಬೀರಲಿದೆ. ಹೀಗಾಗಿ ಪರೀಕ್ಷೆಗಳು ವಿಳಂಬವಾಗುವುದಿಲ್ಲ ಎಂದು ಹೇಳಿದ್ದಾರೆ.

ಇತ್ತೀಚೆಗಷ್ಟೇ ಮಾರ್ಚ್‌ನಲ್ಲಿ ಪರೀಕ್ಷೆಗಳು ನಿಗದಿಯಂತೆ ನಡೆಯಲಿವೆ ಎಂದು ಪಿಯು ಇಲಾಖೆ ಹೇಳಿಕೊಂಡಿತ್ತು. ಆದರೆ ಕೋವಿಡ್ ನಿರ್ಬಂಧಗಳಿಂದಾಗಿ ಪಠ್ಯಕ್ರಮವನ್ನು ಪೂರ್ಣಗೊಳಿಸಿಲ್ಲ ಎಂದು ಉಪನ್ಯಾಸಕರು ಬೇಸರ ವ್ಯಕ್ತಪಡಿಸಿದ್ದಾರೆ. ಈ ಹಿನ್ನೆಲೆಯಲ್ಲಿ ಶಿಕ್ಷಣ ಇಲಾಖೆ ಪರೀಕ್ಷೆ ಮುಂದೂಡುವ ಕುರಿತು ಚಿಂತನೆ ನಡೆಸಲಾಗಿದೆ ಎಂದು ಬಿ.ಸಿ. ನಾಗೇಶ್ ತಿಳಿಸಿದ್ದಾರೆ

Exit mobile version