ಕೈರೋ, ಮಾ.30: ಈಜಿಪ್ಟ್ನ ಸೂಯೆಜ್ ಕಾಲುವೆಯಲ್ಲಿ ಸಿಲುಕಿಕೊಂಡಿದ್ದ ದೈತ್ಯಾಕಾರದ ಕಂಟೇನರ್ ಹಡಗು, ಎವರ್ಗ್ರೀನ್ ಕಂಪೆನಿಯ ಎವರ್ ಗಿವನ್ ಅಂತೂ ಮತ್ತೆ ತೇಲುತ್ತಾ ಸಾಗಿದೆ. ಈಜಿಪ್ಷಿಯನ್ ಟಿವಿ ಮತ್ತು ಹಡಗಿನ ಟ್ರ್ಯಾಕರ್ ಎವರ್ ಗಿವನ್ ಹಡಗು ಕಾಲುವೆಯ ಮಧ್ಯದಲ್ಲಿ ಇರುವುದನ್ನು ತೋರಿಸಿವೆ. ಮರಳಿನಲ್ಲಿ ಹೂತಿದ್ದ ಈ ಬೃಹತ್ ಹಡಗನ್ನು ಟಗ್ ಬೋಟ್ ಗಳು ಹಾಗೂ ದೊಡ್ಡ ಮಟ್ಟದ ಗಾಳಿಯ ಸಹಾಯದಿಂದ ಮತ್ತೆ ಮುಂದೆ ಹೋಗುವಂತೆ ಮಾಡಲಾಗಿದೆ.
ಇದಕ್ಕೂ ಮುನ್ನ ದಿನದ ಆರಂಭದಲ್ಲಿ ಸೂಯೆಜ್ ಕಾಲುವೆ ಪ್ರಾಧಿಕಾರವು (ಎಸ್ಸಿಎ), ಎವರ್ ಗಿವನ್ ಹಡಗು ಭಾಗಶಃ ಮತ್ತೆ ತೇಲುತ್ತಿದೆ ಹಾಗೂ ಸರಿಯಾದ ದಿಕ್ಕಿನೆಡೆಗೆ ತಿರುಗಿದೆ ಎಂದು ತಿಳಿಸಿತ್ತು. ವಿಶ್ವದ ಅತ್ಯಂತ ದಟ್ಟಣೆಯ ಹಡಗುಗಳ ಮಾರ್ಗವು ಕಳೆದ ಒಂದು ವಾರದಿಂದ ತಡೆಯಾಗಿದ್ದ ಕಾರಣಕ್ಕೆ ಹಾಗತಿಕ ವ್ಯಾಪಾರ- ವಹಿವಾಟಿನ ಮೇಲೆ ಪ್ರಭಾವ ಆಗಿತ್ತು.
1312 ಅಡಿ ಉದ್ದ ಹಾಗೂ 193 ಅಡಿ ಅಗಲದ ಎವರ್ ಗಿವನ್ ಹಡಗು 2,00,000 ಟನ್ ತೂಕದ್ದು. ಪನಾಮದಲ್ಲಿ ನೋಂದಣಿ ಆಗಿರುವ ಈ ಹಡಗನ್ನು ತೈವಾನ್ ಮೂಲದ ಹಡಗು ಕಂಪೆನಿ ನಿರ್ವಹಣೆ ಮಾಡುತ್ತಿದೆ. ಎವರ್ ಗಿವನ್ ಹಡಗು ಮತ್ತೆ ತೇಲುತ್ತಿದ್ದಂತೆ ಸಂತೋಷದ ಉದ್ಗಾರಗಳು ಮತ್ತು ಸಂಭ್ರಮಾಚರಣೆಗಳು ಕಂಡುಬಂದವು. ಸೂಯೆಜ್ ಕಾಲುವೆಯಲ್ಲಿ ಈ ಹಡಗು ಸಿಕ್ಕಿಹಾಕಿಕೊಂಡ ಮೇಲೆ ಕಚ್ಚಾ ತೈಲ ಬೆಲೆಯಲ್ಲೂ ಏರಿಕೆ ಆಗಿತ್ತು. ವಾಹನೋದ್ಯಮಕ್ಕೆ ಪೆಟ್ಟು ಬೀಳಬಹುದು ಎಂಬ ಆತಂಕ ಎದುರಾಗಿತ್ತು.