ಸುಯೇಜ್ ಕಾಲುವೆ ಯಲ್ಲಿ ಸಿಲುಕಿದ್ದ ದೈತ್ಯ ಹಡಗು

ಕೈರೋ, ಮಾ.30: ಈಜಿಪ್ಟ್​ನ ಸೂಯೆಜ್ ಕಾಲುವೆಯಲ್ಲಿ ಸಿಲುಕಿಕೊಂಡಿದ್ದ ದೈತ್ಯಾಕಾರದ ಕಂಟೇನರ್ ಹಡಗು, ಎವರ್​ಗ್ರೀನ್ ಕಂಪೆನಿಯ ಎವರ್ ಗಿವನ್ ಅಂತೂ ಮತ್ತೆ ತೇಲುತ್ತಾ ಸಾಗಿದೆ. ಈಜಿಪ್ಷಿಯನ್ ಟಿವಿ ಮತ್ತು ಹಡಗಿನ ಟ್ರ್ಯಾಕರ್ ಎವರ್ ಗಿವನ್ ಹಡಗು ಕಾಲುವೆಯ ಮಧ್ಯದಲ್ಲಿ ಇರುವುದನ್ನು ತೋರಿಸಿವೆ. ಮರಳಿನಲ್ಲಿ ಹೂತಿದ್ದ ಈ ಬೃಹತ್ ಹಡಗನ್ನು ಟಗ್ ಬೋಟ್ ಗಳು ಹಾಗೂ ದೊಡ್ಡ ಮಟ್ಟದ ಗಾಳಿಯ ಸಹಾಯದಿಂದ ಮತ್ತೆ ಮುಂದೆ ಹೋಗುವಂತೆ ಮಾಡಲಾಗಿದೆ.

ಇದಕ್ಕೂ ಮುನ್ನ ದಿನದ ಆರಂಭದಲ್ಲಿ ಸೂಯೆಜ್ ಕಾಲುವೆ ಪ್ರಾಧಿಕಾರವು (ಎಸ್​ಸಿಎ), ಎವರ್ ಗಿವನ್ ಹಡಗು ಭಾಗಶಃ ಮತ್ತೆ ತೇಲುತ್ತಿದೆ ಹಾಗೂ ಸರಿಯಾದ ದಿಕ್ಕಿನೆಡೆಗೆ ತಿರುಗಿದೆ ಎಂದು ತಿಳಿಸಿತ್ತು. ವಿಶ್ವದ ಅತ್ಯಂತ ದಟ್ಟಣೆಯ ಹಡಗುಗಳ ಮಾರ್ಗವು ಕಳೆದ ಒಂದು ವಾರದಿಂದ ತಡೆಯಾಗಿದ್ದ ಕಾರಣಕ್ಕೆ ಹಾಗತಿಕ ವ್ಯಾಪಾರ- ವಹಿವಾಟಿನ ಮೇಲೆ ಪ್ರಭಾವ ಆಗಿತ್ತು.

1312 ಅಡಿ ಉದ್ದ ಹಾಗೂ 193 ಅಡಿ ಅಗಲದ ಎವರ್ ಗಿವನ್ ಹಡಗು 2,00,000 ಟನ್ ತೂಕದ್ದು. ಪನಾಮದಲ್ಲಿ ನೋಂದಣಿ ಆಗಿರುವ ಈ ಹಡಗನ್ನು ತೈವಾನ್ ಮೂಲದ ಹಡಗು ಕಂಪೆನಿ ನಿರ್ವಹಣೆ ಮಾಡುತ್ತಿದೆ. ಎವರ್ ಗಿವನ್ ಹಡಗು ಮತ್ತೆ ತೇಲುತ್ತಿದ್ದಂತೆ ಸಂತೋಷದ ಉದ್ಗಾರಗಳು ಮತ್ತು ಸಂಭ್ರಮಾಚರಣೆಗಳು ಕಂಡುಬಂದವು. ಸೂಯೆಜ್ ಕಾಲುವೆಯಲ್ಲಿ ಈ ಹಡಗು ಸಿಕ್ಕಿಹಾಕಿಕೊಂಡ ಮೇಲೆ ಕಚ್ಚಾ ತೈಲ ಬೆಲೆಯಲ್ಲೂ ಏರಿಕೆ ಆಗಿತ್ತು. ವಾಹನೋದ್ಯಮಕ್ಕೆ ಪೆಟ್ಟು ಬೀಳಬಹುದು ಎಂಬ ಆತಂಕ ಎದುರಾಗಿತ್ತು.

Exit mobile version