ನವದೆಹಲಿ, ಏ. 23: ಕೊರೋನಾ ಎರಡನೇ ಅಲೆಯ ಪರಿಣಾಮ ದೇಶದಲ್ಲಿ ಭೀಕರವಾಗಿದ್ದು, ಕಳೆದ 24ಗಂಟೆಗಳಲ್ಲಿ 3,32,730 ಜನರಿಗೆ ಸೋಂಕು ತಗುಲಿದ್ದು, 2,263 ಮಂದಿ ಸಾವಿಗೀಡಾಗಿದ್ದಾರೆ ಎಂದು ಕೇಂದ್ರ ಆರೋಗ್ಯ ಸಚಿವಾಲಯ ತಿಳಿಸಿದೆ. ಈ ಮೂಲಕ ದೇಶದ ಒಟ್ಟು ಸೋಂಕಿತರ ಸಂಖ್ಯೆ 16,263,695 ಆಗಿದ್ದು, ವಿಶ್ವದಲ್ಲಿ ಅತೀ ಹೆಚ್ಚು ಕೊವಿಡ್ ರೋಗಿಗಳಿರುವ ದೇಶಗಳ ಪಟ್ಟಿಯಲ್ಲಿ ಎರಡನೇ ಸ್ಥಾನದಲ್ಲಿದೆ. ಈವರೆಗೆ ಕೊವಿಡ್ನಿಂದ ಮೃತಪಟ್ಟವರ ಸಂಖ್ಯೆ 1,86,920 ಆಗಿದ್ದು, 24,28,616 ಸಕ್ರಿಯ ಪ್ರಕರಣಗಳಿವೆ. ಗುರುವಾರ 1,93,279 ಮಂದಿ ಚೇತರಿಸಿಕೊಂಡಿದ್ದು, ಈವರೆಗೆ ಚೇತರಿಸಿಕೊಂಡವರ ಸಂಖ್ಯೆ 1,36,48,159 ಆಗಿದೆ ಎಂದು ಕೇಂದ್ರ ಆರೋಗ್ಯ ಸಚಿವಾಲಯ ಹೇಳಿದೆ.
ಮಹಾರಾಷ್ಟ್ರ, ಉತ್ತರ ಪ್ರದೇಶ, ದೆಹಲಿ, ಮತ್ತು ಗುಜರಾತ್ ಸೇರಿದಂತೆ ಹತ್ತು ರಾಜ್ಯಗಳು ಒಂದು ದಿನದಲ್ಲಿ ದಾಖಲಾದ ಹೊಸ ಪ್ರಕರಣಗಳು ದೇಶದ ಒಟ್ಟು ಪ್ರಕರಣಗಳು ಶೇ 75ರಷ್ಟಿದೆ ಎಂದು ಆರೋಗ್ಯ ಸಚಿವಾಲಯವು ಹೇಳಿದೆ. ದೇಶದಲ್ಲಿ ನೀಡಲಾಗುವ ಕೊವಿಡ್ 19 ಲಸಿಕೆ ಪ್ರಮಾಣವು 13.53 ಕೋಟಿ ದಾಟಿದೆ. ಕಳೆದ 24 ಗಂಟೆಗಳಲ್ಲಿ 30 ಲಕ್ಷಕ್ಕೂ ಹೆಚ್ಚು ಲಸಿಕೆಗಳನ್ನು ನೀಡಲಾಗಿದೆ. ಏಪ್ರಿಲ್ 22 ರವರೆಗೆ 274,445,653 ಮಾದರಿಗಳನ್ನು ಪರೀಕ್ಷಿಸಲಾಗಿದ್ದು, ಗುರುವಾರ 1,740,550 ಮಾದರಿಗಳನ್ನು ಪರೀಕ್ಷಿಸಲಾಗಿದೆ.