ತಾರಕಕ್ಕೇರಿದೆ ಕಾಡುಪ್ರಾಣಿ-ಮಾನವ ಸಂಘರ್ಷ. ಅರಣ್ಯ ಇಲಾಖೆ ನಿರ್ಲಕ್ಷ್ಯಕ್ಕೆ ರೈತರ ಬೆಳೆ, ಪ್ರಾಣಿಗಳ ಪ್ರಾಣ ಬಲಿ!

ಕಾಡು ಪ್ರಾಣಿಗಳ ಕಾಟ. | Clash between human and wild animals in Vijayanagara district.

ಇದು ವಿಜಯನಗರ ಜಿಲ್ಲೆಯ ಹಗರಿಬೊಮ್ಮನಹಳ್ಳಿ, ಕೂಡ್ಲಿಗಿ, ಸಂಡೂರು ತಾಲೂಕುಗಳಲ್ಲಿ ಮಾನವ-ಕಾಡುಪ್ರಾಣಿಗಳ ನಡುವೆ ತಾರಕಕ್ಕೇರಿರುವ ಸಂಘರ್ಷಕ್ಕೆ ಸಾಕ್ಷಿ.

ಜನಸಂಖ್ಯೆ ಹೆಚ್ಚುತ್ತಿದ್ದಂತೆ ಅರಣ್ಯ ಭೂಮಿಗಳ ನಾಶ, ಒತ್ತುವರಿ ಹೆಚ್ಚುತ್ತಲೇ ಇದೆ. ಪರಿಣಾಮವಾಗಿ ಅರಣ್ಯದಲ್ಲಿ ವಾಸಿಸುವ ಪ್ರಾಣಿಗಳಿಗೆ ನೆಲೆಇಲ್ಲದಂತಾಗಿದೆ. ಹಾಗಾಗಿ ಅವು ಅರಣ್ಯದಂಚಿನಲ್ಲಿರುವ ಹಳ್ಳಿಗಳ ಮೇಲೆ, ಕೃಷಿ ಭೂಮಿಗಳ ಮೇಲೆ ನಿರಂತರವಾಗಿ ದಾಳಿ ಮಾಡುತ್ತಲೇ ಇವೆ.

ಇದರ ಪರಿಣಾಮವಾಗಿ ದಿನೇ ದಿನೇ ಕಾಡುಪ್ರಾಣಿಗಳು ಹಾಗೂ ಮಾನವನ ನಡುವೆ ಸಂಘರ್ಷ ಹೆಚ್ಚುತ್ತಿದೆ. ಈ ಸಂಘರ್ಷದ ಫಲಿತಾಂಶ ಏನು ಗೊತ್ತಾ? ರೈತರ ಬೆಳೆನಾಶ. ಬೆಳೆನಾಶದಿಂದ ಕೋಪಗೊಂಡ ರೈತರಿಂದ ಕಾಡುಪ್ರಾಣಿಗಳನ್ನು ಕೊಲೆ.

ಇತ್ತೀಚಿನ ದಿನಗಳಲ್ಲಿ ವಿಜಯನಗರ ಜಿಲ್ಲೆಯ ರೈತರಿಗೆ ಕಾಡುಪ್ರಾಣಿಗಳ ಕಾಟ ಹೆಚ್ಚಿವೆ. ಕಾಡು ಹಂದಿಯಂತು ರಾತ್ರಿ ಬೆಳಗಾಗುವುದರ ಒಳಗೆ ಬೆಳೆ ನಾಶ ಮಾಡುತ್ತಿವೆ. ಚಿರತೆ, ನರಿ ಪಕ್ಷಿಗಳ ಹಾವಳಿಯೂ ಇದೆ. ಇದಕ್ಕೆ ಮುಖ್ಯ ಕಾರಣ ಅರಣ್ಯ ಸಿಬ್ಬಂದಿ ನಿರ್ಲಕ್ಷ್ಯ ಹಾಗೂ ನಿಷ್ಕ್ರಿಯತೆ. ರೈತರು ಎಷ್ಟೇ ದೂರು ಕೊಟ್ರೂ ಕೂಡ ಅರಣ್ಯ ಇಲಾಖೆ ಸಿಬ್ಬಂದಿ ತಲೆನೇ ಕೆಡಿಸಿಕೊಳ್ಳುತ್ತಿಲ್ಲ ಅನ್ನೋದು ರೈತರ ದೂರು.

ಹಗರಿಬೊಮನಹಳ್ಳಿ ತಾಲೂಕು ನಾಣ್ಯಾಪುರ ಗ್ರಾಮದಲ್ಲಿನ  ಬಹುತೇಕ ರೈತರು, ಕತ್ತಲಾದರೆ ಸಾಕು ಮನೆಗೊಬ್ಬರಂತೆ ಬೆತ್ತ ಹಾಗೂ  ಬ್ಯಾಟರಿ ಹಿಡಿದು ಹೊಲಗಳಿಗೆ ತೆರಳುತ್ತಾರೆ. ತಮ್ಮ ಜೀವದ ಹಂಗು ತೊರೆದು ಹೆಂಡರು ಮಕ್ಕಳನ್ನು ಮನೆಯಲ್ಲಿ ಬಿಟ್ಟು, ಅಡವಿಗೆ ಅಂಟಿಕೊಂಡುರುವ ತಮ್ಮ ಹೊಲ ಸೇರುತ್ತಾರೆ. ಕಾರಣ ಬಿತ್ತನೆ ಸಂದರ್ಭದಲ್ಲಿ ಕಾಡುಹಂದಿಗಳು ಹೊಲದಲ್ಲಿ ಬಿತ್ತರುವ ಕಾಳುಗಳನ್ನು ಹೆಕ್ಕಿ ಹೆಕ್ಕಿ ತಿನ್ನುತ್ತವೆ.

ಬೆಳೆ ಬಿತ್ತನೆ ಮಾಡಿದಾಗಿನಿಂದ ಫಸಲು ಕೊಯ್ಲು ಮಾಡಿ ಫಲ ಮನೆ ತಲುಪುವ ವರೆಗೂ ವನ್ಯ ಜೀವಿಗಳಿಂದ ರಕ್ಷಿಸಬೇಕಿದೆ. ಕರಡಿ ಹಾಗೂ ಚಿರತೆ ಕಾಣಿಸಿಕೊಳ್ಳುವ ಅರಣ್ಯದಂಚಿನ ಹೊಲದ ರೈತರು ತಮ್ಮ ಪ್ರಾಣದ ಹಂಗು ತೊರೆದು ತಾವು ಬಿತ್ತಿರುವ ಕಾಳನ್ನು ಕಾಯಬೇಕಿದೆ.

ಸರ್ಕಾರ ವನ್ಯ ಜೀವಿಗಳ ರಕ್ಷಣೆಗೆ ಹತ್ತಾರು ಯೋಜನೆಗಳನ್ನ ಜಾರಿಗೆ ತಂದಿದೆ. ಆದ್ರೆ ಅವೆಲ್ಲಾ ಕೇವಲ ಲೆಕ್ಕ ಪತ್ರಕ್ಕೆ ಸೀಮಿತವಾಗಿವೆ. ಕಾಡುಪ್ರಾಣಿಗಳ ದಾಳಿಯಿಂದ ಬೆಳೆ ನಾಶವಾದ್ರೆ ಸರ್ಕಾರ ಪರಿಹಾರ ಕೊಡಬೇಕು. ಆದ್ರೆ ಯಾವ ಪರಿಹಾರ ಧನವೂ ರೈತರಿಗೆ ತಲುಪುತ್ತಿಲ್ಲ ಅನ್ನೋದು ರೈತ ಮುಖಂಡರ ದೂರು.

ಅರಣ್ಯ ಇಲಾಖೆ ಇದೇ ರೀತಿ ತನ್ನ ನಿರ್ಲಕ್ಷ್ಯ ಮುಂದುವರೆಸಿದ್ರೆ ಅರಣ್ಯ ಸಂಪತ್ತಿನ ನಾಶ ಖಚಿತ. ಹಾಗಾಗಿ ವಿಜಯನಗರ ಉಸ್ತುವಾರಿ ಸಚಿವರಾದ ಆನಂದ ಸಿಂಗ್ ಹಾಗೂ ಜಿಲ್ಲಾಧಿಕಾರಿಗಳು ತಕ್ಷಣ ಎಚ್ಚೆತ್ತುಕೊಂಡು ಈ ಸಮಸ್ಯೆಗೆ ಶಾಶ್ವತ ಸೂಚಿಸಲಿ. ರೈತರ ಸಮಸ್ಯೆ ಪರಿಹರಿಸಿ, ಕಾಡುಪ್ರಾಣಿಗಳನ್ನು ರಕ್ಷಿಸಿ.

ಕೂಡ್ಲಿಗಿಯಿಂದ ವಿ.ಜಿ.ವೃಷಭೇಂದ್ರ ಸಿಟಿಜನ್‌ ಜರ್ನಲಿಸ್ಟ್‌, ವಿಜಯಟೈಮ್ಸ್‌

Exit mobile version