ನವದೆಹಲಿ, ಫೆ. 23: ಜನವರಿ 26ರಂದು ದೆಹಲಿ ರೈತರ ಟ್ರ್ಯಾಕ್ಟರ್ ರ್ಯಾಲಿ ವೇಳೆ ನಡೆದ ವಿಧ್ವಂಸಕ ಕೃತ್ಯದ ರುವಾರಿ ಎಂದು ಗುರುತಿಸಲಾಗಿರುವ ದೀಪ್ ಸಿಧುಗೆ ದೆಹಲಿ ನ್ಯಾಯಾಲಯ ಇಂದು 14 ದಿನಗಳ ನ್ಯಾಯಾಂಗ ಬಂಧನ ವಿಧಿಸಿ ತೀರ್ಪು ನೀಡಿದೆ. ಕೇಂದ್ರ ಸರ್ಕಾರದ ಕೃಷಿ ಕಾಯ್ದೆಯನ್ನು ವಿರೋಧಿಸಿ ದೇಶದ ರೈತರು ಕಳೆದ 91 ದಿನಗಳಿಂದ ದೆಹಲಿಯಲ್ಲಿ ಹೋರಾಟದಲ್ಲಿ ತೊಡಗಿದ್ದಾರೆ. ಈ ನಡುವೆ ಕಳೆದ ಜನವರಿ 26 ರಂದು ರೈತರು ದೆಹಲಿಯಲ್ಲಿ ಟ್ರ್ಯಾಕ್ಟರ್ ರ್ಯಾಲಿ ಆಯೋಜಿಸಿದ್ದರು. ಆದರೆ, ಈ ವೇಳೆ ರೈತರ ಒಂದು ಗುಂಪು ಕೆಂಪುಕೋಟೆಗೆ ಮುತ್ತಿಗೆ ಹಾಕಿ ಕೋಟೆಯನ್ನು ವಶಪಡಿಸಿಕೊಂಡಿತ್ತು. ಈ ವೇಳೆ ನಡೆದ ಘರ್ಷಣೆಯಲ್ಲಿ ಓರ್ವ ಹೋರಾಟಗಾರ ಮೃತಪಟ್ಟಿದ್ದ. ಈ ಘಟನೆ ನಂತರ ಸ್ಥಳದಿಂದ ಕಾಲ್ಕಿತ್ತಿದ್ದ ದೀಪ್ ಸಿಧುವನ್ನು ನಂತರ ಬಂಧಿಸಲಾಗಿತ್ತು.
ಅಸಲಿಗೆ ಸ್ಥಳದಿಂದ ಕಾಲ್ಕಿತ್ತಿದ್ದ ದೀಪ್ ಸಿಧು ತಲೆಮರೆಸಿಕೊಂಡಿದ್ದ. ಈತನ ಕುರಿತು ಮಾಹಿತಿ ನೀಡಿದವರಿಗೆ ದೆಹಲಿ ಪೊಲೀಸರು 1 ಲಕ್ಷ ಬಹುಮಾನ ಘೋಷಿಸಿದ್ದರು. ಕಳೆದ ವಾರ ಈತನನ್ನು ಬಂಧಿಸಲಾಗಿತ್ತು.
ಟ್ರ್ಯಾಕ್ಟರ್ ರ್ಯಾಲಿಯಲ್ಲಿ ಗಲಭೆ ನಡೆಸಿದ ಪ್ರಕರಣದಲ್ಲಿ ದೀಪ್ ಸಿಧುವನ್ನು ಬಂಧಿಸಿದ್ದ ದೆಹಲಿ ಪೊಲೀಸರು ಈ ಹಿಂದೆಯೇ 7 ದಿನಗಳ ಕಸ್ಟಡಿಗೆ ಪಡೆದಿದ್ದರು. ಆದರೆ, ಈ ಅವಧಿ ಇಂದು ಮುಗಿದ ಕಾರಣ ಆತನನ್ನು ಮತ್ತೆ ಮೆಟ್ರೋಪಾಲಿಟನ್ ಮ್ಯಾಜಿಸ್ಟ್ರೇಟ್ ಸಮರ್ಜೀತ್ ಕೌರ್ ಎದುರು ಹಾಜರುಪಡಿಸಲಾಗಿತ್ತು. ಈ ವೇಳೆ ನ್ಯಾಯಾಧೀಶರು ಈತನನ್ನು 14 ದಿನಗಳ ನ್ಯಾಯಾಂಗ ಬಂಧನಕ್ಕೆ ಒಳಪಡಿಸಿದ್ದಾರೆ.