ಕರ್ನಾಟಕ ಸೇರಿದಂತೆ 17 ರಾಜ್ಯ ಹಾಗೂ ಕೇಂದ್ರಾಡಳಿತ ಪ್ರದೇಶಗಳಲ್ಲಿ ಶೇ 25ರಷ್ಟು ಮಂದಿಗೆ ಲಸಿಕೆ

ನವದೆಹಲಿ,ಜೂ.25: ಕರ್ನಾಟಕ ಸೇರಿದಂತೆ 17 ರಾಜ್ಯ ಹಾಗೂ ಕೇಂದ್ರಾಡಳಿತ ಪ್ರದೇಶಗಳಲ್ಲಿ ಒಟ್ಟು ಜನ ಸಂಖ್ಯೆಯ ಶೇ 25ರಷ್ಟು ಮಂದಿಗೆ ಕನಿಷ್ಠ ಒಂದು ಡೋಸ್ ಕೋವಿಡ್ ಲಸಿಕೆ ನೀಡಲಾಗಿದೆ.

ಗುರುವಾರ ದೇಶದಾದ್ಯಂತ ಸುಮಾರು 60 ಲಕ್ಷ ಡೋಸ್ ಲಸಿಕೆ ನೀಡಲಾಗಿದೆ. 18 ವರ್ಷ ಮೇಲ್ಪಟ್ಟವರಿಗೂ ಉಚಿತ ಲಸಿಕೆ ನೀಡುವ ಅಭಿಯಾನದ ಮೊದಲ ದಿನವಾದ ಸೋಮವಾರ ದೇಶದಲ್ಲಿ ದಾಖಲೆಯ ಸುಮಾರು 90 ಲಕ್ಷ ಡೋಸ್ ಲಸಿಕೆ ನೀಡಲಾಗಿತ್ತು. ಆ ದಿನಕ್ಕೆ ಹೋಲಿಸಿದರೆ ಮುಂದಿನ ಮೂರು ದಿನಗಳಲ್ಲಿ ಲಸಿಕೆ ನೀಡಿಕೆ ಪ್ರಮಾಣ ಶೇ 30ಕ್ಕೂ ಹೆಚ್ಚು ಕಡಿಮೆಯಾಗಿದೆ. ಆದರೆ, ಒಟ್ಟಾರೆಯಾಗಿ ಲಸಿಕೆ ನೀಡಿಕೆ ಪ್ರಮಾಣ ಹೆಚ್ಚಾಗಿದ್ದು ಕರ್ನಾಟಕ, ಗುಜರಾತ್ ಸೇರಿದಂತೆ 17 ರಾಜ್ಯಗಳು ಕಾಲುಭಾಗ ಜನರಿಗೆ ಈಗಾಗಲೇ ಕನಿಷ್ಠ ಒಂದು ಡೋಸ್ ಲಸಿಕೆ ನೀಡಿವೆ.

ಉತ್ತರ ಪ್ರದೇಶ ಮತ್ತು ಬಿಹಾರ ಲಸಿಕೆ ನೀಡಿಕೆಯಲ್ಲಿ ತೀರಾ ಹಿಂದುಳಿದಿವೆ. ಈ ರಾಜ್ಯಗಳಲ್ಲಿ ಶೇ 10ರಷ್ಟು ಜನರಿಗೆ ಮಾತ್ರವೇ ಲಸಿಕೆ ನೀಡಲಾಗಿದೆ. ಲಸಿಕೆ ನೀಡಿಕೆಯ ರಾಷ್ಟ್ರೀಯ ಸರಾಸರಿ ಶೇ 20ಕ್ಕಿಂತ ಕೆಳಗಿದೆ.

ದೇಶದಲ್ಲಿ ಈವರೆಗೆ ಒಟ್ಟು 31 ಕೋಟಿ ಡೋಸ್ ಲಸಿಕೆ ನೀಡಲಾಗಿದೆ. ಶೇ 18ರಷ್ಟು ಮಂದಿ ಮೊದಲ ಡೋಸ್ ಪಡೆದಿದ್ದರೆ, ಶೇ 4ರಷ್ಟು ಮಂದಿ ಎರಡನೇ ಡೋಸ್ ಪಡೆದಿದ್ದಾರೆ.

ಗುರುವಾರದ ಮಾಹಿತಿ ಪ್ರಕಾರ, 1.9 ಕೋಟಿ ಡೋಸ್ ಲಸಿಕೆ ರಾಜ್ಯಗಳಿ ಬಳಿ ಲಭ್ಯವಿವೆ. ಮುಂದಿನ ಮೂರು ದಿನಗಳ ಒಳಗಾಗಿ 21 ಲಕ್ಷ ಡೋಸ್ ಲಸಿಕೆಗಳನ್ನು ರಾಜ್ಯಗಳಿಗೆ ಪೂರೈಕೆ ಮಾಡಲಾಗುವುದು ಎಂದು ಕೇಂದ್ರ ಆರೋಗ್ಯ ಸಚಿವಾಲಯ ತಿಳಿಸಿದೆ.

Exit mobile version