ರಾಜ್ಯಸಭೆಯಲ್ಲಿ ‘ಕೃಷಿ ಕಾನೂನು’ ಕೋಲಾಹಲ; ವಿಪಕ್ಷಗಳಿಂದ ಸಭಾತ್ಯಾಗ,

ನವದೆಹಲಿ, ಫೆ. 02: ಸಂಸತ್ ಕಲಾಪದಲ್ಲಿ ಕೇಂದ್ರ ಸರ್ಕಾರದ ವಿವಾದಿತ ‘ಕೃಷಿ ಕಾನೂನು’. ಮತ್ತು ರೈತರ ಪ್ರತಿಭಟನೆ ವಿಚಾರಕ್ಕೆ ಸಂಬಂಧಿಸಿದಂತೆ ಸರ್ಕಾರದ ನಡೆಯನ್ನು ವಿರೋಧಿಸಿ ರಾಜ್ಯಸಭೆಯಲ್ಲಿ ವಿಪಕ್ಷಗಳು ಸಭಾತ್ಯಾಗ ಮಾಡಿದವು. ರೈತರ ಪ್ರತಿಭಟನೆ ಕುರಿತು ಚರ್ಚಿಸಲು ಅವಕಾಶ ನೀಡುವಂತೆ ಒತ್ತಾಯಿಸಿ ವಿರೋಧ ಪಕ್ಷಗಳು ಗದ್ದಲ, ಕೋಲಾಹಲ ವೆಬ್ಬಿಸಿದ್ದರಿಂದ ರಾಜ್ಯಸಭೆಯ ಕಲಾಪವನ್ನು ನಾಳೆಗೆ ಮುಂದೂಡಲಾಗಿದೆ.

ರಾಷ್ಟ್ರಪತಿಗಳ ಭಾಷಣದಲ್ಲಿ ರೈತರ ಹೋರಾಟದ ಉಲ್ಲೇಖದ ಕುರಿತು ವಿಪಕ್ಷ ನಾಯಕರು ಪ್ರತಿಭಟನೆ ನಡೆಸಿದರು. ಈ ವೇಳೆ ಸಭಾಧ್ಯಕ್ಷರಾದ ವೆಂಕಯ್ಯನಾಯ್ಡು ಅವರು ಸದಸ್ಯರನ್ನು ಸಮಾಧಾನಗೊಳಿಸುವ ಪ್ರಯತ್ನ ಮಾಡಿದರಾದರೂ, ಇದಕ್ಕೆ ಬೆಲೆ ನೀಡದ ಕಾಂಗ್ರೆ,ಸ್ ಪಕ್ಷದ ಸದಸ್ಯರು ಸರ್ಕಾರದ ವಿರುದ್ಧ ಘೋಷಣೆ ಕೂಗಿ ಕಲಾಪಕ್ಕೆ ಅಡ್ಡಿಪಡಿಸಿದರು.

ಈ ವೇಳೆ ಸದಸ್ಯರನ್ನು ಉದ್ದೇಶಿಸಿ ಮಾತನಾಡಿ ವೆಂಕಯ್ಯ ನಾಯ್ಡು ಅವರು, ರಾಷ್ಟ್ರಪತಿಗಳು ತಮ್ಮ ಭಾಷಣದಲ್ಲಿ ರೈತರ ಆಂದೋಲನವನ್ನು ಉಲ್ಲೇಖಿಸಿದ್ದಾರೆ. ಚರ್ಚೆ ಇಂದು ಪ್ರಾರಂಭವಾಗಬೇಕೆಂದು ನಾನು ಬಯಸಿದ್ದೆ. ಆದರೆ ಚರ್ಚೆಯು ಮೊದಲು ಲೋಕಸಭೆಯಲ್ಲಿ ಪ್ರಾರಂಭವಾಗುತ್ತದೆ ಎಂದು ನನಗೆ ತಿಳಿಸಲಾಯಿತು. ಇದನ್ನು ಗಮನದಲ್ಲಿಟ್ಟುಕೊಂಡು ನಾಳೆ ರಾಷ್ಟ್ರಪತಿಗಳ ಭಾಷಣ ಕುರಿತು ಚರ್ಚಿಸಲು ನಾವು ಒಪ್ಪಿದ್ದೇವೆ ಎಂದು ಹೇಳಿದರು.

ಅಂತೆಯೇ ಕೃಷಿ ಕಾನೂನುಗಳ ಕುರಿತು ಸದನದಲ್ಲಿ ಚರ್ಚೆಗೆ ಅವಕಾಶ ಇದೆ ಎಂದು ನಾನು ಮತ್ತೆ ಮತ್ತೆ ಹೇಳುತ್ತಿದ್ದೇನೆ. ಈ ಕುರಿತು ಸದನದಲ್ಲಿ ಯಾವುದೇ ಚರ್ಚೆ ನಡೆದಿಲ್ಲ ಎಂಬುದು ತಪ್ಪು ಅಭಿಪ್ರಾಯ. ಮತದಾನಕ್ಕೆ ಸಂಬಂಧಿಸಿದಂತೆ, ಜನರು ತಮ್ಮದೇ ಆದ ವಾದಗಳನ್ನು ಹೊಂದಿರಬಹುದು ಆದರೆ ಪ್ರತಿ ಪಕ್ಷವು ತಮ್ಮ ಭಾಗವನ್ನು ಪೂರ್ಣಗೊಳಿಸಿ ಸಲಹೆಗಳನ್ನು ನೀಡಿತ್ತು. ಆದಾಗ್ಯೂ ಸದಸ್ಯರ ಪ್ರತಿಭಟನೆ ಸರಿಯಲ್ಲ ಎಂದು ಹೇಳಿದರು.

ಪ್ರತಿಪಕ್ಷಗಳ ಸಭಾತ್ಯಾಗ:

ಇನ್ನು ಅತ್ತ ಸಭಾಧ್ಯಕ್ಷರು ಸದಸ್ಯರನ್ನು ಉದ್ದೇಶಿಸಿ ಮಾತನಾಡುತ್ತಿದ್ದಂತೆಯೇ ಇತ್ತ ಕಾಂಗ್ರೆಸ್ ಸೇರಿದಂತೆ ವಿಪಕ್ಷ ಸದಸ್ಯರು ಸಭಾತ್ಯಾಗ ಮಾಡಿದರು. ಕೆಲ ಸದಸ್ಯರಂತೂ ಸಭಾಧ್ಯಕ್ಷ ಮಾತಿಗೂ ಜಗ್ಗದೇ ಪ್ರತಿಭಟನೆ ಮುಂದುವರೆಸಿದ ಹಿನ್ನಲೆಯಲ್ಲಿ ವೆಂಕಯ್ಯನಾಯ್ಡು ಅವರು 2 ಬಾರಿ ಸದನವನ್ನು ಮುಂದೂಡಿದರು ಗದ್ದಲ, ಕೋಲಾಹಲ ಹೆಚ್ಚಾದಾಗ ಸಭಾಪತಿಯವರು ಕಲಾಪವನ್ನು 10.30ರವರೆಗೆ ಮುಂದೂಡಿದರು. ಬಳಿಕ ಸದನ ಸಮಾವೇಶಗೊಂಡಾಗಲೂ ವಿಪಕ್ಷ ಸದಸ್ಯರು ಅದೇ ಬೇಡಿಕೆಯನ್ನು ಮುಂದಿಟ್ಟು ಗದ್ದಲವೆಬ್ಬಿಸಿದ್ದರಿಂದ ಮತ್ತೆ 11.30ರವರೆಗೆ ಕಲಾಪವನ್ನು ಸಭಾಪತಿ ಮುಂದೂಡಿದರು. ಮತ್ತೆ ಕಲಾಪ ಸೇರಿದಾಗಲೂ ಅದೇ ಪರಿಸ್ಥಿತಿ ಮುಂದುವರಿದಿದ್ದರಿಂದಾಗಿ ಕಲಾಪವನ್ನು ನಾಳೆಗೆ ಮುಂದೂಡಲಾಯಿತು.

Exit mobile version